ಗಂಗಾವತಿ: ತುಂಗಭದ್ರಾ (Tungabhadra) ಎಡದಂಡೆ ನಾಲೆಯ 25ನೇ ವಿತರಣಾ ಕಾಲುವೆಯಲ್ಲಿ (Canal) ಹೂಳು ತುಂಬಿದ್ದು, ಹೂಳು ತೆಗೆಸುವಂತೆ ರೈತರು (Farmers) ಮಾಡಿದ್ದ ಮನವಿಗೆ ಅಧಿಕಾರಿಗಳು ಸ್ಪಂದಿಸದ ಹಿನ್ನಲೆಯಲ್ಲಿ ಸ್ವತಃ ರೈತರೇ ಸ್ವಂತ ಖರ್ಚಿನಲ್ಲಿ ಹೂಳು ತೆಗೆಯಲು ಮುಂದಾಗಿದ್ದಾರೆ.
ಗಂಗಾವತಿ ತಾಲೂಕಿನ ಜೀರಾಳಕಲ್ಗುಡಿಯಿಂದ ಶ್ರೀರಾಮನಗರ ಮಾರ್ಗವಾಗಿ ಕುಂಟೋಜಿ ಲಕ್ಷ್ಮಿಕ್ಯಾಂಪ್ವರೆಗೂ ಸುಮಾರು 25 ಕಿಲೋ ಮೀಟರ್ ಹರಿಯುವ ನಂಬರ್ 25ನೇ ವಿತರಣಾ ಕಾಲುವೆಯಲ್ಲಿ ಹೂಳು ತುಂಬಿದೆ.
ಹೀಗಾಗಿ ಟೇಲ್ಯಾಂಡ್ (ಕೊನೆಯಭಾಗ) ಭಾಗದವರೆಗೂ ರೈತರಿಗೆ ಸಮಯಕ್ಕೆ ಸರಿಯಾಗಿ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಹೂಳು ತೆಗೆಯಿಸಿ ಎಂದು ರೈತರು, ವಡ್ಡರಹಟ್ಟಿ ನಂಬರ್-2 ವಿಭಾಗದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: IND vs WI: ವಿಂಡೀಸ್ ವಿರುದ್ಧ ದಾಖಲೆ ಬರೆದ ಕುಲ್ದೀಪ್ ಯಾದವ್
ಆದರೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗದ ಹಿನ್ನಲೆಯಲ್ಲಿ, ಕನಕಗಿರಿ ಭಾಗದ ರೈತರು ಇದೀಗ ತಾವೇ ಮುಂದೆ ನಿಂತು ಹೂಳು ತೆಗೆಯಲು ಮುಂದಾಗಿದ್ದಾರೆ.
ರೈತರು ಸ್ವಂತ ಹಣ ವಂತಿಕೆ ಹಾಕಿ, ಶ್ರಮದಾನ ಮಾಡುವ ಮೂಲಕ ಹೂಳು ತೆಗೆಯಲು ಮುಂದಾಗಿದ್ದಾರೆ. ಒಂದೆಡೆ ಭತ್ತ ನಾಟಿ ವಿಳಂಬ, ಮತ್ತೊಂದೆಡೆ ರಾಸಾಯನಿಕ ಗೊಬ್ಬರಗಳ ಏರಿಕೆಯಿಂದ ಈಗಾಗಲೆ ಕಂಗಲಾಗಿರುವ ರೈತರಿಗೆ ಹೂಳು ಹೆಚ್ಚುವರಿ ಖರ್ಚಿಗೆ ಹಾದಿ ಮಾಡಿಕೊಟ್ಟಿದೆ.
ಕೋಟಯ್ಯ ಕ್ಯಾಂಪಿನಲ್ಲಿ ಗುರುವಾರ ಹೂಳು ತೆಗೆಯಲು ರೈತರು ಚಾಲನೆ ನೀಡಿದರು. ಶ್ರೀರಾಮನಗರ, ಢಣಾಪುರ, ಮುಸ್ಟೂರು, ಅಂಜೂರಿಕ್ಯಾಂಪ್, ಹೆಬ್ಬಾಳ ಸೇರಿದಂತೆ ಹತ್ತಾರು ಗ್ರಾಮಗಳ ರೈತರು ಭಾಗಿಯಾಗಿದ್ದರು.
ಈ ಬಗ್ಗೆ ರೈತ ರೆಡ್ಡಿ ಶ್ರೀನಿವಾಸ, ಈ ವರ್ಷ ಮುಂಗಾರು ವಿಳಂಬವಾಗಿದ್ದು, ಈಗ ಉತ್ತಮ ಮಳೆಯಾಗುತ್ತಿದೆ, ನಮ್ಮ ಭಾಗದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಕಾಲುವೆಯಲ್ಲಿ ದೊಡ್ಡ ಪ್ರಮಾಣದ ಹೂಳು ತುಂಬಿದೆ.
ಇದನ್ನೂ ಓದಿ: Weather report : ಉತ್ತರ ಕರ್ನಾಟಕದಲ್ಲಿ ಬಿರು ಮಳೆ; ಕರಾವಳಿ, ಮಲೆನಾಡಲ್ಲೂ ಅಬ್ಬರ!
ಈ ಕುರಿತು ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ಹೀಗಾಗಿ ನಾವೇ ಹಣ ವಂತಿಗೆಯ ರೂಪದಲ್ಲಿ ಸಂಗ್ರಹಿಸಿ, ಹೂಳು ತೆಗೆಯಿಸುತ್ತಿದ್ದೇವೆ ಎಂದು ತಿಳಿಸಿದರು.