Site icon Vistara News

Farmers Problem : ಬೇಸಿಗೆಯಲ್ಲೂ ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆ ತ್ರೀ ಫೇಸ್‌ ವಿದ್ಯುತ್‌: ಸಿಎಂ ಭರವಸೆ

Farmers problem

#image_title

ಬೆಂಗಳೂರು: ಬೇಸಿಗೆಯಲ್ಲಿ ಬೆಳೆಗಳಿಗೆ ನೀರು ಹರಿಸಲು ವಿದ್ಯುತ್‌ ಸಮಸ್ಯೆಯಾಗದಂತೆ ರಾಜ್ಯ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿಯಾದ ರೈತರ ನಿಯೋಗದೊಂದಿಗೆ ರೈತರ ವಿವಿಧ ಸಮಸ್ಯೆಗಳ (Farmers Problem) ಕುರಿತು ಚರ್ಚಿಸಿದರು.

ವಿದ್ಯುತ್‌ ಕೊರತೆ ಉಂಟಾದಲ್ಲಿ ಹೊರ ರಾಜ್ಯಗಳಿಂದ ಖರೀದಿಸುವ ಕುರಿತು ಚಿಂತನೆ ಮಾಡಲಾಗುವುದು. ಅಲ್ಲದೆ ರೈತರ ಪಂಪ್‌ ಸೆಟ್‌ ಗಳಿಗೆ ನಿರಂತರ ಏಳು ತಾಸು 3 ಫೇಸ್‌ ವಿದ್ಯುತ್‌ ಪೂರೈಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರಾಜ್ಯದ ವಿವಿಧೆಡೆ ಕೆಐಎಡಿಬಿಯು ಭೂಸ್ವಾಧೀನ ಪಡಿಸಿಕೊಳ್ಳುವ ಸಂದರ್ಭದಲ್ಲಿ ಜಮೀನು ಕಳೆದುಕೊಂಡವರಿಗೆ ಅಲ್ಲಿ ಸ್ಥಾಪನೆಯಾಗುವ ಉದ್ಯಮಗಳಲ್ಲಿ ಉದ್ಯೋಗ ಕೊಡಿಸುವ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ರಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮಂಡ್ಯದ ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ನಡೆಸಲು ನಿರ್ಧರಿಸಿ, ಚಾಲನೆಯೂ ನೀಡಲಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಇನಷ್ಟು ಸಶಕ್ತಗೊಳಿಸಲಾಗುವುದು ಎಂದು ಅವರು ನುಡಿದರು.
ಕಬ್ಬಿಗೆ ಎಸ್.ಎ.ಪಿ. ನೀಡುವ ಕುರಿತಂತೆ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿಯವರು ಹೇಳಿದರು.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಶ್ರೀ ವೀರ ಪುಲಿಕೇಶಿ ಸಹಕಾರಿ ಬ್ಯಾಂಕ್‌ ರೈತರಿಗೆ ಕಿರುಕುಳ ನೀಡುತ್ತಿರುವುದಾಗಿ ರೈತ ಮುಖಂಡರು ಮುಖ್ಯಮಂತ್ರಿಯವರ ಗಮನ ಸೆಳೆದರು. ಈ ಬ್ಯಾಂಕಿಗೆ ಕೂಡಲೇ ನೋಟೀಸು ನೀಡಲಾಗುವುದು ಎಂದು ತಿಳಿಸಿದರು.

ಈ ಸಭೆಯಲ್ಲಿ ರೈತ ಮುಖಂಡ ಬಡಗಲಪುರ ನಾಗೇಂದ್ರ, ಸಚಿವರಾದ ಗೋಪಾಲಯ್ಯ, ವಿ. ಸೋಮಣ್ಣ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ ಹಾಗೂ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ : International womens day-2023: ಮಹಿಳೆಯರನ್ನು ಪುರುಷರೂ ಅರ್ಥ ಮಾಡಿಕೊಳ್ಳಬೇಕು ಎಂದ ಸಿಎಂ ಬೊಮ್ಮಾಯಿ

Exit mobile version