ಗದಗ: ಶ್ರೀಗಳ ಜಯಂತಿ ವಿಚಾರವಾಗಿ ಜಿಲ್ಲೆಯ ಎರಡು ಪ್ರಮುಖ ಮಠಗಳ ನಡುವೆ ಸಂಘರ್ಷ ಉಂಟಾಗಿದೆ. ತೋಂಟದ ಸಿದ್ದಲಿಂಗ ಶ್ರೀಗಳ ಜಯಂತಿಯನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸುತ್ತಿರುವುದಕ್ಕೆ ಶಿರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಭಾವೈಕ್ಯತೆಯ ಪರಂಪರೆಯು ಶಿರಹಟ್ಟಿಯ ಫಕೀರೇಶ್ವರ ಮಠದ್ದಾಗಿದೆ. ಆದರೆ, ತೋಂಟದಾರ್ಯ ಮಠವು ವಿರಕ್ತಮಠದ ಸಂಪ್ರದಾಯ ಹೊಂದಿದ್ದು, ಆ ಮಠದ ಸ್ವಾಮೀಜಿಗೆ ʼಭಾವೈಕ್ಯತೆಯ ಹರಿಕಾರʼ ಎಂಬ ಬಿರುದು ಅನ್ವಯ ಆಗೋದಿಲ್ಲ ಎಂದು ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಶ್ರೀಗಳು, ಫೆಬ್ರವರಿ 21ರಂದು ತೋಂಟದ ಸಿದ್ದಲಿಂಗ ಸ್ವಾಮೀಜಿಗಳ 75ನೇ ಜಯಂತಿಯನ್ನು ಭಾವೈಕ್ಯತಾ ದಿನವಾಗಿ ಆಚರಣೆ ಮಾಡುತ್ತಿದ್ದಾರೆ. ಆದರೆ, ಲಿಂಗೈಕ್ಯ ಡಾ. ಸಿದ್ದಲಿಂಗ ಸ್ವಾಮೀಜಿಯವರಿಗೆ ಭಾವೈಕ್ಯತೆಯ ಹರಿಕಾರ ಎಂಬ ಪದ ಅನ್ವಯ ಆಗುವುದಿಲ್ಲ. ಹೀಗಾಗಿ ಅವರನ್ನು ಭಾವೈಕ್ಯತಾ ಹರಿಕಾರ ಎಂದು ಕರೆಯಬಾರದು ಎಂದು ಈಗಿನ ತೋಂಟದಾರ್ಯ ಮಠದ ಶ್ರೀಗಳಾದ ಸಿದ್ದರಾಮ ಸ್ವಾಮೀಜಿಗಳಿಗೆ ಮನವಿ ಮಾಡಿದ್ದಾರೆ.
ಬೃಹತ್ ಹೋರಾಟದ ಎಚ್ಚರಿಕೆ
ಶಿರಹಟ್ಟಿ ಫಕೀರೇಶ್ವರ ಮಠ ಹಿಂದು- ಮುಸ್ಲಿಂ ಭಾವ್ಯಕ್ಯತೆಯ ಸಂಪ್ರದಾಯ ಹೊಂದಿರುವ ಮಠ. ತೋಂಟದಾರ್ಯ ಮಠ ವಿರಕ್ತಮಠ ಮಠದ ಸಂಪ್ರದಾಯ ಹೊಂದಿದೆ. ಹೀಗಾಗಿ ಭಾವೈಕ್ಯತಾ ದಿನ ಆಚರಣೆ ನಮ್ಮ ವಿರೋಧ ಇದೆ. ಅವರು ಭಾವೈಕ್ಯತಾ ದಿನ, ಭಾವೈಕ್ಯತಾ ಯಾತ್ರೆ ಪದವನ್ನು ಬಳಸಬಾರದು. ನಮ್ಮ ಮನವಿಗೆ ಸ್ಪಂದಿಸದಿದ್ದರೆ ತೋಂಟದಾರ್ಯ ಮಠದ ಬೀದಿಯಲ್ಲಿ ಬೃಹತ್ ಹೋರಾಟ ನಡೆಸಲಾಗುವುದು. ಒಂದು ವೇಳೆ ಭಾವೈಕ್ಯತಾ ದಿನ ಆಚರಿಸಿದರೆ ಶಿರಹಟ್ಟಿ ಮಠದ ಭಕ್ತರಿಂದ ಕರಾಳ ದಿನ ಆಚರಿಸಲಾಗುವುದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Residential Schools: ಜ್ಞಾನ ದೇಗುಲ ವಿವಾದ; ಧೈರ್ಯವಾಗಿ ಯಾರನ್ನು ಪ್ರಶ್ನಿಸಬೇಕು; ಈ ವಾಕ್ಯ ಬರೆದಿದ್ದು ಯಾರು?; ಬಿಜೆಪಿ ಪ್ರಶ್ನೆ
ಈ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾವೈಕ್ಯತಾ ದಿನ ಘೋಷಣೆ ಮಾಡಿದ್ದರು. ಆಗ ಹೋರಾಟದ ಫಲವಾಗಿ ಅಂದಿನ ಸಿಎಂ ಸುಮ್ಮನಾಗಿದ್ದರು. ಈಗ ಶ್ರೀಮಠದ ಆಮಂತ್ರಣ ಪತ್ರಿಕೆಯಲ್ಲಿ ಭಾವೈಕ್ಯತಾ ದಿನ ಪ್ರಸ್ತಾಪವಾಗಿದೆ. ಯಾವುದೇ ಕಾರಣಕ್ಕೂ ತೋಂಟದಾರ್ಯ ಮಠದಿಂದ ಭಾವೈಕ್ಯತಾ ದಿನ ಆಚರಿಸಕೂಡದು ಆಗ್ರಹಿಸಿದ್ದಾರೆ.