ಕೊಡಗು/ಹಾಸನ: ಇತ್ತೀಚೆಗೆ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು ಜನರು ಹೈರಾಣಾಗಿದ್ದಾರೆ. ಕೊಡಗಿನ ಬ್ಯಾಡಗೊಟ್ಟ ಸುತ್ತಮುತ್ತ ಕಾಡಾನೆ ದಾಳಿ ನಡೆಸಿದೆ. ಹಲವು ರೈತರ ತೋಟಗಳಿಗೆ ಲಗ್ಗೆ ಇಟ್ಟು, ಅಡಿಕೆ, ಭತ್ತದ ಬೆಳೆಯನ್ನು ನಾಶ (Elephant Attack) ಮಾಡಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬ್ಯಾಡಗೊಟ್ಟ ಗ್ರಾಮದ ವಿಶ್ವನಾಥ್ ಮತ್ತು ಸುಧಾಕರ್ ಎಂಬುವರ ಸುಮಾರು 30 ಅಡಿಕೆ ಮರ, ಅಪಾರ ಪ್ರಮಾಣದ ಭತ್ತದ ಬೆಳೆಗಳು ನಾಶವಾಗಿವೆ. ಮೂರು ವರ್ಷದಿಂದ ಬೆಳೆದಿದ್ದ ಅಡಿಕೆ ಗಿಡಗಳು ಕಾಡಾನೆ ದಾಳಿಯಿಂದ ಮೂರೇ ನಿಮಿಷದಲ್ಲಿ ನಾಶವಾಗಿದೆ. ಸಾವಿರಾರು ರೂಪಾಯಿ ನಷ್ಟ ಅನುಭವಿಸಿರುವ ರೈತರು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬರುವಂತೆ ಆಗ್ರಹಿಸಿದ್ದಾರೆ.
ಇತ್ತ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಸಕಲೇಶಪುರ ತಾಲೂಕಿನ ಕೆಸಗೋಡು ಗ್ರಾಮದಲ್ಲಿ ಅಡಿಕೆ ಮರ ಹಾಗೂ ಕೊಯ್ಲಿಗೆ ಬಂದಿದ್ದ ಕಾಫಿ ಗಿಡಗಳನ್ನು ಕಾಡಾನೆ ಹಿಂಡು ತುಳಿದು ನಾಶ ಮಾಡಿವೆ. ದಯಾನಂದ ಎಂಬುವವರಿಗೆ ಸೇರಿದ ಕಾಫಿ ತೋಟವನ್ನು ನಾಶ ಮಾಡಿದ್ದು, ಬೆಳೆ ನಾಶವಾಗಿರುವ ಬಗ್ಗೆ ವಿಡಿಯೊ ಮಾಡಿ ದಯಾನಂದ ಅಳಲು ತೋಡಿಕೊಂಡಿದ್ದಾರೆ.
ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳೆದಿದ್ದ ಕಾಫಿ ಗಿಡಗಳನ್ನು ಕಳೆದುಕೊಂಡು ಕಂಗಾಲಾಗಿರುವ ದಯಾನಂದ, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಹಿಡಿಶಾಪ ಹಾಕಿದ್ದಾರೆ.
ಇದನ್ನೂ ಓದಿ | Elephant attack | ಚಿಕ್ಕಮಗಳೂರಲ್ಲಿ ಆಪರೇಷನ್ ಎಲಿಫೆಂಟ್; ಮೂರರಲ್ಲಿ ಒಂದು ಕಾಡಾನೆ ಸೆರೆ