Site icon Vistara News

Fatima Masjid | ಬೆಳಗಾವಿಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಫಾತಿಮಾ ಮಸೀದಿಗೆ ಬಿತ್ತು ಬೀಗ!

Fatima Masjid

ಬೆಳಗಾವಿ: ಬಹು ಧರ್ಮಿಯರು ನೆಲೆಸಿರುವ ನಗರದ ಬಡಾವಣೆಯೊಂದರ ವಸತಿ ನಿವೇಶನದಲ್ಲಿ ಸದ್ದಿಲ್ಲದೆ ತಲೆ ಎತ್ತಿದ್ದ ಮಸೀದಿಯ ಬಾಗಿಲು ಮುಚ್ಚಿಸಲಾಗಿದೆ. ಅನಧಿಕೃತ ಮಸೀದಿ ತೆರವಿಗೆ ಹಿಂದುಪರ ಸಂಘಟನೆಗಳಿಂದ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲೇ ಮಹಾನಗರ ಪಾಲಿಕೆ ಮಸೀದಿಗೆ (Fatima Masjid) ಬೀಗ ಜಡಿದಿದೆ.

ಕುಂದಾನಗರಿ ಬೆಳಗಾವಿ ರಾಜ್ಯದ ಅತಿಸೂಕ್ಷ್ಮ ನಗರಗಳಲ್ಲಿ ಒಂದು. ಗಡಿ ವಿವಾದದಿಂದ ಸುದ್ದಿಯಲ್ಲಿರುತ್ತಿದ್ದ ಈ ನಗರದಲ್ಲೀಗ ಧರ್ಮದಂಗಲ್ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಸಾರಥಿ ನಗರದಲ್ಲಿ ತಲೆ ಎತ್ತಿರುವ ಫಾತಿಮಾ ಮಸೀದಿ. ವಸತಿ ನಿವೇಶನದಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಹೀಗಾಗಿ ಸ್ಥಳೀಯ ನಿವಾಸಿಗಳು ಈ ಸಂಬಂಧ ಬೆಳಗಾವಿ ಮಹಾನಗರ ಪಾಲಿಕೆ ಗಮನಕ್ಕೆ ತಂದಿದ್ದರು. ಅಲ್ಲದೇ ಬಿಜೆಪಿ ನಾಯಕರು, ಹಿಂದುಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಅನಧಿಕೃತ ಮಸೀದಿ ತೆರವು ಮಾಡುವಂತೆ ಪಟ್ಟು ಹಿಡಿದಿದ್ದರು.

ಕಳೆದ ವಾರವೂ ಜಿಲ್ಲಾಧಿಕಾರಿಗೆ ಹಿಂದುಪರ ಸಂಘಟನೆಗಳು ಮನವಿ ಸಲ್ಲಿಸಿ‌, ವಸತಿ ಉದ್ದೇಶದ ಕಟ್ಟಡದಲ್ಲಿ ಧಾರ್ಮಿಕ ಚಟುವಟಿಕೆ ನಡೆಯುತ್ತಿದೆ. ತಕ್ಷಣವೇ ಮಸೀದಿಯನ್ನು ಬಂದ್ ಮಾಡಿಸಬೇಕು ಎಂದು ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ವಕ್ಫ್‌ ಬೋರ್ಡ್‌ಗೆ ನೋಟಿಸ್ ಜಾರಿಗೊಳಿಸಿದ್ದರು. ಹೀಗಾಗಿ ವಕ್ಫ್ ಬೋರ್ಡ್ ಅಧಿಕಾರಿಗಳು, ಸಾರಥಿ ನಗರದ ಫಾತಿಮಾ ಮಸೀದಿಗೆ ಬೀಗ ಜಡಿದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮಸೀದಿ ಎದುರು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ | 40% Commission | ಮತ್ತೆ ಸಿಡಿದೆದ್ದ ಗುತ್ತಿಗೆದಾರರು: ಜ. 18ರಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ, 19ರಂದು ಕೋರ್ಟ್‌ಗೆ ದಾಖಲೆ

ಸಾರಥಿ ನಗರ ಬೆಳಗಾವಿಯಲ್ಲಿದ್ದರೂ, ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿನಿಧಿಸುವ ಗ್ರಾಮೀಣ ಕ್ಷೇತ್ರಕ್ಕೆ ಒಳಪಡುತ್ತದೆ. ಮಸೀದಿ ವಿವಾದ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್‌ ಭವನದಲ್ಲಿ ಮಾತನಾಡಿರುವ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆ ಇದೆಲ್ಲ ಪ್ರಾರಂಭವಾಗುತ್ತದೆ. ಈ ಹಿಂದೆ ಮಂಗಳೂರು, ಉಡುಪಿ, ಕಾರವಾರದಲ್ಲಿ ಚುನಾವಣೆ ಬಂದಾಗ ಯಾವ ರೀತಿ ಮಾಡಿದ್ದರೋ ನೋಡಿದ್ದೇವೆ. ಇಲ್ಲಿಯೂ ಮಾಡುತ್ತಾರೆ, ಬೇರೆಡೆಯೂ ಮಾಡುತ್ತಾರೆ. ಇದರಿಂದ ಪ್ರಯೋಜನ ಆಗಲ್ಲ ಎಂದು ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸಾವಿರಾರು ವರ್ಷಗಳಿಂದ ಮಸೀದಿ, ಮಂದಿರ, ಚರ್ಚ್‌ಗಳಿವೆ. ಈಗ ವಿವಾದ ಸೃಷ್ಟಿಸುವ ಅವಶ್ಯಕತೆ ಇಲ್ಲ. ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದರೆ, ಆ ಬಗ್ಗೆ ನ್ಯಾಯಾಲಯ ತೀರ್ಮಾನಿಸುತ್ತದೆ. ಆದರೆ, ಶಾಸಕರೊಬ್ಬರು ಮುಂದೆ ನಿಂತು‌ ಪೊಲೀಸರಿಗೆ ಹೇಳಿ ಆ ಮಸೀದಿ ಬಾಗಿಲು ಮುಚ್ಚಿಸುವುದು ತಪ್ಪು. ಚುನಾವಣೆ ಮುಗಿಯುವವರೆಗೆ ಬಿಜೆಪಿಯವರು ವಿವಾದ ಸೃಷ್ಟಿಸುತ್ತಿರುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.

ಸದ್ಯ ವಕ್ಫ್ ಬೋರ್ಡ್‌ ಅಧಿಕಾರಿಗಳು ವಿವಾದಿತ ಫಾತಿಮಾ ಮಸೀದಿಗೆ ಬೀಗ ಹಾಕಿರುವ ಹಿನ್ನೆಲೆಯಲ್ಲಿ ಮಸೀದಿಯ ತೆರವಿಗೆ ಹೋರಾಟ ಮುಂದುವರಿಸಲು ಹಿಂದುಪರ ಸಂಘಟನೆಗಳು ನಿರ್ಧರಿಸಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ತೆಗೆದುಕೊಳ್ಳುವ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ.

ಇದನ್ನೂ ಓದಿ | Rail Roko protest | ಹಾರವಾಡ, ಮಿರ್ಜಾನ್‌, ಚಿತ್ರಾಪುರದಲ್ಲಿ ನಿಲುಗಡೆ‌ಗೆ ಒತ್ತಾಯಿಸಿ ರೈಲು ತಡೆದು ಪ್ರತಿಭಟನೆ

Exit mobile version