ವಿಜಯನಗರ: ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು (Encroachment Drive) ರಸ್ತೆ ಮೇಲೆ ಮನೆ ಕಟ್ಟಿಕೊಂಡವರಿಗೆ ತಾಲೂಕು ಆಡಳಿತಾಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಸರ್ಕಾರಿ ಜಾಗ ಒತ್ತುವರಿದಾರರಿಗೆ ನೋಟಿಸ್ ನೀಡಿ, ಸರ್ಕಾರಿ ಜಾಗವನ್ನು ಬಿಟ್ಟುಕೊಡಿ ಎಂದು ತಾಕೀತು ಮಾಡಿದ್ದಾರೆ. ಇತ್ತ ಅಧಿಕಾರಿಗಳ ನೋಟಿಸ್‌ಗೆ ಒತ್ತುವರಿದಾರರು ಕಂಗಾಲಾಗಿದ್ದಾರೆ. ಆದರೆ, ಈ ಬಗ್ಗೆ ತಹಸೀಲ್ದಾರ್ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದು, “ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಮನೆ ಕಟ್ಟಿಕೊಳ್ಳಲು ಹೇಳಿದ್ದು ಯಾರು?” ಎಂದು ಪ್ರಶ್ನೆ ಮಾಡಿದ್ದಾರೆ.
ಪಟ್ಟಣದಲ್ಲಿ 13 ಹಾಗೂ 30ನೇ ವಾರ್ಡ್‌ನಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ತಹಸೀಲ್ದಾರ್ ಕಚೇರಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಒತ್ತುವರಿದಾರರು ತಮ್ಮ ಸ್ವಂತ ಜಾಗದ ಜತೆಗೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ, ಮೆಟ್ಟಿಲು, ಕಾಂಪೌಂಡ್ ಸೇರಿದಂತೆ ಮನೆಯ ಕೆಲವು ಭಾಗವನ್ನು ಕಟ್ಟಿಕೊಂಡಿದ್ದಾರೆ.
ಏಳು ದಿನಗಳ ಡೆಡ್‌ಲೈನ್
ಏಳು ದಿನಗಳ ಒಳಗೆ ಒತ್ತುವರಿ ಮಾಡಿರುವ ಜಾಗವನ್ನು ಬಿಟ್ಟು ಕೊಡಿ. ಇಲ್ಲದಿದ್ದರೆ ಜೆಸಿಬಿ ಮೂಲಕ ಒಡೆದು ಹಾಕಲಾಗುವುದು ಎಂದು ಅಕ್ರಮ ಒತ್ತುವರಿದಾರರಿಗೆ ತಹಸೀಲ್ದಾರ್ ಎಚ್ಚರಿಕೆ ನೀಡಿದ್ದಾರೆ.
ನೋಟಿಸ್‌ಗೆ ನಿವಾಸಿಗಳು ಕಂಗಾಲು
ತಹಸೀಲ್ದಾರ್ ನೋಟೀಸ್ ಜಾರಿ ಮಾಡುತ್ತಿದ್ದಂತೆ ನಿವಾಸಿಗಳು ಕಂಗಾಲಾಗಿದ್ದಾರೆ. ಏಕಾಏಕಿ ಬಂದು ತೆರವು ಮಾಡಿ ಎಂದರೆ ಎಲ್ಲಿಗೆ ಹೋಗಬೇಕು. 40 ವರ್ಷದಿಂದ ಇದೇ ಜಾಗದಲ್ಲಿ ವಾಸ ಮಾಡಿದ್ದೇವೆ. ನಾವು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿಲ್ಲ. ಸರ್ಕಾರ, ನಗರಸಭೆಯಲ್ಲಿ ಮನೆಗಳಿಗೆ ಅಧಿಕೃತ ಹಕ್ಕು ಪತ್ರಗಳಿವೆ. ನೀರಿನ ಬಿಲ್, ಕರೆಂಟ್ ಬಿಲ್, ಮನೆ ಬಾಡಿಗೆ ಕಟ್ಟುತ್ತಾ ಬಂದಿದ್ದೇವೆ ಎಂದು ಗೋಳಾಡಿದ್ದಾರೆ.
ಜೀವನ ನಿರ್ವಹಣೆಗೆ ಗೂಡಂಗಡಿ, ಪಾನ್ ಶಾಪ್ ಇಟ್ಟುಕೊಂಡಿದ್ದೇವೆ. ಸಣ್ಣ ಮಕ್ಕಳು, ವಯಸ್ಸಾದವರು ಇರುವಾಗ ನಾವು ಎಲ್ಲಿಗೆ ಹೋಗಬೇಕು. ದಿಢೀರ್ ಜಾಗ ಖಾಲಿ ಮಾಡಿ ಎನ್ನುವುದು ಸರಿಯಲ್ಲ. ಸಚಿವರು ಖುದ್ದು ಸ್ಥಳಕ್ಕೆ ಭೇಟಿ ಕೊಡುವುದಾಗಿ ಹೇಳಿದ್ದರೂ ತಹಸೀಲ್ದಾರ್ ಕೇಳುತ್ತಿಲ್ಲ ಎಂದು ನಿವಾಸಿಗಳು ಅಸಮಾಧಾನ ಹೊರಹಾಕಿದ್ದಾರೆ.
ಒತ್ತುವರಿ ಮಾಡಿ ಮನೆ ಕಟ್ಟಲು ಹೇಳಿದ್ಯಾರು?
ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದಂತೆ ಹೊಸಪೇಟೆ ತಹಸೀಲ್ದಾರ್ ವಿಶ್ವಜೀತ ಮೆಹತಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ಜಾಗ ಒತ್ತುವರಿ ಮಾಡಿ ಮನೆ ಕಟ್ಟಲು ಹೇಳಿದ್ಯಾರು? ಮನೆ ಕಟ್ಟುವಾಗ ತಮ್ಮ ಜಾಗ ಎಷ್ಟಿದೆಯೋ ಅಷ್ಟಕ್ಕೇ ಮನೆ ಕಟ್ಟಬೇಕಿತ್ತು. ತಮ್ಮ ಜಾಗ ಬಿಟ್ಟು ರಸ್ತೆ ಮೇಲೆ ಬಂದು ಮನೆ ಕಟ್ಟಿದ್ದಾರೆ” ಎಂದು ಹೇಳಿದರು.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳು ಏನು ಹೇಳುತ್ತಾರೋ ಅದನ್ನು ಮಾಡಬೇಕಾಗುತ್ತದೆ. ಸಮಿತಿ ಪ್ರಕಾರ ಒತ್ತುವರಿ ಮಾಡಿರುವ ಬಗ್ಗೆ ಸರ್ವೇ ಕಾರ್ಯ ಆಗಿದೆ. ಕೆಲವರಿಗೆ ಅಕ್ರಮ ಜಾಗವನ್ನು ನೀವೇ ಸರ್ಕಾರಕ್ಕೆ ಬಿಟ್ಟುಕೊಡಿ ಎಂದಿದ್ದೇವೆ. ಕೆಲವರು ಸ್ವಯಂಪ್ರೇರಿತವಾಗಿ ಅಕ್ರಮ ಕಟ್ಟಡ ಒಡೆದು ಹಾಕಿದ್ದಾರೆ. ಮತ್ತೆ ಕೆಲವರು ಒತ್ತುವರಿ ಮಾಡಿಲ್ಲ ಎಂದು ವಾಗ್ವಾದಕ್ಕೆ ಇಳಿದಿದ್ದಾರೆ. ಅವೆಲ್ಲವನ್ನೂ ಸರಿಪಡಿಸಿ ಒತ್ತುವರಿ ಜಾಗವನ್ನು ತೆರವು ಮಾಡುತ್ತೇವೆ. ಒಂದು ವಾರ ನೀಡಿದ ಗಡುವು ಮುಗಿದಿದ್ದು, ಜಿಲ್ಲಾಧಿಕಾರಿ ಹಾಗೂ ಸಮಿತಿ ಸದಸ್ಯರ ಜತೆ ಕುಳಿತು ಮಾತುಕತೆ ಮಾಡುತ್ತೇವೆ. ಕೆಲವೇ ದಿನಗಳಲ್ಲಿ ಜೆಸಿಬಿ ಮೂಲಕ ತೆರುವು ಕಾರ್ಯಾಚರಣೆ ಮಾಡುವುದಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | ಐಟಿ ಕಂಪನಿಗಳಿಂದ ಒತ್ತುವರಿಯಾಗಿಲ್ಲ, ಬೆಂಗಳೂರಿನ ಪ್ರಗತಿಗೆ ಕಾರಣವಾದ ಅವರನ್ನು ದೂರಬೇಡಿ: ಮೋಹನದಾಸ್ ಪೈ