ಹಾಸನ/ಆನೇಕಲ್: ಮಾನವ-ಕಾಡುಪ್ರಾಣಿಗಳ ಸಂಘರ್ಷ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಕಾಡಿನಿಂದ ಅನೇಕ ಪ್ರಾಣಿಗಳು ನಾಡಿನತ್ತ ಬರುತ್ತಿದ್ದು, ಜನ-ಜಾನುವಾರುಗಳ ಮೇಲೆ ದಾಳಿ ನಡೆಸಿ ಆತಂಕವನ್ನು ಹುಟ್ಟುಹಾಕುತ್ತಿವೆ. ಇತ್ತ ಗಜಪಡೆಗಳೂ ಸಹ ರಾಜ್ಯದ ಅಲ್ಲಲ್ಲಿ ದಾಳಿ (Elephant Attack) ನಡೆಸುವ ಮೂಲಕ ಸಾಕಷ್ಟು ಬೆಳೆ ಹಾಗೂ ಪ್ರಾಣ ಹಾನಿಗಳಿಗೆ ಕಾರಣವಾಗುತ್ತಿವೆ. ಅದರಲ್ಲೂ ಹಾಸನದ ಸುತ್ತಮುತ್ತ ಭಾಗಗಳಲ್ಲಿ ಕಾಡಾನೆಗಳ ಹಿಂಡೇ ಪ್ರತ್ಯಕ್ಷವಾಗಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿವೆ.
ಸಕಲೇಶಪುರ ತಾಲೂಕಿನ ಶಿಡಿಗಳಲೆ ಗ್ರಾಮದಲ್ಲಿ ಆನೆಗಳ ಗುಂಪು ತೋಟದಲ್ಲಿ ಕಾಣಿಸಿಕೊಂಡಿವೆ. 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿವೆ. ಅಪಾರ ಪ್ರಮಾಣದಲ್ಲಿ ಬೆಳೆದಿದ್ದ ಕಾಫಿ, ಭತ್ತ ಧ್ವಂಸ ಮಾಡಿವೆ. ಗ್ರಾಮದ ಜಗದೀಶ್ ಮಲ್ಲಣ್ಣ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು ದಾಂಧಲೆ ನಡೆಸಿವೆ.
ಗೂಡಂಗಡಿಯಲ್ಲಿ ಟೀ ಕುಡಿದು ವಾಪಸ್
ತೋಟದ ಕೆಲಸಕ್ಕೆ ಬರುವವರು ಕಾಡಾನೆಗಳ ದಾಳಿಗೆ ಬೆಚ್ಚಿ ಬಿದ್ದು ವಾಪಸ್ ಆಗುತ್ತಿದ್ದಾರೆ. ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅರಣ್ಯ ಇಲಾಖೆಯವರು ನೆಪ ಮಾತ್ರಕ್ಕೆ ಬಂದು ಗೂಡಂಗಡಿಯಲ್ಲಿ ಟೀ-ಕಾಫಿ ಕುಡಿದು ವಾಪಸ್ ಹೋಗುತ್ತಿದ್ದರೆಯೇ ವಿನಃ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ. ಅವರಿಗೆ ಕೊಡುವ ಅರ್ಧ ಸಂಬಳ ನಮಗೆ ಕೊಡಿ, ನಾವು ಕಾದು ಕಾಡಾನೆಗಳನ್ನು ದೂರ ಓಡಿಸಿ ಬೆಳೆ ಕಾಪಾಡಿಕೊಳ್ಳುತ್ತೇವೆ ಎಂದು ಆರೋಪಿಸಿ ರೈತ ಜಗದೀಶ್ ಮಲ್ಲಣ್ಣ ಅಸಮಾಧಾನ ಹೊರಹಾಕಿದ್ದಾರೆ.
ಸ್ಥಳೀಯ ಶಾಸಕರು ಅಲ್ಲಿ, ಇಲ್ಲಿ ಗುದ್ದಲಿ ಪೂಜೆ ಮಾಡಿಕೊಂಡು ಓಡಾಡಿಕೊಂಡಿದ್ದಾರೆ. ಶಾಸಕರ ಪತ್ನಿ ಜಿಲ್ಲಾ ಪಂಚಾಯತ್ ಮೆಂಬರ್ ಆಗಿದ್ದು, ಮಗನನ್ನು ತಾ.ಪಂ. ಮೆಂಬರ್ ಮಾಡಿಕೊಳ್ಳಲಿ. ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು ನಮ್ಮ ಊರಿನವರೇ ಆದರೂ ಈ ಕ್ಷಣಕ್ಕೂ ಬಂದು ಸಮಸ್ಯೆ ಬಗ್ಗೆ ಕೇಳಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದು, ಬೆಂಗಳೂರು, ಬಳ್ಳಾರಿ ಸಮಾವೇಶ ಮಾಡುತ್ತಿದ್ದಾರೆ. ಇಲ್ಲಿನ ಸಣ್ಣ ರೈತರ ಪಾಡು ಏನಾಗಬೇಕೆಂದು ಪ್ರಶ್ನೆ ಮಾಡಿದ್ದಾರೆ. ವರ್ಷ ಪೂರ್ತಿ ಕೆಲಸ ಮಾಡಿ ಭತ್ತ ಬೆಳೆದಿದ್ದೇವೆ ಎಲ್ಲವನ್ನೂ ಕಾಡಾನೆ ನಾಶ ಮಾಡಿವೆ. ಕೂಡಲೇ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದ್ದರು.
ಆನೇಕಲ್ ಗಡಿಭಾಗದಲ್ಲೂ ಕಾಡಾನೆ ಹಾವಳಿ
ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಹಿಂಡು ಹಿಂಡಾಗಿ ಕಾಡಾನೆಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಕಾಡಂಚಿನ ಗ್ರಾಮಗಳಾದ ತೆಲಗರಹಳ್ಳಿ, ಕಾಳನಾಯಕನಹಳ್ಳಿ, ವಣಕನಹಳ್ಳಿ ಭಾಗದಲ್ಲಿ 20ಕ್ಕೂ ಹೆಚ್ಚು ಕಾಡಾನೆ ಪ್ರತ್ಯಕ್ಷವಾಗಿದ್ದು, ಕಳೆದೆರಡು ದಿನಗಳಿಂದ ಬೀಡು ಬಿಟ್ಟಿವೆ. ಕಾಡಾನೆಗಳು ರಸ್ತೆ ದಾಟಿ ಹೋಗುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ | Leopard Attack | ಕಬ್ಬಿನ ಗದ್ದೆಗೆ ನೀರು ಹಾಯಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ; ಪ್ರಾಣಾಪಾಯದಿಂದ ಪಾರು