Site icon Vistara News

ರೈತರ ಕಲ್ಯಾಣಕ್ಕಾಗಿ ರಸಗೊಬ್ಬರ ಸಹಾಯಧನ 1.08 ಲಕ್ಷ ಕೋಟಿ ರೂಪಾಯಿಗೆ ಏರಿಕೆ: ಸಂಸದ ಈರಣ್ಣ ಕಡಾಡಿ

PM Narendra Modi and Eranna Kadadi

ಮೂಡಲಗಿ (ಬೆಳಗಾವಿ): ರೈತರ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಬದ್ಧತೆಯ ಪ್ರತಿಫಲವಾಗಿ ಫಾಸ್ಪೇಟ್ ಮತ್ತು ಪೊಟ್ಯಾಶ್ ರಸಗೊಬ್ಬರಗಳಿಗೆ 38 ಸಾವಿರ ಕೋಟಿ ರೂ. ಸಹಾಯಧನ ನೀಡಲು ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಧರಿಸಿದ್ದು, 2023-24ನೇ ಸಾಲಿನಲ್ಲಿ ರಸಗೊಬ್ಬರದ ಸಹಾಯಧನ ಒಟ್ಟು 1.08 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಈ ಸಹಾಯಧನದಿಂದ 12 ಕೋಟಿ ರೈತರು ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ (Eranna Kadadi) ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.

ಗುರುವಾರ (ಮೇ 18) ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ, ಕೇಂದ್ರ ಸರ್ಕಾರ ಯೂರಿಯಾ ರಸಗೊಬ್ಬರ ಸಹಾಯಧನಕ್ಕಾಗಿ 2023-24ರ ಬಜೆಟ್‌ನಲ್ಲಿ 70 ಸಾವಿರ ಕೋಟಿ ರೂ. ಘೋಷಣೆ ಮಾಡಿದೆ. ಇದೀಗ ಹೆಚ್ಚುವರಿಯಾಗಿ 38 ಸಾವಿರ ಕೋಟಿ ರೂ. ಸಹಾಯಧನ ಘೋಷಣೆ ಮಾಡಲಾಗಿದೆ. ಅಲ್ಲದೇ ಪ್ರಸ್ತುತ ಯೂರಿಯಾ ಬೆಲೆ ಪ್ರತಿ ಬ್ಯಾಗ್‌ಗೆ 276 ರೂಪಾಯಿ ಹಾಗೂ ಡಿಎಪಿಗೆ 1350 ರೂ. ಇದ್ದು, ಈ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಮತ್ತು ನೈಟ್ರೋಜನ್‌ಗೆ ಪ್ರತಿ ಕೆಜಿಗೆ 76 ರೂ, ಫಾಸ್ಪೇಟ್‌ಗೆ 41 ರೂ, ಪೊಟ್ಯಾಶ್‌ಗೆ 15 ರೂಪಾಯಿ, ಸಲ್ಫರ್‌ಗೆ 2.8 ರೂ. ಸಹಾಯಧನ ನೀಡಲಾಗುತ್ತಿದೆ ಎಂದರು.

ಇದನ್ನೂ ಓದಿ: ಉಚಿತ ಪ್ರಯಾಣ ಎಂಬ ಕಾರಣಕ್ಕಾಗಿ ದಿಲ್ಲಿಯಲ್ಲಿ ಹೆಣ್ಣುಮಕ್ಕಳಿಗೆ ಬಸ್‌ ನಿಲ್ಲಿಸದ ಡ್ರೈವರ್‌ಗಳು, ಕರ್ನಾಟಕದ ಕತೆ ಹೇಗೆ?

ಈಗಾಗಲೇ ಕೇಂದ್ರ ಸರ್ಕಾರ ‘ಒಂದು ದೇಶ ಒಂದು ಗೊಬ್ಬರ’ ಯೋಜನೆಯಡಿ ಭಾರತವು ರಸಗೊಬ್ಬರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುತ್ತಿದೆ. ರೈತರಿಗೆ ಅಗ್ಗದ ಮತ್ತು ಗುಣಮಟ್ಟದ ಪೋಷಕಾಂಶಗಳ ಯೂರಿಯಾ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ದೇಶದ ಬೆನ್ನೆಲುಬಾಗಿರುವ ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸದ ಈರಣ್ಣ ಕಡಾಡಿ ಅಭಿನಂದಿಸಿದರು.

Exit mobile version