ಹಾಸನ: ಒಂದಲ್ಲ.. ಎರಡಲ್ಲ ಬರೋಬ್ಬರಿ 40ಕ್ಕೂ ಹೆಚ್ಚು ಕಾಡಾನೆಗಳು ಹಿಂಡು ಹಿಂಡಾಗಿ ಕಾಡು ತೊರೆದು ನಾಡಿಗೆ (Elephants Spotted) ಕಾಲಿಟ್ಟಿದ್ದವು. ಹಾಸನದ ಆಲೂರು, ಸಕಲೇಶಪುರ, ಬೇಲೂರು ಭಾಗದಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದ್ದು, ಜನರ ನಿದ್ದೆಗೆಡಿಸಿದೆ. ಹೀಗಾಗಿ ಕಾಡಾನೆ ಹಿಂಡು ಚದುರಿಸಿ, ಅವುಗಳಿಗೆ ರೇಡಿಯೋ ಕಾಲರ್ (Radio Collar) ಹಾಕುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಶುರು ಮಾಡಿದೆ.
ನ.24ರಿಂದ ಡಿಸೆಂಬರ್ 15ರ ವರೆಗೆ ರೇಡಿಯೋ ಕಾಲರ್ ಕಾರ್ಯಾಚರಣೆ ನಡೆಯಲಿದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಚಿಕ್ಕಬಿಕ್ಕೋಡುವ ಗ್ರಾಮದ ಸುತ್ತಮುತ್ತ ಈ ಕಾರ್ಯಾಚರಣೆ ನಡೆಯುತ್ತಿದೆ. ಒಂದೇ ಜಾಗದಲ್ಲಿ ಸೇರಿಕೊಂಡಿರುವ 40ಕ್ಕೂ ಹೆಚ್ಚು ಕಾಡಾನೆಗಳನ್ನು ಸಾಕಾನೆಗಳ ಸಹಾಯದಿಂದ ಚದುರಿಸಲಾಗುತ್ತಿದೆ. ಭೀಮ, ಅರ್ಜುನ, ಪ್ರಶಾಂತ ಸೇರಿದಂತೆ ಆರು ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ.
ಡಿಎಫ್ಓ ಮೋಹನ್ ನೇತೃತ್ವದಲ್ಲಿ ಮೊದಲ ದಿನ ಒಂದು ಕಾಡಾನೆ ಸೆರೆ ಹಿಡಿದು ರೆಡಿಯೋ ಕಾಲರ್ ಅಳವಡಿಸಲಾಗಿದೆ. ಕಾಡಾನೆಗಳ ಚಲವಲನಗಳನ್ನು ಗ್ರಹಿಸಲು ರೇಡಿಯೋ ಕಾಲರ್ ಅಳವಡಿಸಲಾಗುತ್ತದೆ. ಒಂಭತ್ತು ಕಾಡಾನೆಗಳನ್ನು ಹಿಡಿದು ರೆಡಿಯೋ ಕಾಲರ್ ಅಳವಡಿಸಲಾಗುತ್ತದೆ. ಇನ್ನು ದಾಳಿ ಮಾಡಿ ಆತಂಕ ಸೃಷ್ಟಿಸಿರುವ 5 ಕಾಡಾನೆಗಳ ಸ್ಥಳಾಂತರಕ್ಕೂ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಮೊದಲು ರೆಡಿಯೋ ಕಾಲರ್ ಅಳವಡಿಸಿ, ನಂತರ 5 ಕಾಡಾನೆಗಳ ಸೆರೆ ಹಿಡಿದು ಸ್ಥಳಾಂತರ ಮಾಡುವ ಪ್ಲಾನ್ ಅರಣ್ಯ ಇಲಾಖೆ ಮಾಡಿಕೊಂಡಿದೆ. ಬೇಲೂರು ಭಾಗದಲ್ಲಿ ಒಂದೇ ಹಿಂಡಿನಲ್ಲಿ 40 ಕ್ಕೂ ಹೆಚ್ಚು ಕಾಡಾನೆಗಳಿದ್ದು, ಶಾರ್ಪ್ ಶೂಟರ್ ವೆಂಕಟೇಶ್ ಬಲಿ ಪ್ರಕರಣ ನಂತರ ಮಲೆನಾಡ ಜನರು ಆತಂಕಗೊಂಡಿದ್ದರು. ಕಾಡಾನೆಗಳ ಸ್ಥಳಾಂತರಕ್ಕೆ ಜನರಿಂದ ಹೆಚ್ಚಿದ ಒತ್ತಡ ಹಿನ್ನೆಲೆಯಲ್ಲಿ ಕಾಡಾನೆಗಳಿಗೆ ರೇಡಿಯೋ ಕಾಲರ್ ಮತ್ತು 5 ಕಾಡಾನೆಗಳ ಸ್ಥಳಾಂತರಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್ ನೀಡಿದೆ.
ಇಂದು ಒಂದೇ ಗುಂಪಿನಲ್ಲಿದ್ದ 45 ಕ್ಕೂ ಹೆಚ್ಚು ಕಾಡಾನೆಗಳನ್ನು ಮೊದಲಿಗೆ ಚದುರಿಸಿ, ಒಂದು ಹೆಣ್ಣಾನೆಗೆ ಅರವಳಿಕೆ ಮದ್ದನ್ನು ಹೊಡೆಯಲಾಯಿತು. ಬಳಿಕ ಎರಡು ಗಂಟೆಗೂ ಹೆಚ್ಚು ಕಾಲ ಸಾಕಾನೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಂತಿಮವಾಗಿ ಹೆಣ್ಣಾನೆಯೊಂದನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಿ ವಾಪಸ್ಸು ಅಲ್ಲಿಯೇ ಬಿಟ್ಟರು. ಇನ್ನು ರೇಡಿಯೋ ಕಾಲರ್ ಅಳವಡಿಸುತ್ತಿರುವುದಕ್ಕೆ ಆಕ್ರೋಶ ಹೊರಹಾಕಿದ ಸ್ಥಳೀಯರು, ರೇಡಿಯೋ ಕಾಲರ್ನಿಂದ ಕಾಡಾನೆ ಎಲ್ಲಿದೆ ಎಂದು ಕಂಡು ಹಿಡಿಯಬಹುದು. ಆದರೆ ನಮಗೆ ನಿತ್ಯವೂ ತೊಂದರೆ ಕೊಡುವುದನ್ನು ನಿಲ್ಲಿಸುವುದಿಲ್ಲ. ನಾವು ಬೆಳೆದ ಬೆಳೆಗಳೆಲ್ಲವನ್ನೂ ಸಂಪೂರ್ಣ ನಿತ್ಯವೂ ನಾಶಮಾಡಿಕೊಂಡು ಬರುತ್ತಿವೆ ಎಂದು ಕಿಡಿಕಾರಿದರು.
ಮಹಿಳೆಯ ಅರ್ಧ ದೇಹವನ್ನೇ ತಿಂದ ನರಭಕ್ಷಕ; ಮೈಸೂರಲ್ಲಿ ಹುಲಿ ದಾಳಿಗೆ ಮತ್ತೆ ಬಲಿ
ಮೈಸೂರು: ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ- ಮಾನವ ಸಂಘರ್ಷ ಮುಂದುವರಿದಿದೆ. ಮೈಸೂರಲ್ಲಿ ಹುಲಿ ದಾಳಿಗೆ ಮತ್ತೊಂದು ಬಲಿಯಾಗಿದೆ. ನಂಜನಗೂಡು ತಾಲೂಕಿನಲ್ಲಿ ತಿಂಗಳ ಅಂತರದಲ್ಲಿ ಮೂರನೇ ದಾಳಿ ಇದಾಗಿದ್ದು, ಎರಡನೇ ಬಲಿ ಪಡೆದಿದೆ. ಹುಲಿ ದಾಳಿಗೆ (Tiger Attack) ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದ ರತ್ನಮ್ಮ (55) ಮೃತಪಟ್ಟಿದ್ದಾರೆ.
ರತ್ನಮ್ಮ ದನ ಮೇಯಿಸಲು ಕಾಡಂಚಿಗೆ ತೆರಳಿದ್ದರು. ಮಧ್ಯಾಹ್ನದ ಹೊತ್ತಿಗೆ ಬಂದ ಹುಲಿ ಎರಗಿ ದಾಳಿ ಮಾಡಿದೆ. ಮಹಿಳೆಯ ಎಡಭಾಗದ ದೇಹವನ್ನೇ ತಿಂದು ಹಾಕಿದೆ. ಅಂತರಸಂತೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವನ್ಯಜೀವಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಹೊಲದಲ್ಲಿದ್ದ ವ್ಯಕ್ತಿಯನ್ನು ಎಳೆದೋಗಿ ಕೊಂದಿತ್ತು!
ನವೆಂಬರ್ 6ರಂದು ಎಚ್.ಡಿ.ಕೋಟೆ ತಾಲೂಕಿನ ಕಾಡಬೇಗೂರು ಕಾಲೋನಿಯಲ್ಲಿ ಹುಲಿ ದಾಳಿಗೆ (Tiger Attack) ವ್ಯಕ್ತಿಯೊಬ್ಬರು ಬಲಿಯಾಗಿದ್ದರು. ಶುಂಠಿ ಹೊಲದಲ್ಲಿ ಕುಳಿತಿದ್ದ ವೇಳೆ ಹುಲಿ ದಾಳಿ ಮಾಡಿ ವ್ಯಕ್ತಿಯನ್ನು ಕೊಂದಿತ್ತು. ಬಿ.ಮಟಗೆರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಾಲಾಜಿ ನಾಯ್ಕ(45) ಮೃತಪಟ್ಟಿದ್ದರು. ಟೀ ಕುಡಿದು ಶುಂಠಿ ಹೊಲಕ್ಕೆ ಬಾಲಾಜಿ ನಾಯ್ಕ ತೆರಳಿದ್ದರು. ಈ ವೇಳೆ ಏಕಾಏಕಿ ಹುಲಿ ದಾಳಿ ಮಾಡಿ ಎಳೆದು ಹೋಗಿತ್ತು. ಈ ವೇಳೆ ಸ್ಥಳೀಯರು ಗಮನಿಸಿ, ಕೂಗಾಡಿದ್ದರು. ನಂತರ ಹುಲಿ ಅಲ್ಲಿಂದ ಪರಾರಿಯಾಗಿತ್ತು.
ನಂಜನಗೂಡು ತಾಲೂಕಿನ ಮಹದೇವನಗರ ಗ್ರಾಮದ ದನಗಾಹಿ ಮೇಲೆ ಹುಲಿ ದಾಳಿ ಮಾಡಿತ್ತು. ಹೀಗಾಗಿ ಹುಲಿ ಪತ್ತೆಗೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಹುಲಿ ಕಾರ್ಯಾಚರಣೆಗೆ ಪಾರ್ಥ ಸಾರಥಿ ಹಾಗೂ ಧರ್ಮ ಆನೆ ಎಂಟ್ರಿ ನೀಡಿತ್ತು. 30ಕ್ಕೂ ಹೆಚ್ಚು ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಅರಣ್ಯ ಇಲಾಖೆ ಸಿಬ್ಬಂದಿಗೆ ಹುಲಿ ಸುಳಿವು ಮಾತ್ರ ಸಿಕ್ಕಿಲ್ಲ. ಅಧಿಕಾರಿಗಳ ಕಣ್ತಿಪ್ಪಿ ಹುಲಿ ದಾಳಿಯನ್ನು ಮುಂದುವರಿಸಿದೆ. ಕಳದೆ ವರ್ಷವು ಹಾದನೂರು ಒಡೆಯನಪುರದ ಮಹದೇವೇಗೌಡ ಎಂಬ ರೈತನನ್ನು ಹುಲಿ ಬಲಿ ಪಡೆದಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.