ಸುಳ್ಯ: ತೋಟದ ಕಾಲುವೆಗೆ ಬಿದ್ದು (Elephant Rescue Operation) ಮೇಲೇಳಲಾಗದೆ ಒದ್ದಾಟ ನಡೆಸುತ್ತಿದ್ದ ಕಾಡಾನೆಗಳನ್ನು ಯಶಸ್ವಿ ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ತುದಿಯಡ್ಕ ಎಂಬಲ್ಲಿ ತೋಟವೊಂದರ ಮುಖ್ಯ ಕಾಲುವೆಗೆ ಬುಧವಾರ ರಾತ್ರಿ ನಾಲ್ಕು ಕಾಡಾನೆಗಳು ಆಯತಪ್ಪಿ ಬಿದ್ದಿದ್ದವು.
ಗುರುವಾರ ಅಜ್ಜಾವರದ ತುದಿಯಡ್ಕದ ತೋಟದ ಮುಖ್ಯ ಕಾಲುವೆಯಲ್ಲಿ ಸಿಲುಕಿದ್ದ ಆನೆಗಳನ್ನು ಮೇಲಕ್ಕೆ ತರಲಾಯಿತು. ಸ್ಥಳೀಯರು ಕೆರೆಯ ಬದಿಯಲ್ಲಿ ಅಗೆತ ಮಾಡಿ ಮಣ್ಣು, ಮರಳು ಕಲ್ಲು ಹಾಕಿ ಆನೆಗಳಿಗೆ ಮೇಲೆ ಬರಲು ದಾರಿ ಮಾಡಿ ಕೊಟ್ಟರು. ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನವೀನ್ ಕುಮಾರ್ ರೈ ಮೇನಾಲ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಈ ಕಾರ್ಯಾಚರಣೆ ವೇಳೆ ಮರಿ ಆನೆಯೊಂದು ಮೇಲೆ ಬರಲು ಆಗದೆ ಪರದಾಡುತ್ತಿತ್ತು. ಬಳಿಕ ಬಳ್ಳಿ ಹಾಕಿ ಎಳೆದು ಹಿಂದಿನಿಂದ ದೂಡಿ ಕೆರೆಯಿಂದ ಮೇಲಕ್ಕೆ ತರಲಾಯಿತು. ಕೆರೆಯಲ್ಲಿ ಸಿಲುಕಿ ತೊಳಲಾಡಿದ ಆನೆಗಳು ಹೊರ ಬಂದ ಕೂಡಲೇ ‘ಬದುಕಿದೆಯಾ ಬಡ ಜೀವವೇ’ ಎನ್ನುವಂತೆ ಅರಣ್ಯದತ್ತ ಓಡಿದವು. ಆದರೆ, ಈ ಮರಿಯಾನೆ ಮಾತ್ರ ಅವುಗಳನ್ನು ಹುಡುಕಿಕೊಂಡು ಅರಣ್ಯ ಮಾರ್ಗದಲ್ಲಿ ಒಂದೇ ಓಡಾಟ ನಡೆಸಿದೆ.