| ಶಶಿಧರ ಮೇಟಿ, ಬಳ್ಳಾರಿ
ಬಿಳಿ ಬಂಗಾರ ಹತ್ತಿ ಬೆಳೆಯಿಂದ ರೈತರು ವಿಮುಖರಾಗುತ್ತಿದ್ದಾರೆ. ಬಳ್ಳಾರಿ ಭಾಗದ ರೈತರು ಬೆಳೆಯುವ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಹತ್ತಿಯು ಒಂದಾಗಿದೆ. ಆದರೆ, ವರ್ಷದಿಂದ ವರ್ಷಕ್ಕೆ ಹತ್ತಿ ಇಳುವರಿ ಮತ್ತು ಬಿತ್ತನೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿರುವುದು ಹತ್ತಿ ಬೆಳೆಯಿಂದ ರೈತರು ದೂರ ಸರಿಯುತ್ತಿರುವುದನ್ನು ಸೂಚಿಸುತ್ತಿದೆ.
ಹತ್ತಿ ಬೆಳೆಯಿಂದ ದೂರ ಸರಿಯಲು ಕಾರಣ
ಕಳಪೆ ಬಿತ್ತನೆ ಬೀಜ, ರೋಗದ ಬಾಧೆ, ಅನಿಶ್ಚಿತ ಮಳೆ, ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯು ಹತ್ತಿಯ ಬೆಳೆಯಿಂದ ರೈತರು ದೂರ ಸರಿಯಲು ಕಾರಣವಾಗಿದೆ. ಕಳಪೆ ಬೀಜದಿಂದ ನಿರೀಕ್ಷಿತ ಇಳುವರಿ ಬಾರದೆ, ರೋಗದ ಬಾಧೆಯು ಹೆಚ್ಚಾಗಿದೆ. ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತತ್ತೆಯು ಕಡಿಮೆಯಾಗಿರುವುದು ಇಳುವರಿಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ನೀರಾವರಿ ಪ್ರದೇಶದಲ್ಲಿ ಎಕರೆಗೆ ೧೫ ಕ್ವಿಂಟಾಲ್, ಮಳೆಯಾಶ್ರಿತ ಪ್ರದೇಶದಲ್ಲಿ ೮-೧೦ ಕ್ವಿಂಟಾಲ್ ಬೆಳೆಯಲಾಗುತ್ತಿತ್ತು. ಇದೀಗ ನೀರಾವರಿ ಪ್ರದೇಶದಲ್ಲಿ ೮ ಕ್ವಿಂಟಾಲ್‌ಗೆ ಇಳಿಕೆಯಾದರೆ ಮಳೆಯಾಶ್ರಿತ ಪ್ರದೇಶದಲ್ಲಿ ೨-೩ ಕ್ವಿಂಟಾಲ್‌ಗೆ ಇಳಿಕೆಯಾಗಿದೆ.
ಬಿತ್ತನೆ ಪ್ರಮಾಣ ತೀರಾ ಕಡಿಮೆ
ಎರಡು ವರ್ಷದಲ್ಲಿ ೨೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಡಿಮೆಯಾಗಿದೆ. ೨೦೨೦-೨೧ರಲ್ಲಿ ೫೯,೦೦೦ ಬಿತ್ತನೆ ಗುರಿಯಲ್ಲಿ ೪೭,೩೫೮ ಹೆಕ್ಟೇರ್ ಬಿತ್ತನೆಯಾಗಿತ್ತು. ೨೦೨೧-೨೨ರಲ್ಲಿ ೫೨,೭೨೩ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ೩೮,೧೯೯ ಹೆಕ್ಟೇರ್ ಬಿತ್ತನೆಯಾಗಿದ್ದರೆ, ೨೦೨೨-೨೩ರಲ್ಲಿ ಕೃಷಿ ಇಲಾಖೆಯ ಗುರಿಯನ್ನು ೩೪,೮೫೦ ಹೆಕ್ಟೇರ್‌ಗೆ ಇಳಿಕೆ ಮಾಡಿದ್ದರಿಂದ ಗುರಿಯಷ್ಟು ಬಿತ್ತನೆ ಮಾಡಿದ್ದರೂ, ನಿರೀಕ್ಷಿತ ಬೆಳೆ ಬಾರದೆ ರೈತ ಕಂಗಾಲಾಗಿ, ಮುಂದಿನ ವರ್ಷದಿಂದ ಮತ್ತಷ್ಟು ರೈತರು ಹತ್ತಿ ಬಿತ್ತನೆಯಿಂದ ಹಿಂದೆ ಸರಿಯುವ ಚಿಂತನೆಯಲ್ಲಿದ್ದಾರೆ.
ಬೆಲೆ ಇದೆ, ಹತ್ತಿ ಇಲ್ಲ!
ಒಂದು ಕಾಲದಲ್ಲಿ ಬಳ್ಳಾರಿ ಹತ್ತಿ ಎಂದರೆ ಫೇಮಸ್. ಇದೀಗ ಕಳಪೆ ಹತ್ತಿ ಮಾರುಕಟ್ಟೆಗೆ ಬರುತ್ತಿದೆ ಎಂಬ ಅಪವಾದ ಕೇಳಿ ಬರುತ್ತಿದೆ. ಬಳ್ಳಾರಿಯಲ್ಲಿಯೇ ಸುಮಾರು ೪೦ ರಿಂದ ೪೫ ಹತ್ತಿ ಮಿಲ್‌ಗಳು ಹತ್ತಿ ಇಲ್ಲದೆ ಬಿಕೋ ಎನ್ನುತ್ತಿವೆ. ಆದರೆ, ಬೆಲೆಯೇನು ಕಡಿಮೆ ಇಲ್ಲ. ಕ್ವಿಂಟಾಲ್‌ಗೆ ೭ ರಿಂದ ೮ ಸಾವಿರ ಇದೆ. ಆದರೆ ಹತ್ತಿ ಮಾರುಕಟ್ಟೆಗೆ ಬರುತ್ತಿಲ್ಲ ಎಂಬ ಕೊರಗು ಇದೆ.
ಇದನ್ನೂ ಓದಿ | Karnataka Budget 2023 : ಅಡಿಕೆ ಸಂಶೋಧನೆಗೆ 10 ಕೋಟಿ; ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ
ಕೃಷಿ ಇಲಾಖೆ ಎಚ್ಚೆತ್ತುಕೊಳ್ಳುವುದು ಅಗತ್ಯ
ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಹತ್ತಿ ಉತ್ಪಾದನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಜಾಗ್ರತೆ ವಹಿಸಬೇಕಾಗಿದೆ. ಹತ್ತಿ ಬೆಳೆಗಿರುವ ಸಮಸ್ಯೆಯನ್ನು ಪತ್ತೆ ಹಚ್ಚಿ, ಅವುಗಳನ್ನು ಪರಿಹರಿಸುವ ಕೆಲಸವನ್ನು ಮಾಡಬೇಕಾಗಿದೆ. ಇಲ್ಲದಿದ್ದರೆ ಈ ಹಿಂದೆ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಸೂರ್ಯಕಾಂತಿ ಮತ್ತು ಮಸಾಲ ಪದಾರ್ಥದಲ್ಲಿ ಒಂದಾದ ದನಿಯಾ ಪಟ್ಟಿಯಲ್ಲಿ ಹತ್ತಿಯೂ ಸೇರಲಿದೆ. ಕೂಡಲೇ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ.
ನಾನು ಈ ವರ್ಷ ೬ ಎಕರೆ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದೆ. ಆದರೆ ಎಕರೆಗೆ ಅರ್ಧ ಕ್ವಿಂಟಾಲ್ ಹತ್ತಿ ಬರುವುದಿಲ್ಲ. ಮೂರು ಚೀಲ ಹತ್ತಿ ಕೀಳುವುದಕ್ಕೆ ೩೦ ಜನ ಕೂಲಿ ಕಾರ್ಮಿಕರನ್ನು ಇಟ್ಟಿದ್ದೇನೆ. ಹತ್ತಿ ಬಿಡಿಸುವ ಕೂಲಿಯು ಬರುವುದಿಲ್ಲ, ಅದಕ್ಕಾಗಿಯೇ ಹತ್ತಿಯನ್ನು ಹಾಗೇ ಬಿಟ್ಟಿದ್ದೇವೆ. ಕಳಪೆ ಬೀಜದ ಸಮಸ್ಯೆಯಿಂದ ಹತ್ತಿಯನ್ನು ಹೆಚ್ಚಾಗಿ ಬೆಳೆಯುತ್ತಿಲ್ಲ. ಈ ಹಿಂದೆ ಎಕರೆಗೆ ೧೫ ಕ್ವಿಂಟಾಲ್‌ಗಿಂತ ಹೆಚ್ಚು ಬೆಳೆಯುತ್ತಿತ್ತು, ಆದರೆ ಈಗ ಎಕರೆ ೨-೩ ಕ್ವಿಂಟಾಲ್ ಬೆಳೆಯದ ಸ್ಥಿತಿ ಇದೆ.
| ಬಸವರಾಜ್, ಹತ್ತಿ ಬೆಳೆಗಾರ, ಯರಂಗಳಿಗಿ