ಹಾಸನ: ರಾಜ್ಯದ ವಿವಿಧ ಕಡೆ ಗಜಪಡೆಗಳ ಹಾವಳಿ (Elephant Attack) ಮುಂದುವರಿದಿದೆ. ಸಕಲೇಶಪುರ ತಾಲೂಕಿನ ಕೆಸಗುಲಿ, ಕಲ್ಲಹಳ್ಳಿ, ಮತಿಗಳಲೆ, ಶಿಡಿಗಳಲೆ ಗ್ರಾಮಗಳಲ್ಲಿ ಹಿಂಡು ಹಿಂಡಾಗಿ ಕಾಡಾನೆಗಳು ಆಗಮಿಸುತ್ತಿದ್ದು, ಸುತ್ತಮುತ್ತಲ ಗ್ರಾಮಸ್ಥರನ್ನು ಆತಂಕಕ್ಕೆ ತಳ್ಳಿದೆ. ಇದರ ಮಧ್ಯೆ ಒಂಟಿ ಸಲಗವೊಂದು ನೀರಿನಲ್ಲಿ ಮೈಮರೆತು ಆಟವಾಡಿದೆ. ಇದರ ವಿಡಿಯೊ ಈಗ ಸಖತ್ ವೈರಲ್ ಆಗಿದೆ.
ಸಕಲೇಶಪುರ ತಾಲೂಕಿನ ದಬ್ಬಳ್ಳಿ ಗ್ರಾಮದ ಹೇಮಾವತಿ ಬ್ಯಾಕ್ ವಾಟರ್‌ನಲ್ಲಿ ಒಂಟಿ ಸಲಗವೊಂದು ಈಜಾಡಿದೆ. ಅದೆಷ್ಟು ಚೆಂದ ಆಟವಾಡಿದೆ ಎಂದರೆ ನೀರು, ನೆಲದಲ್ಲಿ ಬಿದ್ದು ಹೊರಳಾಡಿದೆ.
ನೀರಿನಲ್ಲಿ ಆಟವಾಡುವ ಈ ಆನೆಯು ಕೆರೆಯ ದಡದ ಮೇಲೆ ಒಮ್ಮೆ ಬೀಳುವುದು, ಬಳಿಕ ಮತ್ತೆ ಅಲ್ಲಿಂದ ನೀರಿಗೆ ಜಾರುವುದು ಮಾಡಿದೆ. ಹೀಗೆ ಮಾಡಿ ಖುಷಿ ಪಟ್ಟಿದೆ. ಹಾಸನ ಜಿಲ್ಲೆಯ ಮಲೆನಾಡು ಭಾಗ ಈಗ ಕಾಡಾನೆಗಳ ಬಿಡಾಗಿದೆ. ಕಾಡಾನೆಗಳ ಉಪಟಳದಿಂದ ಜನರು ಹೈರಾಣಾಗಿದ್ದಾರೆ. ಈಗ ಒಂಟಿ ಸಲಗದ ಈ ನೀರಾಟದ ವಿಡಿಯೊವನ್ನು ಸ್ಥಳೀಯರೊಬ್ಬರು ರೆಕಾರ್ಡ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ದಾಂಧಲೆ ಮಾಡಿರುವ ಕಾಡಾನೆಗಳು
ಸಕಲೇಶಪುರ ತಾಲೂಕಿನ ಶಿಡಿಗಳಲೆ ಗ್ರಾಮದ ತೋಟವೊಂದರಲ್ಲಿ ಆನೆಗಳ ಗುಂಪೊಂದು ಸೋಮವಾರ (ಡಿ.೧೯) ಕಾಣಿಸಿಕೊಂಡಿವೆ. 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿವೆ. ಅಪಾರ ಪ್ರಮಾಣದಲ್ಲಿ ಬೆಳೆದಿದ್ದ ಕಾಫಿ, ಭತ್ತದ ಬೆಳೆಗಳನ್ನು ಧ್ವಂಸ ಮಾಡಿವೆ. ಗ್ರಾಮದ ಜಗದೀಶ್ ಮಲ್ಲಣ್ಣ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು ದಾಂಧಲೆ ನಡೆಸಿವೆ.
ಆನೇಕಲ್ ಗಡಿಭಾಗದಲ್ಲೂ ಕಾಡಾನೆ ಹಾವಳಿ
ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಹಿಂಡು ಹಿಂಡಾಗಿ ಕಾಡಾನೆಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಕಾಡಂಚಿನ ಗ್ರಾಮಗಳಾದ ತೆಲಗರಹಳ್ಳಿ, ಕಾಳನಾಯಕನಹಳ್ಳಿ, ವಣಕನಹಳ್ಳಿ ಭಾಗದಲ್ಲಿ 20ಕ್ಕೂ ಹೆಚ್ಚು ಕಾಡಾನೆ ಪ್ರತ್ಯಕ್ಷವಾಗಿದ್ದು, ಕಳೆದೆರಡು ದಿನಗಳಿಂದ ಬೀಡು ಬಿಟ್ಟಿವೆ. ಕಾಡಾನೆಗಳು ರಸ್ತೆ ದಾಟಿ ಹೋಗುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ | Elephant Attack | ಶಿಡಿಗಳಲೆ ಗ್ರಾಮದಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ; ಅಪಾರ ಪ್ರಮಾಣದ ಬೆಳೆ ನಾಶ