ಕಡಬ (ದಕ್ಷಿಣ ಕನ್ನಡ): ಕಳೆದ ಕೆಲವು ದಿನಗಳಿಂದ ಅಸ್ವಸ್ಥಗೊಂಡು ಕಡಬ ಪರಿಸರದಲ್ಲಿ ಅಲ್ಲಿ ಇಲ್ಲಿ ತಿರುಗಾಡುತ್ತಿದ್ದ ಕಾಡಾನೆಯೊಂದು (Elephant Death) ಕೊಂಬಾರು ಸಮೀಪದ ಬಗ್ಪುಣಿ ಎಂಬಲ್ಲಿ ಮೃತಪಟ್ಟಿದೆ.
ಕಾಡಾನೆಯು ಸಂಪೂರ್ಣ ನಿತ್ರಾಣಗೊಂಡ ಸ್ಥಿತಿಯಲ್ಲಿ ಕೊಂಬಾರು ಸಮೀಪ ನಿನ್ನೆ (ಏ.27) ಚೇರು ಬಳಿಯ ಹೊಳೆಯಲ್ಲಿ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹೊಳೆಯಿಂದ ಮೇಲೆ ಬರಲು ಆಗದೆ ಅಲ್ಲಿ ನಿಂತಿತ್ತು. ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯ ಸಮೀಪದ ಎರ್ಮಾಯಿಲ್ ಎಂಬಲ್ಲಿ ರಸ್ತೆಯಲ್ಲೇ ನಡೆದಾಡಲು ಕಷ್ಟಪಡುವ ರೀತಿಯಲ್ಲಿ ಈ ಕಾಡಾನೆ ಸ್ಥಳೀಯರಿಗೆ ಕಾಣಿಸಿತ್ತು.
ಅರಣ್ಯ ಅಧಿಕಾರಿಗಳ ತಂಡ ಮಾಹಿತಿ ಲಭ್ಯವಾದ ತಕ್ಷಣವೇ ನುರಿತ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಪರಿಶೀಲನೆಗೂ ಮುಂದಾಗಿದ್ದರು. ವೈದ್ಯಕೀಯ ತಜ್ಞರು ಹೇಳುವ ಪ್ರಕಾರ ಆನೆಯು ವಯೋಸಹಜ ತೊಂದರೆಗಳಿಂದ ಬಳಲುತ್ತಿರುವುದಲ್ಲದೆ ಹಲ್ಲುಗಳು ಉದುರಿರುವ ಶಂಕೆ ವ್ಯಕ್ತಪಡಿಸಿದ್ದರು. ಇತ್ತ ಆನೆ ಮೃತಪಟ್ಟ ಸುದ್ದಿ ಕೇಳಿ ಸ್ಥಳೀಯರೆಲ್ಲರೂ ಜಮಾಯಿಸಿ, ಮರುಕಪಟ್ಟರು.
ಕಡಬ ಸುತ್ತಮುತ್ತ ನಿಲ್ಲದ ಕಾಡಾನೆ ಹಾವಳಿ
ಕಡಬ ಸುತ್ತಮುತ್ತ ಆಹಾರ ಅರಸಿ ಆನೆಗಳು (Elephant attack) ಬರುತ್ತಿದ್ದು, ಇತ್ತೀಚೆಗಷ್ಟೇ ಕಡಬದಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಪುಂಡ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದರು. ಕಳೆದ ಫೆ.20ರ ಸೋಮವಾರ ಮುಂಜಾನೆ ಪೇರಡ್ಕ ಹಾಲು ಸೊಸೈಟಿಯ ಸಿಬ್ಬಂದಿ ರಂಜಿತಾ ಎಂಬುವವರು ಮನೆಯಿಂದ ಸೊಸೈಟಿಗೆ ಹೋಗುತ್ತಿದ್ದ ವೇಳೆ ಆನೆಯೊಂದು ದಾಳಿ ನಡೆಸಿತ್ತು. ಇದೇ ವೇಳೆ ಸ್ಥಳದಲ್ಲಿದ್ದ ರಮೇಶ್ ರೈ ಎಂಬುವವರ ಮೇಲೂ ದಾಳಿ ಮಾಡಿತ್ತು. ಗಂಭೀರ ಗಾಯಗೊಂಡ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ರಂಜಿತಾ ನೆಲ್ಯಾಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಇದರಿಂದ ಆಕ್ರೋಶಿತರಾದ ಸ್ಥಳೀಯರು ಕೂಡಲೇ ಕಾಡಾನೆಯನ್ನು ಹಿಡಿದು ದೂರ ಒಯ್ಯಬೇಕು, ಅಲ್ಲಿಯವರೆಗೆ ಮೃತದೇಹವನ್ನು ತೆಗೆಯುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಬಳಿಕ ಅಧಿಕಾರಿಗಳು ಕಾರ್ಯಾಚರಣೆ ನಡೆಸುವ ಭರವಸೆ ನೀಡಿದಾಗ ಪ್ರತಿಭಟನೆಯಿಂದ ಹಿಂದೆ ಸರಿದಿದ್ದರು.
ಇದನ್ನೂ ಓದಿ: Karnataka Election 2023: ಹಾವೇರಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ
ಕಡಬ ಬಳಿಯ ಮೂಜೂರು ರಕ್ಷಿತಾರಣ್ಯದ ಕೊಂಬಾರು(ಮಂಡೆಕರ) ಎಂಬಲ್ಲಿ ಆನೆಯನ್ನು ಪತ್ತೆ ಹಚ್ಚಿ ಗನ್ ಮೂಲಕ ಆನೆಗೆ ಅರಿವಳಿಕೆ ನೀಡಲಾಗಿತ್ತು. ಮೈಸೂರು ದುಬಾರೆಯಿಂದ ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್ ಹಾಗೂ ಮಹೇಂದ್ರ ಎಂಬ ಸಾಕಾನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಫೆ.21 ರಂದು ಡ್ರೋನ್ ಕ್ಯಾಮರಾ ಬಳಸಿ ಆನೆಯನ್ನು ಪತ್ತೆ ಹಚ್ಚಲಾಗಿತ್ತು. ಬಳಿಕ ಅರಿವಳಿಕೆ ಮದ್ದು ಶೂಟ್ ಮಾಡಿ ಸೆರೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿತ್ತು.