ಬೆಂಗಳೂರು: ವಿದ್ಯುತ್ ತಂತಿ ತುಳಿದು ತಾಯಿ-ಮಗು ದುರಂತ ಸಾವಿನ ನಡುವೆ (Current shock) ಇತ್ತ ಎರಡು ಕುಟುಂಬಸ್ಥರು ಗಲಾಟೆ ಮಾಡಿಕೊಂಡಿದ್ದಾರೆ. ಮೃತದೇಹಗಳನ್ನು ಕೊಂಡೊಯ್ಯುವ ವಿಚಾರಕ್ಕೆ ವಾಗ್ವಾದ ನಡೆದು ಆಸ್ಪತ್ರೆ ಮುಂಭಾಗವೇ ಕಿತ್ತಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಕೈ-ಕೈ ಮೀಲಾಯಿಸುವ ಹಂತಕ್ಕೆ ತಲುಪಿದಾಗ ಪೊಲೀಸರು ಮಧ್ಯ ಪ್ರವೇಶ ಮಾಡಿದ್ದಾರೆ.
ಆ್ಯಂಬುಲೆನ್ಸ್‌ನಲ್ಲಿ ಶವ ಇಟ್ಟು ಪರಿಹಾರದ ಹಣ ಹಾಗೂ ಮೃತದೇಹಗಳು ನಮಗೆ ಸಿಗಬೇಕು ಎಂದು ಕಿತ್ತಾಡಿದ್ದಾರೆ. ಮೃತಳ ಗಂಡನ ಕಡೆಯವರು ಮತ್ತೊಂದು ಆ್ಯಂಬುಲೆನ್ಸ್ ತರಿಸಿದ್ದಾರೆ. ಮೃತಳಿಗೆ ಹೆತ್ತವರು ಇಲ್ಲ, ಆದರೆ ಅವರ ಚಿಕ್ಕಮ್ಮ ಸಹಿ ಹಾಕಿ ಮೃತದೇಹವನ್ನು ಪಡೆದುಕೊಂಡಿದ್ದಾರೆ. ಗಂಡನ ಮನೆಯವರಿಗೆ ಸ್ವಲ್ಪವೂ ಮರ್ಯಾದೆ ಇಲ್ಲ. ಮೃತಳ ಗಂಡ ಆಸ್ಪತ್ರೆಯಲ್ಲಿಯೇ ಕಾಯುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಏನಿದು ಪ್ರಕರಣ?
ರಾಜಧಾನಿಯಲ್ಲಿ ಅತ್ಯಂತ ಆತಂಕಕಾರಿ ಮತ್ತು ಹೃದಯ ಹಿಂಡುವ ಘಟನೆ ನಡೆದಿತ್ತು. ತನ್ನ ಪುಟ್ಟ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ವಿದ್ಯುತ್ ಆಘಾತಕ್ಕೆ (Electricuted) ಒಳಗಾಗಿ ಮಗುವಿನೊಂದಿಗೆ ಸುಟ್ಟು ಕರಕಲಾಗಿದ್ದರು. (Mother and Child dead). ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ (BESCOM Negligence) ತಾಯಿ-ಮಗು ಬಲಿಯಾಗಿದ್ದರು.
ತಾಯಿ ಸೌಂದರ್ಯ ಮತ್ತು ಪುಟ್ಟ ಮಗಳು ಲಿಯಾ ಮೃತಪಟ್ಟ ದುರ್ದೈವಿಗಳು. ವೈಟ್ ಫೀಲ್ಡ್ ಸಮೀಪದ ಹೋಪ್ ಫಾರ್ಮ್ ಸರ್ಕಲ್ ಬಳಿ ದುರ್ಘಟನೆ ನಡೆದಿತ್ತು. ಬೆಂಗಳೂರಿನಲ್ಲಿ ವಾಸವಾಗಿದ್ದ ಸೌಂದರ್ಯ ತಮ್ಮ ಪತಿ ಸಂತೋಷ್ ಮತ್ತು ಮಗುವಿನೊಂದಿಗೆ ತಮಿಳುನಾಡಿನ ತಾಯಿ ಮನೆಗೆ ಹೋಗಿದ್ದರು.
ಶನಿವಾರ ರಾತ್ರಿ ಅವರು ಅಲ್ಲಿಂದ ಹೊರಟು ಬೆಳಗ್ಗೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಬಸ್ಸಿನಿಂದ ಇಳಿದಿದ್ದರು. ಬೆಳಗ್ಗೆ ಐದು ಗಂಟೆಯ ಹೊತ್ತಿಗೆ ಬಸ್ಸಿನಿಂದ ಇಳಿದು ಸಂತೋಷ್, ಸೌಂದರ್ಯ ಪುಟ್ಟ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಅವರು ವೈಟ್ ಫೀಲ್ಡ್ ಸಮೀಪದ ಓಫಾರ್ಮ್ ಸರ್ಕಲ್ ಬಳಿ ಮನೆ ಕಡೆಗೆ ಸಾಗುತ್ತಿದ್ದರು.
ಈ ವೇಳೆ ರಸ್ತೆ ಬದಿ ತುಂಡಾಡಿ ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಅವರಿಗೆ ಕಾಣಿಸಲಿಲ್ಲ . ಕತ್ತಲಲ್ಲಿ ಅವರು ವಿದ್ಯುತ್ ತಂತಿಯನ್ನು ತುಳಿದಿದ್ದರು. ಮತ್ತು ಒಮ್ಮೆಗೇ ವಿದ್ಯುತ್ ಅವರ ದೇಹದಲ್ಲಿ ಪ್ರವಹಿಸಿ ತಾಯಿ ಮತ್ತು ಮಗು ಸ್ಥಳದಲ್ಲೇ ಸುಟ್ಟು ಕರಕಲಾಗಿ ಹೋಗಿದ್ದರು.
ಇದನ್ನೂ ಓದಿ: ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣ; ಇಬ್ಬರು ಅಧಿಕಾರಿಗಳ ಅಮಾನತು
ಐವರ ಬಂಧನ
ವಿದ್ಯುತ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಕಾಡುಗುಡಿ ಪೊಲೀಸರು ಬಂಧಿಸಿದ್ದರು. ನಿರ್ಲಕ್ಷ್ಯದ ಆರೋಪದಡಿ ಬೆಸ್ಕಾಂ ವೈಟ್‌ಫೀಲ್ಡ್ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀರಾಮ್, ಅಸಿಸ್ಟೆಂಟ್ ಎಂಜಿನಿಯರ್ ಚೇತನ್, ಎಇಇ ಸುಬ್ರಮಣ್ಯ, ಜೂನಿಯರ್ ಎಂಜಿನಿಯರ್ ರಾಜಣ್ಣ ಹಾಗೂ ಸ್ಟೇಷನ್ ಆಪರೇಟರ್ ಮಂಜು ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಸ್ಟೇಷನ್ ಬೇಲ್ ಮೇಲೆ ಎಲ್ಲರನ್ನು ಬಿಡುಗಡೆ ಮಾಡಲಾಗಿದೆ.
ಇಬ್ಬರ ಸಾವಿಗೆ ಬಿಎಂಟಿಸಿ ಬಸ್ ಡ್ರೈವರ್ ಕೂಡ ಕಾರಣ?
ವಿದ್ಯುತ್ ತಗುಲಿ ತಾಯಿ-ಮಗು ಮೃತಪಡಲು ಬಿಎಂಟಿಸಿ ಬಸ್ ಡ್ರೈವರ್ ಕೂಡ ಕಾರಣ ಎಂಬ ಆರೋಪ ಕೇಳಿಬಂದಿದೆ. ಸಿಗ್ನಲ್ ಬಿದ್ದಿದೆ ಎಂದು ಘಟನೆ ನಡೆದಿದ್ದ ಸ್ಥಳದಲ್ಲಿ ಬಸ್ ಚಾಲಕ ಡೋರ್ ಓಪನ್ ಮಾಡಿದ್ದ. ಸ್ಥಳದಿಂದ ನೂರು ಮೀಟರ್ ದೂರದಲ್ಲಿ ಬಸ್ ನಿಲ್ದಾಣವಿತ್ತು. ಆದರೂ ಮೊದಲೇ ನಿಲ್ಲಿಸಿದ್ದರಿಂದ ತಾಯಿ-ಮಗು ಇಳಿದು ನಡೆದುಕೊಂಡು ಹೋಗಿದ್ದರಿಂದ ವಿದ್ಯುತ್ ತಂತಿ ತುಳಿದು ದುರಂತಕ್ಕೆ ಕಾರಣವಾಗಿದೆ. ಹೀಗಾಗಿ ಬಸ್ ಚಾಲಕನ ವಿರುದ್ಧವೂ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.
ನ್ಯಾಯಕ್ಕಾಗಿ ಆಗ್ರಹಿಸಿ ಸಂಬಂಧಿಕರ ಪ್ರತಿಭಟನೆ
ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವಿಗೀಡಾದ್ದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು, ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಮೃತರ ಕುಟುಂಬಸ್ಥರು, ಸ್ಥಳೀಯರು ಕಾಡುಗುಡಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಬೆಸ್ಕಾಂಗೆ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ನ್ಯಾಯಕ್ಕಾಗಿ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.