Site icon Vistara News

HD Kumaraswamy: ಯೋಗ ನಮ್ಮ ಜೀವನ ಶೈಲಿಯಾಗಬೇಕು; ಎಚ್.ಡಿ.ಕುಮಾರಸ್ವಾಮಿ

Everyone should make yoga a lifestyle says Union Minister HD Kumaraswamy

ನವದೆಹಲಿ: ಪ್ರತಿಯೊಬ್ಬರೂ ಯೋಗವನ್ನು (Yoga) ಜೀವನ ಶೈಲಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಿಳಿಸಿದರು.

ನವದೆಹಲಿಯ ನೋಯ್ಡಾದ ಭಾರತ್ ಹೆವಿ ಎಲೆಕ್ಟ್ರಿಕಲ್ ಕಂಪನಿಯ ಸಮುಚ್ಚಯದಲ್ಲಿ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತಿಗೆ ಭಾರತ ಕೊಟ್ಟ ಅಮೂಲ್ಯ ಕೊಡುಗೆ ಯೋಗ. ಯೋಗದ ಮೂಲಕ ಇಡೀ ಜಗತ್ತನ್ನು ಭಾರತ ಬೆಸೆದಿದೆ. ಯೋಗವೆಂದರೆ ‘ಜೋಡಿಸು’ ‘ಸೇರಿಸು’ ‘ಕೂಡಿಸು’ ಎಂಬ ಅರ್ಥ ಬರುತ್ತದೆ. ಅದಕ್ಕೆ ಸಾರ್ಥಕತೆ ತರುವ ನಿಟ್ಟಿನಲ್ಲಿ ಯೋಗ ಇಡೀ ಜಗತ್ತನ್ನು ಬೆಸೆದುಕೊಂಡು ಬೆಳಗುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: T20 World Cup 2024 : ಭಾರತ- ಬಾಂಗ್ಲಾ ಸೂಪರ್​ 8 ಪಂದ್ಯಕ್ಕೆ ಮಳೆ ಅಡಚಣೆ ಇದೆಯೇ?

ಋಷಿ ಮುನಿಗಳು ನಮಗೆ ಯೋಗವನ್ನು ಕೊಟ್ಟು ಹೋದರು. ಪ್ರಧಾನಿ ನರೇಂದ್ರ ಮೋದಿ ಅವರು ಯೋಗವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರಗೊಳಿಸಿ ಭಾರತದ ನೆಲದಲ್ಲಿ ನಿಂತು ಜಗತ್ತನ್ನು ನೋಡುವ ಹಿರಿಮೆಯನ್ನು ತಂದುಕೊಟ್ಟರು. ಇದಕ್ಕಾಗಿ ನಾನು ಪ್ರಧಾನಿಗಳನ್ನು ಮನಸಾರೆ ಅಭಿನಂದಿಸುತ್ತೇನೆ ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಯೋಗ ವಿಕಾಸಕ್ಕೆ ಪೂರಕ

ಯೋಗದ ಮೂಲಕ ಮಾಡುವ ಸಾಧನೆ ಭವ್ಯ ಭಾರತಕ್ಕೆ ಪೂರಕ. ವಿಕಾಸಕ್ಕೆ ಪೂರಕ. ಮನುಕುಲಕ್ಕೆ ಪೂರಕ. ಸಾಧನೆಯ ಮೆಟ್ಟಿಲೇರಲು ಕೂಡ ಪೂರಕ. ಒಟ್ಟಾರೆಯಾಗಿ ಯೋಗವು ನಮ್ಮನ್ನು ಸಾಧಕರನ್ನಾಗಿ ಮಾಡಿ ದೇಶವನ್ನು ರಚನಾತ್ಮಕವಾಗಿ ಕಟ್ಟುತ್ತದೆ ಎಂದು ಸಚಿವರು ಒತ್ತಿ ಹೇಳಿದರು.

ಯೋಗವು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಮನಸ್ಸನ್ನು ನಿಯಂತ್ರಿಸುತ್ತದೆ. ಯೋಗವು ನಮ್ಮ ಮನಸ್ಸು ಮತ್ತು ದೇಹವನ್ನು ಪುನರುಜ್ಜೀವನಗೊಳಿಸುತ್ತದೆ. ಪ್ರತಿದಿನ ಯೋಗ ಮಾಡುವ ಮೂಲಕ ನಾವೆಲ್ಲರೂ ನಮ್ಮ ದೇಹ, ಮನಸ್ಸು ಚೈತನ್ಯಶೀಲವಾಗಿರುತ್ತದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಮನಸ್ಸು, ದೇಹ ಎರಡೂ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವ ಯೋಗಕ್ಕೆ 5,000 ವರ್ಷಗಳ ಇತಿಹಾಸವಿದೆ. ಋಗ್ವೇದದಲ್ಲಿ ಯೋಗದ ಬಗ್ಗೆ ಉಲ್ಲೇಖವಿದೆ ಎಂದು ನಾನು ಕೇಳಿದ್ದೇನೆ. ಅಂತ ಯೋಗ ನಮ್ಮ ದೇಶಕ್ಕೆ ಆರೋಗ್ಯವಂತ ಮಾನವ ಸಂಪನ್ಮೂಲವನ್ನು ಸೃಷ್ಟಿ ಮಾಡುತ್ತಿದೆ. ದೃಢತೆಯ ನಾಯಕತ್ವಕ್ಕೆ ಯೋಗ ದೊಡ್ಡ ಕಾಣಿಕೆ ನೀಡುತ್ತಿದೆ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದರು.

ಪ್ರಧಾನಿಗಳು ಯುವಕರಿಗೆ ಪ್ರೇರಣೆ

ನಾನು ಕಂಡ ಹಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಯೋಗವನ್ನೇ ಬದುಕು ಮಾಡಿಕೊಂಡಿರುವ ನಿಜಯೋಗಿ. ಬಹುಶಃ ಅವರ ಜೀವನ ಶೈಲಿ, ಯೋಗದ ಕಡೆಗಿನ ಒಲವು ಈ ತಲೆಮಾರಿನ ಯುವಕರಿಗೆ ಪ್ರೇರಣೆ ಎಂದು ಬಲವಾಗಿ ನಂಬಿದೇನೆ. ಐದು ಸಾವಿರ ವರ್ಷಗಳಿಂದ ಭಾರತ ನೆಲದಲ್ಲಿ ನಮ್ಮ ಜೀವನ ಶೈಲಿಯೇ ಆಗಿರುವ ಯೋಗವನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋದ ಪ್ರಧಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.

2014ರಲ್ಲಿ ಮೋದಿ ಅವರು ಪ್ರಧಾನಿಯಾದ ನಂತರ ವಿಶ್ವಸಂಸ್ಥೆಯಲ್ಲಿ ಯೋಗ ಜಗತ್ತಿನ ಜೀವನ ಶೈಲಿ ಆಯಿತು. ಅಂದಿನಿಂದ ಯೋಗಾಭ್ಯಾಸ ಇಲ್ಲದೆ ದೇಶವೇ ಇಲ್ಲ. 2015ರಿಂದ ಪ್ರತೀ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.

ನನ್ನ ಪ್ರಕಾರ ಈ ದಿನ ಯೋಗದ ದಿನವಷ್ಟೇ ಅಲ್ಲ, ಭಾರತದ ಪಾರಂಪರಿಕ ಭವ್ಯತೆಯನ್ನು ಸಾರುವ ಸುದಿನ. ಇಡೀ ಜಗತ್ತೇ ಯೋಗವನ್ನು ಅವಲಂಬಿಸುತ್ತಿದೆ ಎಂದರೆ, ಇಡೀ ಜಗತ್ತು ಭಾರತವನ್ನು ವಿಶ್ವಗುರುವಾಗಿ ಪರಿಭಾವಿಸುತ್ತಿದೆ ಎಂದೇ ಅರ್ಥ. ಇಂಥ ದೇಶದ ಮಕ್ಕಳಾದ ನಾವು ಭಾಗ್ಯಶಾಲಿಗಳು. ನಾವರೆಲ್ಲರೂ ಯೋಗವನ್ನು ಜೀವನ ಶೈಲಿ ಮಾಡಿಕೊಳ್ಳೋಣ. ಎಲ್ಲರೂ ಯೋಗಾಭ್ಯಾಸ ಮಾಡೋಣ. ಯೋಗದಿಂದ ಆರೋಗ್ಯವಂತ ಬದುಕು, ಜೀವನ ಕಟ್ಟಿಕೊಳ್ಳೋಣ ಎಂದು ಸಚಿವರು ಕರೆ ನೀಡಿದರು.

ಇದನ್ನೂ ಓದಿ: Top 10 Motar Bike: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಬೈಕ್‌ಗಳಿವು

ಭಾರೀ ಕೈಗಾರಿಕೆ ಸಚಿವಾಲಯದ ಕಾರ್ಯದರ್ಶಿ ಕಮರನ್ ರಿಜ್ವೀ, ಬಿಎಚ್‌ಇಎಲ್‌ ಅಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕ ಕೆ. ಸದಾಶಿವಮೂರ್ತಿ, ಕಂಪನಿಯ ನಿರ್ದೇಶಕರು, ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಅನೇಕರು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

Exit mobile version