ಮಂಗಳೂರು: ನಾಗುರಿ ಬಳಿಯ ಆಟೋ ಸ್ಫೋಟಗೊಂಡ ಕ್ಷಣ ಮತ್ತು ನಂತರ ಏನಾಯ್ತು ಎಂಬುದನ್ನು ಪ್ರತ್ಯಕ್ಷ ದರ್ಶಿ ಸುಬಾಷ್ ಶೆಟ್ಟಿ ಎಂಬುವರು ವಿಸ್ತಾರ ನ್ಯೂಸ್ಗೆ ತಿಳಿಸಿದ್ದಾರೆ. ‘ನನ್ನ ತರಕಾರಿ ಅಂಗಡಿ ಸಮೀಪವೇ ಆಟೋ ಸ್ಫೋಟವಾಗಿದೆ. ನಾನು ಮೊದಲು ಅದು ಸಿಲಿಂಡರ್ ಗ್ಯಾಸ್ ಸ್ಫೋಟದಿಂದ ಉಂಟಾದ ಸ್ಫೋಟ’ ಎಂದು ಕೊಂಡೆ ಎಂದು ಸುಭಾಷ್ ಶೆಟ್ಟಿ ಹೇಳಿದ್ದಾರೆ.
‘ಬೆಳಗ್ಗೆ ಅಂಗಡಿಯಲ್ಲಿ ಕುಳಿತಿದ್ದೆ. ಅದೇ ರಸ್ತೆಯಲ್ಲಿ ಹೋದ ಆಟೋ ಒಮ್ಮೆಲೇ ಸ್ಫೋಟಗೊಂಡಿತು. ಹತ್ತಿರ ಹೋದಾಗ ಆಟೋಕ್ಕೆಲ್ಲ ಬೆಂಕಿ ಹೊತ್ತಿಕೊಂಡಿತ್ತು. ಅದರಲ್ಲಿ ಕುಳಿತಿದ್ದ ಪ್ರಯಾಣಿಕನ ಮೈಯಿಗೂ ಬೆಂಕಿ ತಗುಲಿತ್ತು. ಆ ಚಾಲಕನ ತಲೆಯೆಲ್ಲ ಸುಟ್ಟು ಹೋಗಿತ್ತು. ಆತ ನನಗೆ ಪರಿಚಯದವನೇ. ಕೂಡಲೇ ಅವನ ಮೈಮೇಲೆಲ್ಲ ನೀರು ಹಾಕಿ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದೆವು. ಅದರಲ್ಲಿದ್ದ ಪ್ರಯಾಣಿಕನಿಗೂ ಬೆಂಕಿ ತಗುಲಿತ್ತು. ಆತ ಎರಡು ಶರ್ಟ್ ಹಾಕಿಕೊಂಡಿದ್ದ. ಮೇಲಿದ್ದ ಶರ್ಟ್, ಕೈಯೆಲ್ಲ ಸುಟ್ಟಿತ್ತು. ಆ ಶರ್ಟ್ ತೆಗೆದು, ಅವನ ಮೈಮೇಲೆಯೂ ನೀರು ಹಾಕಿ ಆಸ್ಪತ್ರೆಗೆ ಕಳಿಸಿಕೊಟ್ಟೆವು. ನಂತರ ಪೊಲೀಸ್ ಸ್ಟೇಶನ್ಗೆ ಫೋನ್ ಮಾಡಿದೆ. ಅವರು ಬಂದ ನಂತರ ನಾವು ವಾಪಸ್ ಬಂದೆವು’ ಎಂದು ಸುಭಾಷ್ ಶೆಟ್ಟಿ ತಿಳಿಸಿದ್ದಾರೆ.
ಇನ್ನು ಸ್ಫೋಟವಾದಾಗ ದೊಡ್ಡ ಆಟಂಬಾಂಬ್ ಪಟಾಕಿ ಹೊಡೆದಾಗ ಹೇಗೆ ಶಬ್ದವಾಗುತ್ತದೆಯೋ, ಹಾಗೇ ಶಬ್ದ ಬಂತು. ಭಯಂಕರ ಹೊಗೆ ಬಂತು. ಆದರೆ ಯಾವುದೇ ವಾಸನೆ ಇರಲಿಲ್ಲ ಎಂದು ಹೇಳಿದ ಸುಭಾಷ್ ಶೆಟ್ಟಿ, ನಾವು ಆಟೋಕ್ಕೆ ನೀರು ಹಾಕಿ, ಬೆಂಕಿ ನಂದಿಸಿ ರಸ್ತೆಯಿಂದ ಆಚೆ ನಿಲ್ಲಿಸಿದೆವು. ಆ ಆಟೋ ಚಾಲಕ ಪರಿಚಯಸ್ಥನೇ ಆಗಿದ್ದರಿಂದ, ಪ್ರಯಾಣಿಕನ ಬಗ್ಗೆಯೂ ಕಾಳಜಿ ವಹಿಸಿದೆವು. ಆತನೊಬ್ಬ ಖದೀಮ ಎಂಬುದೆಲ್ಲ ನಮಗೆ ಗೊತ್ತಿಲ್ಲ. ಆ ಕ್ಷಣದಲ್ಲಿ ನಾವು ಅವನ ಬಳಿ ಮಾತನ್ನೂ ಆಡಲಿಲ್ಲ, ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಅವನ ಮೈಯಿಗೆಲ್ಲ ಬೆಂಕಿ ತಾಗಿತ್ತು. ಅರ್ಧ ಸುಟ್ಟು ಹೋಗಿತ್ತು. ಹಾಗಾಗಿ ಆಸ್ಪತ್ರೆಗೆ ದಾಖಲು ಮಾಡಿದೆವು ಎಂದು ಹೇಳಿದ್ದಾರೆ.
‘ಪ್ರಯಾಣಿಕ ಮತ್ತು ಚಾಲಕ ಇಬ್ಬರನ್ನೂ ಆಸ್ಪತ್ರೆಗೆ ಕಳಿಸಿದ ಬಳಿಕ ಆಟೋ ನೋಡಿದ್ದೇವೆ. ಆಗ ಹಿಂಬದಿಯ ಸೀಟ್ನ ಅಡಿಗೆ ಒಂದು ಕುಕ್ಕರ್ ಇತ್ತು. ಚಿಕ್ಕಚಿಕ್ಕ ನಟ್-ಬೋಲ್ಟ್ಗಳು ಇದ್ದವು. ವೈಯರ್, ಸಣ್ಣಸಣ್ಣ ಬ್ಯಾಟರಿಗಳು ಮತ್ತು ಒಂದು ಬಗೆಯ ಪೌಡರ್ ಇತ್ತು. ಮೇಲ್ನೋಟಕ್ಕೆ ನೋಡಿದರೆ ಇದೊಂದು ಭಯೋತ್ಪಾದಕ ಕೃತ್ಯ ಎಂದು ಗೊತ್ತಾಗುವುದಿಲ್ಲ’ ಎಂದು ಸುಭಾಷ್ ಶೆಟ್ಟಿ ತಿಳಿಸಿದ್ದಾರೆ.
ಇಬ್ಬರು ಚೀರುತ್ತ, ಓಡುತ್ತಿದ್ದರು
ಹಾಗೇ, ಇನ್ನೊಬ್ಬ ಪ್ರತ್ಯಕ್ಷದರ್ಶಿ ಆಶಾ ಎಂಬುವರು ವಿಸ್ತಾರ ನ್ಯೂಸ್ ಜತೆ ಮಾತನಾಡಿ ‘ನಾಗುರಿ ಬಳಿ ಹೋಟೆಲ್ ಸಮೀಪವೇ ಆಟೋ ಸ್ಫೋಟ ಉಂಟಾಗಿದೆ. ಏನು ಶಬ್ದ ಎಂದು ನೋಡಿದರೆ, ಅಲ್ಲಿ ಇಬ್ಬರು ಚೀರುತ್ತ, ಓಡುತ್ತಿದ್ದರು. ಒಬ್ಬನ ಮೈಯಂತೂ ಪೂರ್ತಿಯಾಗಿ ಬೆಂಕಿಯಾಗಿತ್ತು. ಇನ್ನೊಬ್ಬನಿಗೂ ಮೈ ಸುಟ್ಟಿತ್ತು. ಸ್ಥಳೀಯರೆಲ್ಲ ಸೇರಿ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿದರು. ಬಳಿಕ ಆಟೋವನ್ನು ಅಲ್ಲಿಂದ, ರಸ್ತೆ ಬದಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Mangalore Blast | ಆಟೋ ಸ್ಫೋಟ ಹಿಂದೆ ಇದ್ದವನ ಬಗ್ಗೆ ಗೊತ್ತಾಗಿದೆ, ಲಿಂಕ್ ಪತ್ತೆಗೆ ನಮ್ಮ ತಂಡ ಹೋಗಿದೆ: ಎಡಿಜಿಪಿ