Site icon Vistara News

Elephant Attack: ಸಕಲೇಶಪುರದಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆ ಹಿಂಡು: ಓಡು ಓಡು ಎಂದ ಟಾಸ್ಕ್‌ಫೋರ್ಸ್‌ ಸಿಬ್ಬಂದಿ; ಎದ್ದು ಬಿದ್ದು ಓಡಿದ ಕಾರು ಚಾಲಕ

Wild elephant attack in Sakleshpur

ಹಾಸನ/ಚಾಮರಾಜನಗರ: ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರುತ್ತಿದ್ದು, ನಿಯಂತ್ರಣಕ್ಕಾಗಿ ಕೂಗು ಕೇಳಿಬರುತ್ತಿದೆ. ಈ ಹಿನ್ನೆಲೆ ಟಾಸ್ಕ್‌ಫೋರ್ಸ್‌ ನಿರಂತರ ನಿಗಾವನ್ನೂ ವಹಿಸುತ್ತಿದೆ. ಈ ಮಧ್ಯೆ ಸಕಲೇಶಪುರ ತಾಲೂಕಿನ ಕಿರಿಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾರು ಚಾಲಕರೊಬ್ಬರನ್ನು ಅಟ್ಟಾಡಿಸಿಕೊಂಡು ಓಡಿಸಿಕೊಂಡು (Elephant Attack) ಹೋದ ಪ್ರಕರಣ ಬೆಳಕಿಗೆ ಬಂದಿದೆ.

ತಾಲೂಕಿನ ಕಿರಿಹಳ್ಳಿ ಗ್ರಾಮದ ರಸ್ತೆಯಲ್ಲಿ ಕಾಡಾನೆಗಳ ಹಿಂಡು ದಾಟುತ್ತಿದ್ದವು. ಇದನ್ನು ಕಂಡ ಕಾರು ಚಾಲಕ ದೂರದಲ್ಲಿಯೇ ನಿಲ್ಲಿಸಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ಕಾರಿನತ್ತ ಕಾಡಾನೆಗಳು ಹೊರಟು. ಘೀಳಿಡುತ್ತಾ ಸಾಗಿವೆ. ಇದೇ ವೇಳೆ ಕಾಡಾನೆಗಳ ಚಲನವಲನಗಳನ್ನು ಗಮನಿಸುತ್ತಾ ಬಂದಿದ್ದ ಟಾಸ್ಕ್‌ಫೋರ್ಸ್‌ ಸಿಬ್ಬಂದಿ ಮೈಕ್‌ ಮೂಲಕ ಚಾಲಕನಿಗೆ ಓಡು.. ಓಡು ಎಂದು ಕೂಗಿದ್ದಾರೆ.

ಇದನ್ನು ಕೇಳುತ್ತಿದ್ದಂತೆ ಕಾರು ಚಾಲಕ ಎದ್ದೆನೋ ಬಿದ್ದೆನೋ ಎಂಬಂತೆ ಓಡಿದ್ದಾರೆ. ಇಷ್ಟಾದರೂ ಸ್ವಲ್ಪ ದೂರ ಕಾಡಾನೆಗಳು ಆತನನ್ನು ಓಡಿಸಿಕೊಂಡು ಹೋಗಿವೆ. ಕೊನೆಗೂ ಅವರು ಬಚಾವ್‌ ಆಗುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Rashmika Mandanna: ಅಭಿಮಾನಿಗೇ ಪ್ರಪೋಸ್‌ ಮಾಡಿದ ರಶ್ಮಿಕಾ ಮಂದಣ್ಣ! ವೈರಲ್‌ ಆಯ್ತು ವಿಡಿಯೊ

Wild elephant attack in Sakleshpur

ಕಾಫಿ ತೋಟದಲ್ಲಿ ದಾಂಧಲೆ

ಸಕಲೇಶಪುರ ತಾಲೂಕಿನ ಹೊಸಮಠ ಗ್ರಾಮದಲ್ಲಿ ಹಿಂಡು ಹಿಂಡಾಗಿ ಗಜಪಡೆಗಳು ದಾಳಿ ನಡೆಸಿದ್ದು, ಮನೆ ಸಮೀಪವೇ ಬರುತ್ತಿವೆ. ಈ ವೇಳೆ ಒಂಟಿ ಸಲಗವೊಂದು ಬೈಕ್‌ವೊಂದನ್ನು ಜಖಂಗೊಳಿಸಿದೆ. ಕಾಫಿ ತೋಟದಲ್ಲಿ ಬೆಳಂಬೆಳಗ್ಗೆ ಕಾಡಾನೆಗಳು ಓಡಾಡಿವೆ. ಇದರಿಂದ ಸ್ಥಳೀಯ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

Wild elephant attack in Sakleshpur

ಟಾಸ್ಕ್‌ಫೋರ್ಸ್‌ ಸಿಬ್ಬಂದಿ ಸಹ ಕಾರ್ಯಾಚರಣೆಯಲ್ಲಿ ತೊಡಗಿದ್ದು, ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ, ಕಾಡಾನೆಗಳನ್ನು ಬೆನ್ನಟ್ಟಿ ಆನೆಗಳಿಂದ ಜೀವ ಹಾನಿಯಾಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

Wild elephant attack in Sakleshpur

ಚಾಮರಾಜನಗರ ಗಡಿಯಲ್ಲಿ ಉಪಟಳ

ಚಾಮರಾಜನಗರ ಗಡಿ ಜಿಲ್ಲೆಯಲ್ಲಿ ಕಾಡಾನೆ ಉಪಟಳ ಮುಂದುವರಿದಿದೆ. ಮತ್ತೆ ಕಾಡಂಚಿನ ಜಮೀನುಗಳಿಗೆ ಲಗ್ಗೆ ಇಡುತ್ತಿವೆ. ಇದು ಸ್ಥಳೀಯರನ್ನು ಆತಂಕಕ್ಕೆ ದೂಡಿದೆ. ಕಳೆದ ಒಂದು ತಿಂಗಳಿಂದಲೂ ನಿರಂತರವಾಗಿ ಅಲ್ಲಲ್ಲಿ ದಾಳಿ ನಡೆಸುತ್ತಲೇ ಇವೆ. ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದ ಕಾಡಂಚಿನಲ್ಲಿ ಈಗ ಗುಂಪು ಗುಂಪಾಗಿ ಕಾಡಾನೆಗಳು ಕಾಣಿಸಿಕೊಂಡಿವೆ.

ಚಾಮರಾಜನಗರ ತಾಲೂಕಿನ ಹೊನ್ನಹಳ್ಳಿ ಹುಂಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಯಗೊಂಡಿದ್ದು, ಹೊರಗೆ ಹೋಗಲು ಆತಂಕಪಡುತ್ತಿದ್ದಾರೆ. ಆನೆಗಳ ಹಿಂಡನ್ನು ಓಡಿಸುವ ವೇಳೆ ಫಾರೆಸ್ಟ್ ವಾಚರ್ ಒಬ್ಬರು ಈಚೆಗೆ ಮೃತಪಟ್ಟಿದ್ದರು.

ಇದನ್ನೂ ಓದಿ: Karnataka Election : ಜೆಡಿಎಸ್‌ ನಾಯಕ ವೆಂಕಟಶಿವಾ ರೆಡ್ಡಿ ಎಲೆಕ್ಷನ್‌ಗೆ 5 ಕೋಟಿ ಕೊಡ್ತಾರಾ ಡಾ. ಸುಧಾಕರ್‌? ಏನಿದು ಒಳಒಪ್ಪಂದದ ಆಡಿಯೊ?

ಕಾಡಂಚಿನ ಜಮೀನುಗಳಲ್ಲಿ ಬಾಳೆ, ತೆಂಗು ಸೇರಿದಂತೆ ಇತರ ಬೆಳೆಗಳನ್ನು ನಾಶ ಮಾಡುತ್ತಿದ್ದು, ಶೀಘ್ರವೇ ಅವುಗಳನ್ನು ಸೆರೆ ಹಿಡಿಯಬೇಕು, ಇಲ್ಲವೇ ಕಾಡಿಗೆ ಅಟ್ಟಬೇಕು ಎಂಬುದು ಸ್ಥಳೀಯ ನಾಗರಿಕರ ಆಗ್ರಹವಾಗಿದೆ.

Exit mobile version