ಬೆಳಗಾವಿ: ಕುಲವಳ್ಳಿ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಹುನ್ನಾರ ವಿರೋಧಿಸಿ 9 ಹಳ್ಳಿಗಳ ಜನರು, ಕಿತ್ತೂರು ಪಟ್ಟಣದ ಚೆನಮ್ಮ ವೃತ್ತದ ಬಳಿ ಶುಕ್ರವಾರ ಬೃಹತ್ ಪ್ರತಿಭಟನೆ (Farmers Protest) ನಡೆಸಿದರು. ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಬರುವಂತೆ ಆಗಮಿಸಬೇಕು ಎಂದು ಪಟ್ಟು ಹಿಡಿದ ರೈತರು, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಹೀಗಾಗಿ ಪ್ರತಿಭಟನಾಕಾರರನ್ನು ಪೊಲೀಶರು ವಶಕ್ಕೆ ಪಡೆದರು.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಮಸ್ಥರು ಸೇರಿ 9 ಹಳ್ಳಿಗಳಿಂದ ಜಾನುವಾರು, ಟ್ರ್ಯಾಕ್ಟರ್ ಸಮೇತ ಸಾವಿರಾರು ಜನರು, ಕಿತ್ತೂರು ಚೆನ್ನಮ್ಮ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು. ಸದ್ಯ 9 ಹಳ್ಳಿಗಳ ರೈತರ ಸಾಗುವಳಿ ಜಮೀನನ್ನು ಕಂದಾಯ ಅಧಿಕಾರಿಗಳು ಇನಾಮದಾರ್ ಹೆಸರಿಗೆ ಖಾತೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ 70 ವರ್ಷದಿಂದ ಉಳುಮೆ ಮಾಡಿರುವ ರೈತರು, ತಮ್ಮ ಜಮೀನು ಬಿಟ್ಟು ಕೊಡುವಂತೆ ಒತ್ತಾಯಿಸಿದರು.
ಚೆನ್ನಮ್ಮ ವೃತ್ತದ ಬಳಿ ರಸ್ತೆ ಬಂದ್ ಮಾಡಿದ್ದರಿಂದ ವಾಹನ ಸವಾರರು ಪರದಾಡಿದರು. ಈ ಹಿನ್ನೆಲೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬೆಳಗಾವಿಯ ಅಡಿಷನಲ್ ಎಸ್ಪಿ ಎಂ. ವೇಣುಗೋಪಾಲ್ ಆಗಮಿಸಿ ಬಿಗಿ ಬಂದೋಬಸ್ತ್‌ಗೆ ಕ್ರಮ ಕೈಗೊಂಡಿದ್ದಾರೆ. ಸದ್ಯ ಅಧಿಕಾರಿಗಳು ಗ್ರಾಮಸ್ಥರಿಂದ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Belagavi Winter Session: ಮೋಡ ಬಿತ್ತನೆಗೆ ಮುಂದಾದ ಸರ್ಕಾರ; ಶೀಘ್ರ ತೀರ್ಮಾನವೆಂದ ಡಿಕೆಶಿ
ಬಾಲಕಿಯರಿಗೆ ಗಾಯ
ಎತ್ತುಗಳ ಸಮೇತ ರಸ್ತೆಗಿಳಿದು ರೈತರು ಪ್ರತಿಭಟನೆ ನಡೆಸಿದ್ದರಿಂದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪೊಲೀಸರು ತಳ್ಳುವಾಗ ಬಾಲಕಿಯೊಬ್ಬಳ ಕಾಲಿಗೆ ಗಾಯವಾಗಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ರವಾನೆ ಮಾಡಲಾಯಿತು. ಓರ್ವ ಬಾಲಕಿಗೆ ಬೆರಳು ಮುರಿದಿದ್ದು, ಮತ್ತಿಬ್ಬರು ಬಾಲಕಿಯರ ಕೈಗೆ ಗಾಯಗಳಾಗಿವೆ. ಪ್ರತಿಭಟನೆಯಲ್ಲಿ ಹಲವು ಮಕ್ಕಳು ಕೂಡ ಭಾಗವಹಿಸಿರುವುದು ಕಂಡುಬಂದಿದೆ. ಶಾಲೆ ಬಿಟ್ಟು ಪ್ರತಿಭಟನೆಗಿಳಿದ ಮಕ್ಕಳು, ತಮ್ಮ ಪೋಷಕರೊಂದಿಗೆ ಹೋರಾಟಕ್ಕೆ ಧುಮುಕಿದ್ದಾರೆ. ನಮ್ಮ ಪಾಲಕರ ಕೃಷಿ ಭೂಮಿ ಬಗರ್ ಹುಕುಂ ಸಾಗುವಳಿ ಜಾಗಗನ್ನು ನೀಡಬೇಕು ಎಂದು ಆಗ್ರಹಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ