ಹೊಸೂರು/ತಮಿಳುನಾಡು: ಇಲ್ಲಿನ ಹೊಸೂರು ಸಮೀಪದ ನಾಟ್ರಾಪಲ್ಲಿ ಬಳಿ ದನ ಮೇಯಿಸುತ್ತಿದ್ದ ದನಗಾಹಿ, ರಸ್ತೆಯಲ್ಲಿ ಸಾಗುತ್ತಿದ್ದ ಮಹಿಳೆ ಮೇಲೆ ಕಾಡಾನೆಗಳು ದಾಳಿ ಮಾಡಿ ಕೊಂದು ಹಾಕಿದ್ದವು. ಆನೆಗಳನ್ನು ಕೂಡಲೇ (Elephant attack) ಸೆರೆ ಹಿಡಿಯುವಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಸತತ ಕಾರ್ಯಾಚರಣೆ ನಡೆಸಿ ಭಾನುವಾರ (ಮೇ 21) ಕೃಷ್ಣಗಿರಿ ಸಮೀಪದ ತಿರುಪತ್ತೂರು, ವಾಣಿಯಂಬಾಡಿ ಬಳಿ ಬೀಡು ಬಿಟ್ಟಿದ್ದ ಪುಂಡ ಕಾಡಾನೆಯನ್ನು (Operation Elephant) ಸೆರೆ ಹಿಡಿಯಲಾಗಿದೆ.
ತಿಂಗಳ ಹಿಂದಷ್ಟೇ ತಮಿಳುನಾಡು ಆಂಧ್ರ ಗಡಿ ಭಾಗದಲ್ಲಿ ಕಾಡಾನೆಯು ನಾಲ್ವರ ಮೇಲೆ ದಾಳಿ ನಡೆಸಿತ್ತು. ಬಳಿಕ ತಮಿಳುನಾಡು ಗಡಿಯಲ್ಲಿ ಕಾಡಾನೆಗೆ ಇಬ್ಬರು ಬಲಿಯಾಗಿದ್ದರು. ಕಾಡಾನೆಗಳ ಉಪಟಳಕ್ಕೆ ಗಡಿ ಗ್ರಾಮ ವಾಸಿಗಳು ಕಂಗಲಾಗಿದ್ದರು. ಮಾತ್ರವಲ್ಲದೆ ಚೆನ್ನೈ ಹೆದ್ದಾರಿ ಆಸುಪಾಸು ಕಾಡಾನೆಗಳು ಓಡಾಡುತ್ತಿದ್ದವು. ಈ ಮಾರ್ಗವಾಗಿ ಸಾಗುವ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುತ್ತಿದ್ದರು.
ಇದನ್ನೂ ಓದಿ: Leopard attack: ಮಹಿಳೆ ಮೇಲೆ ದಾಳಿ ಮಾಡಿ ಮರುಕ್ಷಣವೇ ಪ್ರಾಣಬಿಟ್ಟ ಚಿರತೆ!
ಕಾಡಾನೆಗಳು ಜನರ ಗುಂಪುಗಳನ್ನು ಕಂಡೊಡನೆ ಅಟ್ಟಾಡಿಸಿಕೊಂಡು ಹೋಗುತ್ತಿದ್ದವು. ರೈತರು ತೋಟಗಳಿಗೆ, ರಸ್ತೆಯಲ್ಲಿ ಓಡಾಡಲು ಆಗದೆ ಮನೆಯಲ್ಲೇ ಕೂರುವಂತಾಗಿತ್ತು. ಕಾಡಾನೆಯನ್ನು ಹಿಡಿದು ಕಾಡಿಗೆ ಬಿಡುವಂತೆ ಒತ್ತಾಯಿಸಲಾಗಿತ್ತು. ಅರಣ್ಯಾಧಿಕಾರಿಗಳು ಮೂರು ಕುಮ್ಕಿ ಆನೆಗಳನ್ನು ಬಳಸಿ ಕಾಡಾನೆಗಳ ಸೆರೆ ಹಿಡಿಯಲಾಗಿದೆ. ಕಾಡಾನೆಗಳಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಬಳಿಕ ಡೆಂಕಣಿಕೋಟೆ ಸಮೀಪದ ಕಾಡಿನ ಮಧ್ಯದ ಕಾವೇರಿ ನದಿ ದಡದ ಸಮೀಪ ಬಿಡಲಾಗಿದೆ. ಕಾಡಾನೆಗಳ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.