ಬೆಂಗಳೂರು: ಸಾಂಸ್ಕೃತಿಕ ಲೋಕಕ್ಕೆ ತಮ್ಮದೆ ಆದ ಕೊಡುಗು ನೀಡುತ್ತಾ ಬಂದವರು ವಿಮಲಾ ರಂಗಾಚಾರ್. ರಂಗಭೂಮಿ, ಸಂಗೀತ, ಕರಕುಶಲ ಹಾಗೂ ಸಾಮಾಜಿಕ ಕಳಕಳಿಯ ಎಲ್ಲ ಪ್ರಾಕಾರಗಳಲ್ಲಿಯೂ ತಮ್ಮ ಹದಿ ಹರೆಯದಿಂದಲೇ ತೊಡಗಿಸಿಕೊಂಡು ಸ್ತ್ರೀ ಶಕ್ತಿಗೆ ಜೀವಂತ ನಿದರ್ಶನವಾಗಿರುವ ವಿಮಲಾ ಅವರಿಗೆ (Vimala Rangachar) ಸಪ್ತಕದಿಂದ (Saptaka felicitates) ಗೌರವಿಸಲಾಗುತ್ತಿದೆ.
ಸಪ್ತಕ ವತಿಯಿಂದ ಜುಲೈ 16ರ ಭಾನುವಾರದಂದು ಸಂಜೆ 5.30ಕ್ಕೆ ಎಂಇಎಸ್ ನ್ಯೂ ಕಾನ್ಫರೆನ್ಸ್ ಹಾಲ್‌ನಲ್ಲಿ ಎಂಇಎಸ್ ಕಲಾವೇದಿ ಸಹಯೋಗದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ವಿಮಲಾ ರಂಗಾಚಾರ್ ಅವರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಸಪ್ತಕದ ಜಿ.ಎಸ್ ಹೆಗಡೆ ಮಾಹಿತಿ ನೀಡಿದ್ದಾರೆ.
ಅರ್ಥವಿಲ್ಲದ ಕಂದಾಚಾರಗಳನ್ನು ಧಿಕ್ಕರಿಸಿದವರು
ಬೆಂಗಳೂರಿನಲ್ಲಿ ಸಾಂಸ್ಕೃತಿಕ ಲೋಕಕ್ಕೆ ಗಟ್ಟಿಯಾದ ಅಡಿಪಾಯ ಹಾಕಿ ಶ್ರಮಿಸಿದವರಲ್ಲಿ ವಿಮಲಾ ರಂಗಾಚಾರ್ ಸಹ ಒಬ್ಬರು. ಏಳೆಂಟು ದಶಕಗಳ ಹಿಂದೆಯೇ ಅವರು ಈ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ರಂಗಭೂಮಿ, ಸಂಗೀತ, ಕರಕುಶಲ, ಶಿಲ್ಪ ಕಲೆ ಹಾಗೂ ಶಿಕ್ಷಣ, ಸಾಮಾಜಿಕ ಕಳಕಳಿ ಎಲ್ಲ ಪ್ರಾಕಾರಗಳಲ್ಲಿಯೂ ತಮ್ಮ ಹದಿ ಹರೆಯದಿಂದಲೇ ತೊಡಗಿಸಿಕೊಂಡರು. ಕಡು ಸಂಪ್ರದಾಯಸ್ಥರ ಮನೆತನದಲ್ಲಿ ಹುಟ್ಟಿದರೂ ಸಾಮಾಜಿಕ ಮೌಢ್ಯ, ಅರ್ಥವಿಲ್ಲದ ಕಂದಾಚಾರಗಳನ್ನು ನಯ ನಾಜೂಕಿನಿಂದಲೆ ಧಿಕ್ಕರಿಸಿ ತಮ್ಮ ಜೀವನವನ್ನು ತಾವೇ ರೂಪಿಸಿಕೊಂಡು ಇತರರಿಗೆ ಮಾದರಿಯಾದವರು ವಿಮಲಾ.
ಬೆಂಗಳೂರಿನ ಹೃದಯ ಭಾಗದಲ್ಲಿ ಇರುವ ಎಡಿಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರ, ಮಲ್ಲೇಶ್ವಂನಲ್ಲಿರುವ ಸೇವಾ ಸದನ ಈ ಎಲ್ಲ ಸಾಂಸ್ಕೃತಿಕ ಕೇಂದ್ರಗಳ ಸ್ಥಾಪಕರ ಪಟ್ಟಿಯಲ್ಲಿ ಇವರದು ಮೊದಲ ಹೆಸರು. ಪುರುಷ ಪ್ರಧಾನರಿಗೆ ಸರಿಸಮಾನರಾಗಿ ನಿಂತು ದುಡಿದರು. ಸಂಪ್ರದಾಯಸ್ಥ ಕುಟುಂಬದಲ್ಲಿದ್ದೂ ಸಂಗೀತ, ನೃತ್ಯ, ನಾಟಕ ಇವುಗಳೆಲ್ಲ ನಿಷಿದ್ಧವಾಗಿದ್ದ ಕಾಲದಲ್ಲೇ ತಂದೆ ತಾಯಿಯಿಂದ ಬಳುವಳಿಯಾಗಿ ಬಂದ ಈ ಕಲಾ ಪ್ರಕಾರಗಳಲ್ಲಿ ಸಾಧಿಸಿ ಇತರರಿಗೂ ದಾರಿ ತೋರಿಸಿ ಪ್ರೋತ್ಸಾಹಿಸಿ, ಪುರಸ್ಕರಿಸಿದರು.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಪ್ರಾಚೀನ ಭಾರತದ ವಿಶಿಷ್ಟ ಸಾಂಸ್ಕೃತಿಕ ಲೋಕ
ಸಾಮಾಜಿಕ ಕಟ್ಟಳೆಯಿಂದಾಗಿ ಕಾಲೇಜಿಗೆ ಹೋಗಲಾಗದೆ, ಮದುವೆ ನಂತರವೂ ವಿದ್ಯಾಭ್ಯಾಸ ಮುಂದುವರಿಸುವ ಆಸೆಯನ್ನು ವ್ಯಕ್ತಪಡಿಸಿದಾಗ ಪತಿಯೂ ಸಹಕರಿಸಿದರು. ಪುಣೆಯ ಭಾರತೀಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣದ ಮೂಲಕ ಆಂಗ್ಲ ಭಾಷೆ ಮತ್ತು ಮಕ್ಕಳ ಮನೋ ಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ಆಯ್ದುಕೊಂಡು ಮೊದಲ ಸ್ಥಾನ ಪಡೆದು ಪದವೀಧರೆಯಾದರು. ಈ ಸಮಸ್ಯೆ ಮುಂದಿನ ಪೀಳಿಗೆಗೆ ಇರಬಾರದೆಂಬ ಉದ್ದೇಶದಿಂದಲೇ ಮೈಸೂರು ಎಜುಕೇಷನ್ ಸೊಸೈಟಿ (ಎಂಇಎಸ್) ಸಂಸ್ಥೆಗಳ ರೂವಾರಿಗಳಾದ ಎಂ.ಪಿ.ಎಲ್ ಶಾಸ್ತ್ರಿಗಳ ಜತೆ ಸೇರಿ ದುಡಿದು ಇಂದು ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ