ಕಾರವಾರ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಉತ್ತರ ಕನ್ನಡ (Kasturirangan report) ಜೋಯಿಡಾದಲ್ಲಿ ಸೋಮವಾರ (ಜುಲೈ ೨೫) ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜೋಯಿಡಾ ಪಟ್ಟಣದ ಶಿವಾಜಿ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ಮೂಲಕ ಸಾಗಿದರು. ದಾರಿಯುದ್ದಕ್ಕೂ ಪ್ರತಿಭಟನಾಕಾರರು ಕಸ್ತೂರಿ ರಂಗನ್ ವರದಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಆರ್.ವಿ.ದೇಶಪಾಂಡೆ “ನಮ್ಮ ರಾಜ್ಯವೂ ಸೇರಿದಂತೆ ದೇಶದ 6 ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟದ 56,823 ಚದರ ಕಿ.ಮೀ ವಿಸ್ತೀರ್ಣದ ಪ್ರದೇಶವನ್ನು ಸುಪ್ರೀಂ ಕೋರ್ಟ್‌ನ ಆದೇಶದನ್ವಯ ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿ ಕೇಂದ್ರ ಸರ್ಕಾರ ಜುಲೈ 6ರಂದು ಕರಡು ಅಧಿಸೂಚನೆ ಹೊರಡಿಸಿದೆ. ಈ ಹಿಂದೆ 3 ಬಾರಿ ಅಧಿಸೂಚನೆಯನ್ನು ಹೊರಡಿಸಿದ್ದ ಕೇಂದ್ರದ ಈ ಪ್ರಯತ್ನಕ್ಕೆ ರಾಜ್ಯ ಸರ್ಕಾರವು ವಿರೋಧವನ್ನು ವ್ಯಕ್ತಪಡಿಸುತ್ತಲೇ ಇದೆ. ಈಗ ಇನ್ನೊಮ್ಮೆ ಅಧಿಸೂಚನೆ ಹೊರಡಿಸಿರುವುದು ರಾಜ್ಯದ ಜನತೆಗೆ ಆತಂಕವನ್ನು ತಂದೊಡ್ಡಿದೆ” ಎಂದರು.
ಇದನ್ನೂ ಓದಿ | ಕಸ್ತೂರಿ ರಂಗನ್ ವರದಿ ವಿರುದ್ಧ ಮೂರು ದಿನ ಮಲೆನಾಡು ಬಂದ್‌ಗೆ ಕರೆ
“ಪಶ್ಚಿಮ ಘಟ್ಟಗಳಿಂದಲೇ ಆವರಿಸಿರುವ ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ವಿಶೇಷವಾಗಿ ನನ್ನ ಮತಕ್ಷೇತ್ರವಾದ ಜೋಯಿಡಾ ತಾಲೂಕಿನಲ್ಲಿ ಈಗಾಗಲೇ ಹಲವಾರು ಬೃಹತ್ ಯೋಜನೆಗಳು, ಅಭಯಾರಣ್ಯಗಳು ಇವೆ. ಆದರೆ, ಇಲ್ಲಿಯೇ ಬದುಕನ್ನು ಕಟ್ಟಕೊಂಡ ಜನಸಾಮಾನ್ಯರು ಈ ಯೋಜನೆಗಳಿಂದ ನಿರಾಶ್ರಿತರಾಗಿ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ,ʼʼ ಎಂದು ಆಕ್ರೋಶವನ್ನು ಹೊರಹಾಕಿದರು.
“ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ 96 ಗ್ರಾಮಗಳು ಪರಿಸರ ಸೂಕ್ಷ್ಮ ವಲಯದಲ್ಲಿ ಗುರುತಿಸಿಕೊಂಡಿದ್ದು, ತಾಲೂಕಿನ ಕೇಂದ್ರ ಸ್ಥಾನವೂ ಸೇರಿದಂತೆ ಶೇಕಡಾ 90ರಷ್ಟು ಹೆಚ್ಚಿನ ಪ್ರದೇಶವು ಈ ವಲಯದ ವ್ಯಾಪ್ತಿಯಲ್ಲಿ ಬರುತ್ತದೆ. ಇದರಿಂದ ತಾಲೂಕಿನಲ್ಲಿ ಕೈಗೊಳ್ಳುವ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುವ ಆತಂಕ ಎದುರಾಗಿದೆ. ಪಶ್ಚಿಮ ಘಟ್ಟಗಳ ಪ್ರದೇಶದ ಅರಣ್ಯ, ಜೀವಸಂಕುಲಗಳ ಸಂರಕ್ಷಣೆ ಮತ್ತು ಪರಿಸರದ ಸಮತೋಲನದ ಜೊತೆಗೆ ಅಭಿವೃದ್ಧಿಯೂ ಆಗಬೇಕು ಎಂಬುದು ನನ್ನ ನಿಲುವು. ಆದರೆ, ಹಲವಾರು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿರುವ ವಾಸಿಸುತ್ತಿರುವ ಜನರು ಬೃಹತ್ ಯೋಜನೆಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದು, ಅವರ ಹಿತವನ್ನು ಕಾಪಾಡುವುದೂ ನಮ್ಮ ಆದ್ಯತೆಯಾಗಬೇಕಾಗಿದೆʼʼ ಎಂದು ತಿಳಿಸಿದರು.
“ರಾಜ್ಯ ಸರ್ಕಾರವು ಈ ಯೋಜನೆ ಜಾರಿಯನ್ನು ವಿರೋಧಿಸಿ ಶೀಘ್ರವಾಗಿ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಿ ಪಶ್ಚಿಮ ಘಟ್ಟದಲ್ಲಿ ವಾಸಿಸುವವರ ಹಿತರಕ್ಷಣೆಯನ್ನು ಕಾಪಾಡಬೇಕು. ಪರಿಸರ, ಅರಣ್ಯ ಸಂರಕ್ಷಣೆ, ಜೀವ ವೈವಿಧ್ಯತೆಗಳ ಸಂರಕ್ಷಣೆಯ ಆದ್ಯತೆಯ ಜತೆಗೆ ಇವುಗಳೊಂದಿಗೆ ಸಂಬಂಧವನ್ನು ಬೆಸೆದುಕೊಂಡಿರುವ ಜನರ ಹಿತರಕ್ಷಣೆ ಆಗಬೇಕುʼʼ ಎಂದು ದೇಶಪಾಂಡೆ ತಿಳಿಸಿದರು.
ಈ ವಿಷಯವನ್ನು ಪ್ರಾಧಾನ್ಯತೆ ಮೇರೆಗೆ ಪರಿಗಣಿಸಿ, ನಿಗದಿತ ಅವಧಿಯೊಳಗೆ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಬೇಕಾಗಿರುವುದರಿಂದ ರಾಜ್ಯ ಸರ್ಕಾರವು ಕೂಡಲೇ ಕರಡು ಪ್ರಕಟವಾದ 60 ದಿನಗಳಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸುವ ನಿರ್ಧಾರ ಕೈಗೊಳ್ಳುವಂತೆ ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ಮನವಿ ಮಾಡಿದರು.
ಇದನ್ನೂ ಓದಿ | ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ: ವರದಿ ಕೈಬಿಡುವಂತೆ ಕಾನೂನು ಹೋರಾಟ