ಬೆಂಗಳೂರು: ಹಿಂದುಳಿದ ವರ್ಗಗಳ ಪ್ರವರ್ಗ-1ರ ಪಿಂಜಾರ, ನದಾಫ್ ಹಾಗೂ ಇತರೆ 13 ಜಾತಿಗಳ ಅಭಿವೃದ್ಧಿ ನಿಗಮವನ್ನು (Karanataka State Bacward Classes Small communities Development Corporation) ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 1ರ ಕಸಾಬ್, ಕಸಾಯ್, ಒಟಾರಿ, ನಾಲಬಂದ್, ತಕನರ, ಬಾಜಿಗಾರ್, ಚಪ್ಪರ್ ಬಂದ್ (ಮುಸ್ಲಿಂ), ದರ್ವೇಸು, ಜೋಹರಿ, ಫುಲ್ ಮಾಲಿ, ಪಿಂಜಾರಾ, ಪಿಂಜಾರಿ, ನದಾಫ್, ಲದಾಫ್ ಜಾತಿಗಳಿಗೆ ಈಗಾಗಲೇ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಇದೀಗ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ನಿಗಮವನ್ನು ಸ್ಥಾಪಿಸಿದೆ.
ಪರಿಷ್ಕೃತ ಮೀಸಲಾತಿ ನೀತಿ ‘ಕನ್ನಡಿಯೊಳಗಿನ ಗಂಟು’: ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ ಪರಿಷ್ಕೃತ ಮೀಸಲಾತಿ ನೀತಿ ‘ಕನ್ನಡಿಯೊಳಗಿನ ಗಂಟು’ ಅಷ್ಟೆ. ಚುನಾವಣೆಯಲ್ಲಿ ರಾಜಕೀಯ ಲಾಭದ ದುರುದ್ದೇಶದ ಈ ಮೀಸಲಾತಿ ನೀತಿಯಿಂದ ಯಾವ ಸಮುದಾಯಕ್ಕೂ ಲಾಭ ಇಲ್ಲ. ಇಂತಹ ಗಿಮಿಕ್‌ಗಳಿಗೆ ಜನ ಬಲಿಯಾಗಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹಿಂದುಳಿದ ಜಾತಿಗುಂಪಿನಲ್ಲಿದ್ದ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಲಾಗಿದೆ. ಒಬ್ಬರಿಂದ ಕಿತ್ತು ಇನ್ನೊಬ್ಬರಿಗೆ ನೀಡುವ ಮೂಲಕ ಸಮುದಾಯಗಳ ನಡುವೆ ವೈಮನಸ್ಸು ಬೆಳೆಯುವಂತೆ ಮಾಡುವುದು ಬಿಜೆಪಿಯ ದುರುದ್ದೇಶವಾಗಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | Teacher Transfer : ಶಿಕ್ಷಕರ ವರ್ಗಾವಣೆಗೆ ಸರ್ಕಾರದ ಗ್ರೀನ್ ಸಿಗ್ನಲ್; ಚುನಾವಣಾ ಆಯೋಗದ ಅನುಮತಿ ನಂತರ ಶುರು
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಯ ಅನುಷ್ಠಾನ ಒಂದು ದೀರ್ಘ ಪ್ರಕ್ರಿಯೆ. ಇದಕ್ಕಾಗಿ ಸಂವಿಧಾನದ ಪರಿಚ್ಛೇದ 341ಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಈ ಬಗ್ಗೆ ಸಂಪುಟ ಕೈಗೊಂಡಿದ್ದ ತೀರ್ಮಾನವನ್ನು ಇಲ್ಲಿಯವರೆಗೆ ಕೇಂದ್ರ ಸರ್ಕಾರಕ್ಕೆ ಕಳುಹಿಸದೆ ಇರುವುದು ರಾಜ್ಯ ಸರ್ಕಾರದ ಅಪ್ರಮಾಣಿಕತೆಗೆ ಸಾಕ್ಷಿ. ಮುಸ್ಲಿಮರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗಿರುವ ಮೀಸಲಾತಿಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದರೂ ಇದು ಸುಲಭಸಾಧ್ಯ ಅಲ್ಲ. ಬೇರೆ ರಾಜ್ಯಗಳಲ್ಲಿಯೂ ಮುಸ್ಲಿಂಮರು ಇರುವ ಕಾರಣ ಒಂದು ರಾಜ್ಯದ ವ್ಯಾಪ್ತಿಯಲ್ಲಿ ಮೀಸಲಾತಿ ಮರುಹಂಚಿಕೆ ಮಾಡಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.
ಒಳ ಮೀಸಲಾತಿ; ಸಿಎಂ ಬೊಮ್ಮಾಯಿಗೆ ಮಾದಿಗ ಸಮುದಾಯದಿಂದ ಅಭಿನಂದನೆ
ಬೆಂಗಳೂರು: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಶಿಫಾರಸಿನಂತೆ ಎಸ್‌ಸಿ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಮಾದಿಗ ಸಮುದಾಯದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಎಡ, ಬಲ ಎನ್ನದೇ ಎಸ್‌ಸಿ ಸಮುದಾಯ ಈ ದೇಶದ ಒಂದು ಶಕ್ತಿ. ಸುಮಾರು ಶೇ.24 ಜನ ಹಿಂದುಳಿದರೆ ದೇಶ ಹೇಗೆ ಉದ್ಧಾರವಾಗುತ್ತದೆ? ಸಾಮಾಜಿಕ ನ್ಯಾಯ ಅಂತ ಇಷ್ಟು ವರ್ಷ ಹೇಳುತ್ತಾ ಬಂದಿದ್ದಾರೆ. ಶಿಕ್ಷಣ, ಉದ್ಯೋಗ, ಸಬಲೀಕರಣ ಈ ಮೂರು ತತ್ವ ಪಾಲಿಸಿದರೆ ಅಭಿವೃದ್ಧಿ ಸಾಧ್ಯ. ಬಹಳ ಜನ ಜೇನುಗೂಡಿಗೆ ಕೈ ಹಾಕುತ್ತಿದ್ದೀರಿ ಅಂತ ಹೇಳಿದರು. ನನಗೆ ಜೇನು ಕಡಿದರೂ ಚಿಂತೆಯಿಲ್ಲ. ತುಳಿತಕ್ಕೊಳಗಾದ ಸಮುದಾಯಗಳಿಗೆ ಜೇನು ಸಿಗಲಿ ಅಂತ ನಾನು ಈ ಕೆಲಸ ಮಾಡಿದ್ದೇನೆ. ಯಾರಿಗೂ ಅನ್ಯಾಯವಾದಗಂತೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇನೆ. ಇದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ನಿಮ್ಮ ಆಶೀರ್ವಾದ ಇರಲಿ ಎಂದರು.
ಇದನ್ನೂ ಓದಿ | Reservation : ಎಸ್ಸಿ ಒಳಮೀಸಲಾತಿಗೆ ಸಂಪುಟ ಅಸ್ತು, ಅಲ್ಪಸಂಖ್ಯಾತರಿಗೆ ಇನ್ನು EWSನಲ್ಲಿ ಮಾತ್ರ ಅವಕಾಶ
ಈ ಸಂದರ್ಭದಲ್ಲಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ, ಸಚಿವರಾದ ಗೋವಿಂದ ಕಾರಜೋಳ, ಡಾ.ಕೆ ಸುಧಾಕರ್, ಮುರುಗೇಶ ನಿರಾಣಿ ಹಾಗೂ ಮತ್ತಿತರರು ಹಾಜರಿದ್ದರು.