Site icon Vistara News

Elephant Attack: ಹಸು ಮೇಯಿಸಲು ಹೋದ ವ್ಯಕ್ತಿ ಮೇಲೆ ಕಾಡಾನೆ ದಾಳಿ; ಸ್ಥಳದಲ್ಲೇ ಮೃತ್ಯು

Elephant-Attack

ಕೊಡಗು: ರಾಜ್ಯದ ಹಲವು ಕಡೆ ಕಾಡಾನೆಗಳ ದಾಳಿ (Elephant Attack) ಹೆಚ್ಚುತ್ತಲಿದ್ದು, ಕಾಡಿನಿಂದ ನಾಡಿಗೆ ಬಂದು ಸಾವು-ನೋವುಗಳಿಗೆ ಕಾರಣವಾಗುತ್ತಿವೆ. ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುತ್ತಿವೆ. ಈಗ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಪೊನ್ನಂಪೇಟೆ ತಾಲೂಕಿನ ತಿತಿಮತಿ ಸಮೀಪದ ನೋಕ್ಯ ಗ್ರಾಮದ ಎಡಪಾರೆಯಲ್ಲಿ ನಡೆದಿದೆ.

ಮಲ್ಲಂಗಡ ಸನ್ನಿ ಚಂಗಪ್ಪ (64) ಮೃತ ದುರ್ದೈವಿ. ಸನ್ನಿ ಚಂಗಪ್ಪನವರು ಮನೆ ಸಮೀಪದ ಗದ್ದೆಗೆ ಹಸುವನ್ನು ಮೇಯಿಸಲು ಹೋಗಿದ್ದರು. ಈ ವೇಳೆ ಕಾಡಾನೆ ದಿಢೀರ್ ದಾಳಿ ನಡೆಸಿದೆ. ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಸನ್ನಿ ಚಂಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಗೋಣಿಕೊಪ್ಪ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.

ಇದನ್ನೂ ಓದಿ: Bear Attack: ತೋಟದಲ್ಲಿ ಕಟ್ಟಿಗೆ ತರಲು ಹೋದ ವೃದ್ಧನ ಮೇಲೆ ಕರಡಿ ದಾಳಿ; ಬೆಚ್ಚಿ ಬಿದ್ದ ಗ್ರಾಮಸ್ಥರು

ಕಾಡಿನಿಂದ ನಾಡಿಗೆ ಕಾಡು ಪ್ರಾಣಿಗಳು ಬರುತ್ತಿದ್ದು, ಜನರ ನಿದ್ದೆಗೆಡಿಸಿದೆ. ಈ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಾಗೂ ಮೃತ ಸಂಬಂಧಿಕರು ಆಕ್ರೋಶವನ್ನು ಹೊರಹಾಕಿದ್ದಾರೆ. ನಿತ್ಯವೂ ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿರುವ ನಮಗೆ ಶಾಶ್ವತ ಪರಿಹಾರ ಒದಗಿಸಿ ಎಂದು ಒತ್ತಾಯ ಮಾಡಿದ್ದಾರೆ. ಈ ಹಿಂದೆ ಕೊಡಗಿನಲ್ಲಿ ಹುಲಿ ಭೀತಿ ಹೆಚ್ಚಾಗಿತ್ತು, ಇದೀಗ ಕಾಡಾನೆ ದಾಳಿಯು ಆತಂಕವನ್ನು ಹೆಚ್ಚಿಸಿದೆ.

Exit mobile version