ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೊರಟಿದ್ದ ತರಬೇತಿ ವಿಮಾನವೊಂದು ತುರ್ತುಭೂಸ್ಪರ್ಶವಾಗಿದೆ (Plane Emergency Landing). ಈ ವಿಮಾನದಲ್ಲಿ ಇಬ್ಬರು ಪೈಲೆಟ್ಗಳಿದ್ದರು. ಅದೃಷ್ಟವಶಾತ್ ಯಾರಿಗೂ ಅಪಾಯವಾಗಲಿಲ್ಲ. ಆದರೆ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ತರಬೇತುದಾರನಿಗೆ ಕಾಲಿಗೆ ಗಾಯವಾಗಿದೆ. ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಮಾನಯಾನ ತರಬೇತಿ ಸಂಸ್ಥೆ ರೆಡ್ಬರ್ಡ್ಗೆ ಸೇರಿದ ವಿಮಾನ ಇದಾಗಿದ್ದು, ಸಾಂಬ್ರಾದಿಂದ ಟೇಕ್ ಆಫ್ ಕೆಲವೇ ಹೊತ್ತಲ್ಲಿ ಹೊನ್ನಿಹಾಳದ ಹೊರವಲಯದಲ್ಲಿ ಭೂಸ್ಪರ್ಶವಾಗಿದೆ. ಬಲವಂತವಾಗಿ ನೆಲದ ಮೇಲೆ ನಿಂತ ಪರಿಣಾಮ ಅದರ ಚಕ್ರಗಳೇ ಮುರಿದು ಹೋಗಿವೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸ್, ವಾಯುಪಡೆ ಸಿಬ್ಬಂದಿ, ವೈದ್ಯರು ತೆರಳಿದ್ದರು. ತಾಂತ್ರಿಕ ದೋಷದಿಂದ ಹೀಗೆ ಭೂಸ್ಪರ್ಶವಾಗಿದ್ದು, ಭಾರಿ ದುರಂತವೊಂದು ಸ್ವಲ್ಪದರಲ್ಲಿ ತಪ್ಪಿದೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗೂ ಪೂರ್ವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡರು ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಅರಕಲುಗೂಡಲ್ಲಿ ತುರ್ತು ಭೂಸ್ಪರ್ಶಗೊಂಡಿತ್ತು. ಅಂದೂ ಕೂಡ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಅದನ್ನು ಎಮರ್ಜೆನ್ಸಿ ಲ್ಯಾಂಡ್ ಮಾಡಿಸಲಾಗಿತ್ತು. ಡಿಕೆ ಶಿವಕುಮಾರ್ ಇದ್ದ ವಿಮಾನಕ್ಕೆ ರಣಹದ್ದು ಬಡಿದು, ಅದನ್ನು ಪೈಲೆಟ್ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಭೂಸ್ಪರ್ಶ ಮಾಡಿಸಿದ್ದ ಘಟನೆಯೂ ನಡೆದಿತ್ತು. ಇನ್ನು ಇದೇ ವರ್ಷ ಏಪ್ರಿಲ್ನಲ್ಲಿ ಬೆಂಗಳೂರಿನಿಂದ ಅಭುದಾಬಿಗೆ ಹೊರಟಿದ್ದ, 200 ಪ್ರಯಾಣಿಕರನ್ನು ಒಳಗೊಂಡ ವಿಮಾನವೊಂದು ವಾಪಸ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೇ ಬಂದು ಲ್ಯಾಂಡ್ ಆಗಿತ್ತು. ಟೇಕ್ ಆಫ್ ಆದ ಕೆಲವೇ ಹೊತ್ತಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಇದಕ್ಕೆ ಕಾರಣವಾಗಿತ್ತು.