ಬೆಂಗಳೂರು: ಸಾಮಾಜಿಕ ಮಾಧ್ಯಮಗಳಾದ ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಸುದ್ದಿ ಪ್ರಸರಣ ಮಾಡುವ ಮುನ್ನ ಸುಳ್ಳು ಮತ್ತು ನೈಜ ಸುದ್ದಿಗಳ (Fake and real news) ನಡುವಿನ ಸತ್ಯಾಸತ್ಯತೆಯನ್ನು ಕಂಡು ಹಿಡಿಯಬೇಕು. ಈ ಕಾರಣಕ್ಕಾಗಿ ಪತ್ರಕರ್ತರು ಮತ್ತು ಸಾರ್ವಜನಿಕರು ಫ್ಯಾಕ್ಟ್ ಚೆಕ್ (Fact Check) ಮಾಡಬೇಕು” ಎಂದು ಗೂಗಲ್ ನ್ಯೂಸ್ ಇನ್ಷಿಯೇಟಿವ್ ಇಂಡಿಯಾ ಟ್ರೈನಿಂಗ್ ನೆಟ್‌ವರ್ಕ್ ಮತ್ತು ಡೇಟಾ ಲೀಡ್ಸ್ ಸಂಸ್ಥೆಯ ತರಬೇತುದಾರರು ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನ ಕಲೆ, ಮಾನವೀಯ ಮತ್ತು ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥೆ ಶಿಲ್ಪಾ ಕಲ್ಯಾಣ್ ಸಲಹೆ ನೀಡಿದರು.
ಕರ್ನಾಟಕ ಪತ್ರಕರ್ತೆಯರ ಸಂಘ, ಸಾರಥಿ ಸಂಪನ್ಮೂಲ ಸಂಸ್ಥೆ ಮತ್ತು ಗೂಗಲ್ ನ್ಯೂಸ್ ಇನ್ಷಿಯೇಟಿವ್ ಸಹಯೋಗದಲ್ಲಿ ಶನಿವಾರ ನಡೆದ ‘ಫ್ಯಾಕ್ಟ್ ಚೆಕ್ ಮತ್ತು ಸುಳ್ಳು ಸುದ್ದಿ ಪತ್ತೆ ಹಚ್ಚುವಿಕೆ’ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, “ಯಾವುದೇ ಚಿತ್ರ ಅಥವಾ ವಿಡಿಯೊದ ನೈಜ ಮೂಲ ಮತ್ತು ವಿಷಯದ ನಿಖರತೆಯನ್ನು ಪರಿಶೀಲಿಸಲು ರಿವರ್ಸ್ ಇಮೇಜ್ ಸರ್ಚ್ ಎಂಜಿನ್‌ಗಳು, ಜಿಯೋ ಲೊಕೇಶನ್ ಪರಿಕರಗಳು, ಗೂಗಲ್ ಲೆನ್ಸ್ ಸೇರಿದಂತೆ ಇತರ ಅಪ್ಲಿಕೇಶನ್‌ಗಳು ಮತ್ತು ಇತರ ಆನ್‌ಲೈನ್ ಪರಿಕರಗಳನ್ನು ಬಳಸಬೇಕು” ಎಂದು ಅವರು ಹೇಳಿದರು.
ಕಾರ್ಯಾಗಾರ ಉದ್ಘಾಟಿಸಿದ ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಮಾತನಾಡಿ, “ಸುಳ್ಳು ಸುದ್ದಿಗಳು ಸಮುದ್ರದಂತೆ ವ್ಯಾಪಿಸಿದ್ದು, ಅವುಗಳ ನಿಖರತೆಯನ್ನು ಪರಿಶೀಲಿಸುವ ಮೂಲಕ ಅದನ್ನು ಖಚಿತಪಡಿಸಿಕೊಳ್ಳಬೇಕು”’ ಎಂದು ಹೇಳಿದರು.
“ಸುಳ್ಳು ಹಾಗೂ ತಪ್ಪು ಮಾಹಿತಿಗಳನ್ನು ಜನರು ನಿಜವೆಂದು ನಂಬುತ್ತಿದ್ದಾರೆ. ಇದು ಇತಿಹಾಸದ ಪುಟಗಳಲ್ಲಿಯೂ ನುಸುಳುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ಜನರಿಗೆ ನಿಖರ ಮಾಹಿತಿ ನೀಡುವ ಪತ್ರಕರ್ತರಿಗೂ ಗೊಂದಲಗಳಾಗುತ್ತಿದ್ದು, ಅವುಗಳನ್ನು ಬಿತ್ತರಿಸುವ ಮುನ್ನ ಹಲವಾರು ಬಾರಿ ಪರಿಶೀಲಿಸುವ ಅಗತ್ಯವಿದೆ. ಹಾಗಾಗಿ ತಪ್ಪು ಮತ್ತು ಸುಳ್ಳು ಮಾಹಿತಿಯನ್ನು ತಡೆಯಲು ಫ್ಯಾಕ್ಟ್ ಚೆಕ್ ಅಗತ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಪತ್ರಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ, ಸಾರಥಿ ಸಂಸ್ಥೆಯ ಸಂಸ್ಥಾಪಕಿ ಶಮಂತ ಡಿ.ಎಸ್., ಪತ್ರಕರ್ತೆಯರಾದ ಚೇತನಾ ಬೆಳಗೆರೆ, ಹಲಿಮತ್ ಸಾದಿಯಾ, ಮಿನಿ ತೇಜಸ್ವಿ, ಗೊರೂರು ಪಂಕಜ, ಯೂಸುಫ್ ಪಟೇಲ್ ಮತ್ತಿತರರು ಇದ್ದರು.
ಇದನ್ನೂ ಓದಿ: BJP Manifesto: ಪ್ರದೇಶವಾರು ಭರವಸೆ ನೀಡಿದ ಬಿಜೆಪಿ ಪ್ರಣಾಳಿಕೆ: ಹಳೇ ಮೈಸೂರಿಗೆ ಭರ್ಜರಿ ಆಫರ್!
ಕಾರ್ಯಾಗಾರದಲ್ಲಿ ನಗರದ ವಿವಿಧ ಕಾಲೇಜುಗಳ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.