Site icon Vistara News

Eye Donation: ನೇತ್ರದಾನ ಮಾಡಿ ದೃಷ್ಟಿಹೀನರ ಬದುಕಲ್ಲಿ ಭರವಸೆ ಮೂಡಿಸಿ: ಜಿ. ಪರಮೇಶ್ವರಪ್ಪ

Eye Donation shivamogga

#image_title

ಸಾಗರ: “ನೇತ್ರದಾನ (Eye Donation) ಅತ್ಯಂತ ಶ್ರೇಷ್ಠ ಮತ್ತು ಮಹತ್ವದ್ದಾಗಿದೆ. ನೇತ್ರದಾನ ಮಾಡುವುದರಿಂದ ಕತ್ತಲಿನಲ್ಲಿರುವವರಿಗೆ ಬೆಳಕಿನ ಭಾಗ್ಯ ಕೊಟ್ಟ ಪುಣ್ಯ ಬರುತ್ತದೆ” ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಪರಮೇಶ್ವರಪ್ಪ ತಿಳಿಸಿದರು.

ಪುನೀತ್ ರಾಜಕುಮಾರ್ ಅವರ ಜನ್ಮ ದಿನದ ಅಂಗವಾಗಿ ಘೋಷಣೆ ಮಾಡಿರುವ ಸ್ಫೂರ್ತಿ ದಿನದ ಪ್ರಯುಕ್ತ ಇಲ್ಲಿನ ಸರ್ಕಾರಿ ನೌಕರರ ಸಂಘ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ವಿವಿಧ ವೃತ್ತಿ ಸಂಘಗಳ ಆಶ್ರಯದಲ್ಲಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ್ದ ನೇತ್ರದಾನ ನೋಂದಣಿ ಶಿಬಿರದಲ್ಲಿ ಅವರು ನೇತ್ರದಾನಕ್ಕೆ ನೋಂದಣಿ ಮಾಡಿದವರಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದರು.

ಇದನ್ನೂ ಓದಿ: Amrit Pal Singh: ಖಲಿಸ್ತಾನ ಪ್ರತ್ಯೇಕ ರಾಷ್ಟ್ರದ ವಿಷಬೀಜ ಬಿತ್ತುತ್ತಿರುವ ಅಮೃತ್‌ ಪಾಲ್‌ ಸಿಂಗ್‌ ಬಂಧನ

“ಮನುಷ್ಯನಿಗೆ ದೃಷ್ಟಿ ಅತ್ಯಗತ್ಯ. ನಮ್ಮ ನಡುವೆ ಕಣ್ಣಿಲ್ಲದವರು ಸಾಕಷ್ಟು ಜನರಿದ್ದು ಸಂಕಷ್ಟಮಯ ಜೀವನವನ್ನು ನಡೆಸುತ್ತಿದ್ದಾರೆ. ಅಂತಹವರ ಬದುಕಿನಲ್ಲಿ ಭರವಸೆ ತುಂಬಲು ಇಂತಹ ಸತ್ಕಾರ್ಯಗಳಲ್ಲಿ ಪ್ರತಿಯೊಬ್ಬರೂ ತೊಡಗಿಕೊಳ್ಳಬೇಕು. ಚಿತ್ರನಟ ಪುನೀತ್ ರಾಜಕುಮಾರ್ ಅವರ ಜನ್ಮ ದಿನದ ಪ್ರಯುಕ್ತ ನಡೆಸುತ್ತಿರುವ ಈ ಮಹತ್ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು” ಎಂದು ಮನವಿ ಮಾಡಿದರು.

ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಜಗನ್ನಾಥ್ ಮಾತನಾಡಿ, “ಚಿತ್ರನಟ ಪುನೀತ್ ರಾಜಕುಮಾರ್ ಅಲ್ಪ ಕಾಲ ನಮ್ಮ ನಡುವೆ ಇದ್ದರೂ ಅವರು ಯಾರಿಗೂ ತಿಳಿಯದಂತೆ ದಾನ ಧರ್ಮಗಳ ಮೂಲಕ ನಾಡಿಗೆ ಉತ್ತಮ ಸಂದೇಶವನ್ನು ನೀಡಿದ್ದಾರೆ. ಪುನೀತ್ ರಾಜಕುಮಾರ್ ಅವರಿಂದ ಪ್ರೇರಣೆಗೊಂಡು ಜನರು ಸಹ ದಾನಧರ್ಮದಂತಹ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಒಂದರ್ಥದಲ್ಲಿ ಪುನೀತ್ ರಾಜಕುಮಾರ್ ಎಲ್ಲರಿಗೂ ರೋಲ್ ಮಾಡೆಲ್ ಆಗಿದ್ದಾರೆ. ಅವರ ಜನ್ಮ ದಿನವನ್ನು ಸರ್ಕಾರ ಸ್ಫೂರ್ತಿ ದಿನವಾಗಿ ಘೋಷಣೆ ಮಾಡಿರುವುದು ಹೆಚ್ಚು ಅರ್ಥಪೂರ್ಣವಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: ಇಂಡಿಗೋ ವಿಮಾನದ ಟಾಯ್ಲೆಟ್‌ನಲ್ಲಿ ಸಿಗರೇಟ್‌ ಸೇದಿ ಸಿಕ್ಕಿಬಿದ್ದ; ಒಂದು ಸಿಗರೇಟ್‌ಗಾಗಿ ಜೈಲು ಸೇರಿದ!

ವೇದಿಕೆಯಲ್ಲಿ ಉರ್ದು ಪ್ರೌಢಶಾಲೆ ಮುಖ್ಯ ಶಿಕ್ಷಕ ದತ್ತಾತ್ರೇಯ ಭಟ್, ಪ್ರಮುಖರಾದ ಅಣ್ಣೋಜಿ ರಾವ್, ಮಹಾಬಲೇಶ್ವರ ಜಿ., ವೈ. ಮೋಹನ್, ಮನೋಹರಪ್ಪ ಡಿ., ವಿ.ಟಿ.ಸ್ವಾಮಿ, ಮೂರ್ತಿ ಎಂ.ವೈ. ಇನ್ನಿತರರು ಹಾಜರಿದ್ದರು. ಶೈಲಜಾ ಹೆಗಡೆ ಪ್ರಾರ್ಥಿಸಿದರು. ಗವಿಯಪ್ಪ ಎಲ್.ಟಿ. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸೋಮಪ್ಪ ಎಚ್. ವಂದಿಸಿದರು. ಮಾಲತೇಶ್ ನಿರೂಪಿಸಿದರು.

Exit mobile version