ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಗುತ್ತಿಗೆದಾರರು ವಾಹನಗಳ ನಿಲುಗಡೆಗೆ ಹೆಚ್ಚುವರಿ ಶುಲ್ಕವಸೂಲಿ ಮಾಡುವ ಮೂಲಕ ಕಿರಿಕಿರಿ ನೀಡುತ್ತಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೆಟ್ರೋ ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಮೆಟ್ರೋ ಪ್ರಯಾಣಿಕ ಸಂದೀಪ್ ನಾರಾಯಣ್, ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ದಂಧೆ ಬಗ್ಗೆ ಎಚ್ಚರವಿರಲಿ. ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ನನಗೆ ಆದ ಅನುಭವ ಹೇಳುತ್ತಿದ್ದೇನೆ. ಅಲ್ಲಿನ ಸಿಬ್ಬಂದಿ ಸುಮ್ಮನೆ ತಲೆಯಲ್ಲೇ ಲೆಕ್ಕಹಾಕಿ 30 ಅಥವಾ 40 ರೂಪಾಯಿ ನೀಡಿ ಎನ್ನುತ್ತಾರೆ. ಹೆಚ್ಚಿನ ಜನ ಗಮನಿಸದೆ ಅವರು ಕೇಳಿದಷ್ಟು ಕೊಡುತ್ತಾರೆ ಎಂದು ತಿಳಿಸಿದ್ದಾರೆ.
ಪ್ರತಿ ಬಾರಿ ನಾನು ಅವರು ಕೇಳಿದಷ್ಟು ಕೊಟ್ಟು ಹೋಗುತ್ತಿದ್ದೆ. ಆದರೆ ಒಮ್ಮೆ 3 ಗಂಟೆ 3 ನಿಮಿಷಗಳ ಪಾರ್ಕಿಂಗ್‌ಗೆ 15 ರೂಪಾಯಿ ಪಾವತಿ ಮಾಡಬೇಕಿತ್ತು. ಆಗ ರಸೀದಿ ಕೇಳಿದಾಗ ಶೇ.100 ಹೆಚ್ಚುವರಿ ಶುಲ್ಕ ವಿಧಿಸಿರುವುದು ತಿಳಿದುಬಂದಿದ್ದು, ಈ ಮೂಲಕ ಲೆಕ್ಕವಿಲ್ಲದಷ್ಟು ಹಣವನ್ನು ಸಿಬ್ಬಂದಿ ಜೇಬಿಗೆ ಇಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಲಾಕ್ ಮಾಡದಂತೆ ಒತ್ತಾಯ: ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್‌ನಲ್ಲಿ ವಾಹನ ಲಾಕ್ ಮಾಡಬೇಡಿ ಎಂದು ಸಿಬ್ಬಂದಿ ಹೇಳುತ್ತಾರೆ. ಒಂದು ವೇಳೆ ಲಾಕ್ ಮಾಡಿ ಹೋದರೆ ಆ ಪ್ರಯಾಣಿಕರನ್ನು ಬೈಯ್ದು ಬೆದರಿಕೆ ಹಾಕುತ್ತಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ನಾನು ದೂರು ನೀಡಿದ್ದೇನೆ, ಯಾರೂ ಸ್ಪಂದಿಸಿಲ್ಲ ಎಂದು ಅಮಿತ್ ಪಲ್ಲವೂರ್ ಎಂಬ ಪ್ರಯಾಣಿಕ ಫೇಸ್‌ಬುಕ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಏಕರೂಪ ಶುಲ್ಕ ಫಲಕ
ಪ್ರಯಾಣಿಕರ ದೂರುಗಳಿಗೆ ಪ್ರತಿಕ್ರಿಯಿಸಿರುವ ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು, ಪ್ರಯಾಣಿಕರ ದೂರುಗಳ ಆಧಾರದ ಮೇಲೆ ತಪ್ಪಿತಸ್ಥ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಏಕರೂಪ ಪಾರ್ಕಿಂಗ್ ಶುಲ್ಕದ ಫಲಕಗಳನ್ನು ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಅಳವಡಿಸಲು ಸೂಚಿಸಲಾಗುವುದು. ಪ್ರಯಾಣಿಕರು ಪಾರ್ಕಿಂಗ್ ವೇಳೆ ರಸೀದಿ ಪಡೆಯಬೇಕು ಎಂದು ತಿಳಿಸಿದ್ದಾರೆ. ಏತನ್ಮಧ್ಯೆ ಪಾರ್ಕಿಂಗ್ ಕಿರಿಕಿರಿಯನ್ನು ತಪ್ಪಿಸಲು ಸ್ಮಾರ್ಟ್ ಕಾರ್ಡ್ ಆಧಾರಿತ ಪಾರ್ಕಿಂಗ್ ಶುಲ್ಕ ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಅಧಿಕಾರಿಗಳು ಸ್ಮಾರ್ಟ್ ಕಾರ್ಡ್ ಶುಲ್ಕ ವ್ಯವಸ್ಥೆಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ
ಬೈಕ್‌ಗಳಿಗೆ ಪಾರ್ಕಿಂಗ್ ಶುಲ್ಕ ಮೊದಲ 4 ಗಂಟೆಗೆ 15 ರೂ., ಮತ್ತು ಪ್ರತಿ ಹೆಚ್ಚುವರಿ ಗಂಟೆಗೆ 5 ರೂ., ದಿನಕ್ಕೆ ಗರಿಷ್ಠ ಶುಲ್ಕ 30 ರೂ., ಆಗಿದೆ. ಕಾರುಗಳಿಗೆ ಪಾರ್ಕಿಂಗ್ ಶುಲ್ಕ ಮೊದಲ 4 ಗಂಟೆಗೆ 30 ರೂ., ಮತ್ತು ಪ್ರತಿ ಹೆಚ್ಚುವರಿ ಗಂಟೆಗೆ 10 ರೂ., ದಿನಕ್ಕೆ ಗರಿಷ್ಠ 60 ರೂ., ಆಗಿದೆ. ಸೈಕಲ್‌ಗಳಿಗೆ ಗಂಟೆಗೆ 1 ರೂ., ದಿನಕ್ಕೆ ಗರಿಷ್ಠ 10 ರೂ. ಆಗಿದೆ. ಹೆಚ್ಚುವರಿ ಶುಲ್ಕ ಪಡೆಯುವ ಪಾರ್ಕಿಂಗ್ ಗುತ್ತಿಗೆದಾರರ ವಿರುದ್ಧ ದೂರು ನೀಡಲು ಟೋಲ್ ಫ್ರೀ ಸಹಾಯವಾಣಿ: 1800-425-12345 ಅಥವಾ 080-251910191 ಅನ್ನು ಸಂರ್ಕಿಸಬಹುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಇದನ್ನೂ ಓದಿ | ಮನೆ ಬಾಗಿಲಿಗೆ ಮೆಟ್ರೋ : ಶೀಘ್ರವೇ ಓಡಾಡಲಿದೆ ನಿಯೋ ರೈಲು