ಗದಗ: ಜಿಲ್ಲೆಯ ಬೆಟಗೇರಿ ನಗರಸಭೆ ಮತ್ತು ಗುತ್ತಿಗೆ ಪಡೆದ ಕಂಪನಿ ತಿಕ್ಕಾಟದಿಂದಾಗಿ ನೀರು ಪೂರೈಕೆಗೆ ನೇಮಕಗೊಂಡಿರುವ ವಾಟರ್ ಮ್ಯಾನ್‌ಗಳು ಏಳು ತಿಂಗಳಿನಿಂದ ಸಂಬಳ ಸಿಗದೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾದಂಥ ಸ್ಥಿತಿ ಕಾರ್ಮಿಕರಿಗೆ ಎದುರಾಗಿದೆ.
ಗದಗ ಬೆಟಗೇರಿ ನಗರಕ್ಕೆ ನೀರು ಸರಬರಾಜು ಮಾಡುವ ಜವಾಬ್ದಾರಿಯನ್ನು ಎಸ್‌ಪಿಎಂಎಲ್ ಕಂಪನಿ ಹೊತ್ತುಕೊಂಡಿತ್ತು. ಅದು ವಾಟರ್ ಮ್ಯಾನ್‌ಗಳಿಗೆ ಸುಮಾರು 7 ತಿಂಗಳಿಂದ ಸಂಬಳವನ್ನೇ ನೀಡಿಲ್ಲ. ಹೀಗಾಗಿ ಕಾರ್ಮಿಕರು ಅಲೆದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಕಾರ್ಮಿಕರಿಗೆ ವೇತನ ನೀಡದೆ ಇರಲು ಕಾರಣ ನಗರಸಭೆ ಎನ್ನುವುದು ಎಸ್‌ಪಿಎಂಎಲ್ ಆರೋಪ. ಕಂಪನಿಗೆ ಕೊಡಬೇಕಿದ್ದ ಬಾಕಿ ಮೊತ್ತವನ್ನು ನಗರಸಭೆ ಉಳಿಸಿಕೊಂಡಿದೆ ಎಂದು ಅದು ಹೇಳುತ್ತಿದೆ. ಈ ನಡುವೆ, ನಗರಸಭೆ ನೀಡುವ ಕಾರಣವೇ ಬೇರೆ. ಗುತ್ತಿಗೆ ಪಡೆದ ಕಂಪನಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಈ ಕಾರಣಕ್ಕಾಗಿ ಅದರ ವಿರುದ್ಧ ನಗರಸಭೆಯಲ್ಲಿ ಒಮ್ಮತದ ನಿರ್ಣಯ ಮಾಡಲಾಗಿದೆ. ಮಾತ್ರವಲ್ಲ, ಎಸ್‌ಪಿಎಂಎಲ್ ಕಂಪನಿ ನಿರ್ವಹಣೆಯನ್ನು ನಗರಸಭೆ ಆಡಳಿತ ಮಂಡಳಿ ಹಿಂಪಡೆಯಲಾಗಿತ್ತು.
ನಗರಸಭೆ ಮತ್ತು ಗುತ್ತಿಗೆ ಕಂಪನಿ ನಡುವಿನ ಜಟಾಪಟಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು ಕಾರ್ಮಿಕರು. ಗುತ್ತಿಗೆ ಕಂಪನಿ ಕಾರ್ಮಿಕರಿಗೆ ಸಂಬಳ ಕೊಡದೇ ಸತಾಯಿಸಲು ಶುರು ಮಾಡಿದೆ. ಇದರಿಂದ ಅರುವತ್ತಕ್ಕೂ ಹೆಚ್ಚು ವಾಲ್‌ಮೆನ್ ಗಳಿಗೆ ಸಂಬಳವಿಲ್ಲದೆ ಸಂಕಷ್ಟದಲ್ಲಿದ್ದಾರೆ.
ಇದನ್ನೂ ಓದಿ : Gadaga zoo | ಗದಗ ಮೃಗಾಲಯದಿಂದ ಒಂದು ತೋಳ ಹೋಗಿ ಎರಡು ಸಿಂಹ ಬಂತು: ಶಿವ-ಗಂಗಾ ಜೋಡಿ ಗರ್ಜನೆಗೆ ರೆಡಿ!