ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಕಾಡಾನೆ ಉಪಟಳ ಹೆಚ್ಚಾಗಿ ಭಾನುವಾರ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಉಂಟಾದ ಸಾರ್ವಜನಿಕರ ಆಕ್ರೋಶಕ್ಕೆ ಮಣಿದಿರುವ ರಾಜ್ಯ ಸರ್ಕಾರವು ಮಹತ್ವದ ಆದೇಶವೊಂದನ್ನು ನೀಡಿದ್ದು, ತೊಂದರೆ ನೀಡುತ್ತಿರುವ ಮೂರು ಕಾಡಾನೆಯನ್ನು ಸೆರೆಹಿಡಿಯಲು (Elephant combing) ಸೂಚನೆ ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರಿನಲ್ಲಿ ಕಾಡಾನೆ ದಾಳಿಗೆ ಭಾನುವಾರ (ನ.೨೦) ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು. ಆದರೆ, ಶಾಸಕ ಎಂ.ಪಿ. ಕುಮಾರಸ್ವಾಮಿ ಸ್ಥಳಕ್ಕೆ ತಡವಾಗಿ ಬಂದಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದು ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದ್ದರು. ಅಲ್ಲದೆ, ಜನರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಶಾಸಕ ಕುಮಾರಸ್ವಾಮಿ ಆರೋಪವನ್ನೂ ಮಾಡಿದ್ದರು. ಈಗ ಈ ಎಲ್ಲ ಬೆಳವಣಿಗೆಯ ಮಧ್ಯೆ ಉಪಟಳ ನೀಡುತ್ತಿರುವ ಕಾಡಾನೆಗಳ ಸೆರೆಗೆ ಆದೇಶ ನೀಡಲಾಗಿದೆ.
ಕಳೆದ ಮೂರು ತಿಂಗಳಲ್ಲಿ ಕಾಡಾನೆ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಈ ಕುರಿತು ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಇತ್ತು. ಈಗ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಮೂರು ಕಾಡಾನೆಗಳನ್ನು ಹಿಡಿಯಲು ಸರ್ಕಾರ ಆದೇಶ ನೀಡಿದ್ದು, ಸೆರೆ ಹಿಡಿಯಲಾದ ಆನೆಗಳನ್ನು ಸೂಕ್ತ ರಕ್ಷಿತ ಪ್ರದೇಶಕ್ಕೆ ಅಥವಾ ಇಲಾಖಾ ಆನೆ ಶಿಬಿರಕ್ಕೆ ಸ್ಥಳಾಂತರ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ.
ಅಲ್ಲದೆ, ಈ ಕಾಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ವನ್ಯಜೀವಿ ಕಾಯ್ದೆಯು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದಲ್ಲದೆ, ಕಾಲ ಕಾಲಕ್ಕೆ ನೀಡಿದ ನಿರ್ದೇಶನವನ್ನು ಪಾಲಿಸಬೇಕೆಂದು ಸಹ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಮೊದ್ಲು ಗೃಹ ಖಾತೆ ನಿಭಾಯಿಸೋದು ಕಲೀಲಿ: ಆರಗ ಜ್ಞಾನೇಂದ್ರಗೆ ರಾಮಲಿಂಗಾ ರೆಡ್ಡಿ ತರಾಟೆ
ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದ ಶಾಸಕ
ಭಾನುವಾರ ಬೆಳಗ್ಗೆ ಕಾಡಾನೆ ದಾಳಿಯಿಂದ ಶೋಭಾ ಎಂಬುವರು ಮೃತಪಟ್ಟಿದ್ದರು. ಘಟನೆಯಿಂದಾಗಿ ಗ್ರಾಮಸ್ಥರು ರೊಚ್ಚಿಗೆದ್ದಿದ್ದರು. ಸ್ಥಳೀಯ ಶಾಸಕರಾಗಿರುವ ಎಂ.ಪಿ. ಕುಮಾರಸ್ವಾಮಿ ಅವರು ಬೆಳಗ್ಗೆ ಘಟನೆ ನಡೆದರೂ ಸಂಜೆಯ ತನಕ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಸಂಜೆಯ ವೇಳೆಗೆ ಶಾಸಕರು ಸ್ಥಳಕ್ಕೆ ಬಂದಿದ್ದು, ಈ ವೇಳೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಆಕ್ರೋಶಗೊಂಡ ಸ್ಥಳೀಯರು ಪೊಲೀಸರ ಭದ್ರತೆಯನ್ನು ಲೆಕ್ಕಿಸದೇ ಶಾಸಕರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಲಾಗಿತ್ತು.
ಶಾಸಕರ ಆರೋಪವೇನು?
ಗ್ರಾಮಸ್ಥರು ಅನಗತ್ಯವಾಗಿ ಹಲ್ಲೆ ಮಾಡಿದ್ದಾರೆ. ಇದು ವ್ಯವಸ್ಥಿತ ಪಿತೂರಿಯಾಗಿದೆ. ನಾನು ಆನೆಯನ್ನು ಸಾಕುತ್ತಿದ್ದೇನೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಪೊಲೀಸರ ವೈಫಲ್ಯವೂ ಇದೆ. ನನಗೆ ಭದ್ರತೆ ಒದಗಿಸಲು ಪೊಲೀಸರು ವಿಫಲಗೊಂಡರು. ನನ್ನ ಹಾದಿ ತಪ್ಪಿಸಿ ಮುಂದೆ ಕರೆದುಕೊಂಡು ಹೋದರು ಎಂದು ಎಂ.ಪಿ. ಕುಮಾರಸ್ವಾಮಿ ಅವರು ಪ್ರಕರಣ ಕುರಿತು ಹೇಳಿಕೆಯನ್ನು ನೀಡಿದ್ದರು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಕೆ.ಜಿ. ಹಳ್ಳಿಯಲ್ಲಿ ನಾಲ್ವರು ವಶಕ್ಕೆ; ಹೆಚ್ಚಿನ ತನಿಖೆಗೆ ಮಂಗಳೂರು ಪೊಲೀಸರ ಸುಪರ್ದಿಗೆ