Site icon Vistara News

Premashekhara: ಸಾಹಿತಿ ಪ್ರೊ. ಪ್ರೇಮಶೇಖರಗೆ ಸರ್ವಭಾಷಾ ಸಾಹಿತಿಗಳ ಸಮ್ಮಾನದಲ್ಲಿ ಗೌರವ

Premasekhara

ಭುವನೇಶ್ವರ: ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಉತ್ಕೃಷ್ಟ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ಕನ್ನಡದ ಹೆಸರಾಂತ ಸಾಹಿತಿ, ಅಂಕಣಕಾರ ಪ್ರೊ. ಪ್ರೇಮಶೇಖರ (Premashekhara) ಅವರನ್ನು ಭುವನೇಶ್ವರದಲ್ಲಿ ನಡೆದ ಪ್ರತಿಷ್ಠಿತ ಸರ್ವಭಾಷಾ ಸಾಹಿತ್ಯಕಾರ್ ಸಮ್ಮಾನ ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಗಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಈ ಸಮ್ಮಾನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ನೆರವೇರಿಸಿದರು.

ದೇಶದೆಲ್ಲೆಡೆಯಿಂದ ಆಯ್ಕೆಯಾದ ಒಟ್ಟು ಹದಿನಾಲ್ಕು ಭಾಷೆಗಳ ಸಾಹಿತಿಗಳನ್ನು ಈ ಸಂದರ್ಭದಲ್ಲಿ ಭಾಗವತ್ ಅವರು ಸಮ್ಮಾನಿಸಿದರು. ನಂತರ ಮಾತನಾಡಿದ ಮೋಹನ್ ಭಾಗವತ್ ಅವರು, ಆಧ್ಯಾತ್ಮಿಕ ಜಾಗೃತಿ ಆದ ಬಳಿಕ ಸಾಮಾಜಿಕ ಜಾಗೃತಿ ಘಟಿಸುತ್ತದೆ. ಮನಃಪರಿವರ್ತನೆಯ ಮೂಲಕ ಆಧ್ಯಾತ್ಮಿಕ ಜಾಗೃತಿಯಾಗುತ್ತದೆ. ಇದನ್ನು ಆಗುಮಾಡುವುದು ಸಾಹಿತ್ಯ‌‌. ಸ್ವಾಂತಸುಖಾಯ ಸ್ಫೂರ್ತಿಯಿಂದ ರಚನೆಯಾದ ಸಾಹಿತ್ಯ ಜನರಿಗೂ ಆನಂದವನ್ನು ಉಂಟುಮಾಡುತ್ತದೆ ಎಂದು ತಿಳಿಸಿದರು.

ಸಹಿತ ಅಂದರೆ ಒಟ್ಟಿಗಿರುವುದು. ಕರ್ಮ ಒಟ್ಟಿಗಿರುತ್ತದೆ. ಸಂಕಲ್ಪದಿಂದ ಕರ್ಮ. ಸಂಕಲ್ಪದ ಹಿಂದಿರುವುದು ಮನಸ್ಸು. ಮನಸ್ಸನ್ನು ನಿಯಂತ್ರಿಸುವುದು ಬುದ್ಧಿ. ರಾಗದ್ವೇಷಗಳನ್ನು ಬದಿಗಿಟ್ಟು ಹಿತವನ್ನು ಮುಖ್ಯವಾಗಿಸಿದಾಗ ಕರ್ಮವು ದೈವೀ ಸ್ಫೂರ್ತಿಯಿಂದ ಅಭಿವ್ಯಕ್ತವಾಗುತ್ತದೆ. ನಿಜ ಸಾಹಿತ್ಯ ನಿರ್ಮಾಣದ ಗುಟ್ಟು ಇದು. ಹಿತದ ಪರಿಕಲ್ಪನೆ ಉಳಿದೆಡೆಗಿಂತ ಭಾರತದಲ್ಲಿ ಭಿನ್ನವಿದೆ. ತನ್ನ ಹಿತಕ್ಕೂ ಉಳಿದುದಕ್ಕೂ ಸಂಬಂಧವಿಲ್ಲವೆಂದು ಉಳಿದೆಡೆ ಭಾವಿಸಿದರೆ, ಸಂಬಂಧವಿದೆ ಎಂದು ಭಾರತೀಯ ದೃಷ್ಟಿ ಹೇಳುತ್ತದೆ. ಎಲ್ಲರೂ ಒಂದೇ ಎಂದು ಭಾವಿಸುವ ಭಾರತದ ತಾತ್ತ್ವಿಕತೆಯು ಉಳಿದುದರ ಹಿತದಲ್ಲಿ ತನ್ನ ಹಿತವನ್ನು ಕಾಣುತ್ತದೆ ಎಂದು ಹೇಳಿದರು.

ಇದನ್ನೂ ಓದಿ | Prerane Column : ಕ್ಷಣಿಕ ಲಾಭದ ಆಸೆಯ ಮೇಲೆ ನಿಂತ ವ್ಯವಹಾರವೂ ಕ್ಷಣಿಕವೇ!

‘ಸಮಾಜವನ್ನು ಜೋಡಿಸಿ ಸೃಷ್ಟಿಯ ಶ್ರೇಯಸ್ಸನ್ನು ಪರಿಗಣಿಸಿ ಎಲ್ಲರ ಇಹಪರ ಸುಖವನ್ನು ಸಾಧಿಸುವ ಸಂಗತಿಯೇ ಧರ್ಮ. ಸಾಹಿತ್ಯವು ಧರ್ಮವನ್ನು ಪ್ರೇರೇಪಿಸುವುದಾಗಬೇಕು. ಧರ್ಮದ ಆಧಾರದಲ್ಲಿ ಶಾಶ್ವತ ಸುಖವನ್ನು ಪ್ರದಾನಿಸಿ ಮನುಷ್ಯನನ್ನು ಮನುಷ್ಯನನ್ನಾಗಿಸುವ ಕಾರ್ಯವನ್ನು ಸಾಹಿತ್ಯ ಮಾಡುತ್ತದೆ. ಇಂಥ ಭಾರತೀಯ ವಿಚಾರವನ್ನು ಜಗತ್ತು ನಮ್ಮಿಂದ ನಿರೀಕ್ಷಿಸುತ್ತಿದೆ. ಅದನ್ನು ಸಾಹಿತ್ಯ ಕ್ಷೇತ್ರವು ತನ್ನ ಸಾಧನೆಯ ಮೂಲಕ ಸಾಧಿಸಬೇಕು. ಧರ್ಮವನ್ನು ಎಲ್ಲರೂ ಅನುಸರಿಸುವಂತೆ ವಾತಾವರಣವನ್ನು ಉಂಟುಮಾಡುವ ಕಾರ್ಯವು ಸಾಹಿತಿಗಳಿಂದಲೂ ಆಗಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೂರು ಪುಸ್ತಕಗಳನ್ನು ಮೋಹನ್ ಭಾಗವತ್ ಅವರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಅಭಾಸಾಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಋಷಿಕುಮಾರ ಮಿಶ್ರಾ, ಆರೆಸ್ಸೆಸ್ ಅಖಿಲ ಭಾರತ ಬೌದ್ಧಿಕ ಪ್ರಮುಖ್ ಸ್ವಾಂತ ರಂಜನ್ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ | ದಶಮುಖ ಅಂಕಣ: ಕಾಲನೆಂಬ ಮಾಯ್ಕಾರ…!

ಅಭಾಸಾಪ ರಾಷ್ಟ್ರೀಯ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಪವನಪುತ್ರ ಬಾದಲ್ ಅವರು ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಅಧ್ಯಕ್ಷ ಡಾ. ಸುಶೀಲಚಂದ್ರ ತ್ರಿವೇದಿ ಅವರು ವಂದಿಸಿದರು. ಕರ್ನಾಟಕವೂ ಸೇರಿದಂತೆ ದೇಶದೆಲ್ಲೆಡೆಯಿಂದ ಬಂದ ಸಾವಿರಕ್ಕೂ ಅಧಿಕ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಈ ಸಮ್ಮಾನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

Exit mobile version