ಗಂಗಾವತಿ: ಈಗಾಗಲೆ ಗಂಗಾವತಿ (Gangavathi), ಕನಕಗಿರಿ (Kanakagiri) ಮತ್ತು ಕಾರಟಗಿ (Karatagi) ಭಾಗದಲ್ಲಿ ಮುಂಗಾರು ಹಂಗಾಮು ಕೃಷಿ ಚಟುವಟಿಕೆ ವೇಗ ಪಡೆದುಕೊಂಡಿದ್ದು, ಕೃಷಿಗೆ (Agriculture) ಪೂರಕವಾಗಿ ಬೇಕಿರುವ ರಸಗೊಬ್ಬರಗಳ (Fertilizers) ಕೊರತೆಯಾಗದಂತೆ ನಿಗಾವಹಿಸಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಪಟ್ಟದಕಲ್ ಸೂಚನೆ ನೀಡಿದರು.
ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಕಾರ್ಯದರ್ಶಿಗಳ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಗ್ರಾಮೀಣ ಭಾಗದಲ್ಲಿನ ರೈತರಿಗೆ ನಿಮ್ಮ ಸಂಸ್ಥೆಗಳ ಮೂಲಕ ರಸಗೊಬ್ಬರ ವಿತರಣೆ ನಡೆಯುತ್ತಿದ್ದು, ಸೂಕ್ತ ದಾಸ್ತಾನು ಇರಿಸಿಕೊಳ್ಳಬೇಕು. ರೈತರಿಗೆ ಅಗತ್ಯವಿರುವ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಸಮರ್ಪಕವಾಗಿ ಪೂರೈಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: Yadgiri News: ತಂದೆಯ ದೇಹದಾನ ಮಾಡಿ ಸಾವಿನ ನೋವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ!
ಕೃಷಿ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನಲೆ ಅಗತ್ಯ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು. ಅಗತ್ಯವಿದ್ದರೆ ತಕ್ಷಣ ಮಾಹಿತಿ ನೀಡಬೇಕು. ರೈತರಿಗೆ ಯಾವುದೇ ಕೊರತೆಯಾಗದಂತೆ ರಸಗೊಬ್ಬರಗಳ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದರು.
ಮೂರು ತಾಲೂಕಿನ ಒಟ್ಟು 14 ಸಂಸ್ಥೆಗಳಲ್ಲಿ 376 ಟನ್ ಯೂರಿಯಾ, 114 ಟನ್ ಡಿಎಪಿ, 191 ಟನ್ 10;26;26, 324.5 ಟನ್ 20;20;13 ರಸಗೊಬ್ಬರ ಈಗಾಗಲೆ ದಾಸ್ತಾನು ಮಾಡಲಾಗಿದೆ. 438 ಟನ್ ನಾನಾ ಗೊಬ್ಬರಗಳಿಗೆ ಬೇಡಿಕೆ ವ್ಯಕ್ತವಾಗಿದೆ.
ಆದಷ್ಟು ಶೀಘ್ರ ಅಗತ್ಯವಿರುವ ರಸಗೊಬ್ಬರ ಸರಬರಾಜು ಮಾಡಲು ಕ್ರಮ ಮೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: Ballari News: ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಕೆ ಕುರಿತು ಅರಿವು ಮೂಡಿಸುವುದು ಅತ್ಯಗತ್ಯ: ಪಾಲಿಕೆ ಆಯುಕ್ತ ಎನ್.ರುದ್ರೇಶ್
ಈ ಸಂದರ್ಭದಲ್ಲಿ ಫೆಡರೇಷನ್ ವ್ಯವಸ್ಥಾಪಕ ಅಭಿಷೇಕ್ ಸೇರಿದಂತೆ ಮೂರು ತಾಲೂಕಿನ ಸುಮಾರು ಹತ್ತಕ್ಕೂ ಹೆಚ್ಚು ಕಾರ್ಯದರ್ಶಿಗಳು ಹಾಜರಿದ್ದರು.