ಕಾರವಾರ: ವಾಯುಸೇನೆಯಿಂದ ನಿವೃತ್ತಿ ಹೊಂದಿರುವ ಟುಪೊಲೆವ್ ಯುದ್ಧ ವಿಮಾನವನ್ನು (Fighter Aircraft) ಕಾರವಾರಕ್ಕೆ ಮ್ಯೂಸಿಯಂಗಾಗಿ ತರಲು ಇದ್ದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಯೋಜನೆಗೆ ಚಾಲನೆ ಸಿಗಲಿದೆ ಎಂದು ಕರ್ನಾಟಕ ನೌಕಾ ಪ್ರದೇಶದ ಫ್ಲಾಗ್ ಆಫೀಸರ್ ಅತುಲ್ ಆನಂದ್ ತಿಳಿಸಿದರು.
ನಗರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿರುವ ಐಎನ್ಎಸ್ ಚಾಪೆಲ್ ಯುದ್ಧ ನೌಕೆ ವಸ್ತು ಸಂಗ್ರಹಾಲಯ ಆವರಣದಲ್ಲಿ ಗುರುವಾರ (ಜ.೨೭) ನಡೆದ ಟುಪೊಲೆವ್ ಮ್ಯೂಸಿಯಂನ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
4 ಕೋಟಿ ರೂ. ವೆಚ್ಚದಲ್ಲಿ ಸ್ಥಳಾಂತರ
2017ರಲ್ಲಿ ತಮಿಳುನಾಡಿನ ಅರಕ್ಕೋಣಂನಲ್ಲಿರುವ ಐಎನ್ಎಸ್ ರಾಜಲಿ ನೌಕಾನೆಲೆಯಲ್ಲಿ 5 ಟುಪೊಲೆವ್ ಯುದ್ಧ ವಿಮಾನಗಳನ್ನು ನಿವೃತ್ತಿಗೊಳಿಸಲಾಗಿದ್ದು, ಅವುಗಳಲ್ಲಿ ಒಂದನ್ನು ಕಾರವಾರದಲ್ಲಿ ಮ್ಯೂಸಿಯಂ ಆಗಿ ಇರಿಸಲು ನೌಕಾನೆಲೆಯೊಂದಿಗೆ ಜಿಲ್ಲಾಡಳಿತ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಯುದ್ಧ ವಿಮಾನವನ್ನು ಕಾರವಾರಕ್ಕೆ ತರುವುದು ವಿಳಂಬವಾಗಿತ್ತು. ಇದೀಗ ಇದ್ದ ಅಡಚಣೆಗಳನ್ನು ನಿವಾರಿಸಿ ಯುದ್ಧ ನೌಕೆಯನ್ನು ಬಿಡಿ ಭಾಗಗಳಾಗಿ ಬೇರ್ಪಡಿಸಿ ತಂದು ಕಾರವಾರದಲ್ಲಿ ಜೋಡಿಸಲು ಟೆಂಡರ್ ಕರೆಯಲಾಗಿದ್ದು ನೌಕಾನೆಲೆಯಿಂದ 4 ಕೋಟಿ ರೂ. ವೆಚ್ಚದಲ್ಲಿ ಇದರ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಸ್ಥಳಾಂತರ ಕಾರ್ಯ ಕೈಗೊಳ್ಳಲು ಟೆಂಡರ್ ಕರೆಯಲಾಗಿದ್ದು, ಗುತ್ತಿಗೆ ನೀಡಿದ ಬಳಿಕ ಯುದ್ಧ ನೌಕೆಯನ್ನು ಬಿಡಿ ಭಾಗಗಳಾಗಿ ಬೇರ್ಪಡಿಸುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ನಂತರ ಅದನ್ನು ಚೆನ್ನೈನಿಂದ ಕಾರವಾರಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಗೆ ನಾಲ್ಕು ತಿಂಗಳಲ್ಲಿ ಚಾಲನೆ ಸಿಗಲಿದೆ ಎಂದು ನೌಕಾನೆಲೆಯ ಎಫ್ಓಕೆ ಅತುಲ್ ಆನಂದ್ ಮಾಹಿತಿ ನೀಡಿದರು.
ಯುದ್ಧ ನೌಕೆಯೊಂದಿಗೆ ಯುದ್ಧ ವಿಮಾನ ಮ್ಯೂಸಿಯಂ
ಈಗಾಗಲೇ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಟುಪೊಲೆವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯವನ್ನು ಸ್ಥಾಪನೆ ಮಾಡಲಾಗಿದ್ದು, ಅದು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಕಾರವಾರದ ಟ್ಯಾಗೋರ್ ಕಡಲ ತೀರದಲ್ಲಿ ಈಗಿರುವ ಚಾಪೆಲ್ ಯುದ್ಧ ನೌಕೆ ವಸ್ತು ಸಂಗ್ರಹಾಲಯದ ಜೊತೆಗೆ ಟುಪೊಲೆವ್ ಯುದ್ಧ ನೌಕೆ ಮ್ಯೂಸಿಯಂ ಸಹ ನಿರ್ಮಾಣವಾಗುವುದರಿಂದ ರಾಜ್ಯದಲ್ಲೇ ಪ್ರವಾಸಿಗರ ಆಕರ್ಷಣೆಯ ತಾಣವಾಗಿ ಮಾರ್ಪಾಡಾಗಲಿದೆ. ಮ್ಯೂಸಿಯಂ ಸ್ಥಾಪನೆಯೊಂದಿಗೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವುದೂ ನೌಕಾನೆಲೆಯ ಉದ್ದೇಶವಾಗಿದೆ. ಸದ್ಯ ಗುತ್ತಿಗೆ ನೀಡುವ ವಿಚಾರವಾಗಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಅದು ಮುಗಿದ ಬಳಿಕ ಮುಂದಿನ ಹಂತದ ಕೆಲಸಗಳು ನಡೆಯಲಿವೆ. ಜಿಲ್ಲಾಡಳಿತ ಇಲ್ಲಿ ಯುದ್ಧ ವಿಮಾನವನ್ನು ಸ್ಥಾಪಿಸಲು ಅಗತ್ಯ ಕಾಮಗಾರಿಯನ್ನು ನೋಡಿಕೊಳ್ಳಲಿದೆ ಎಂದರು.
ನೌಕಾನೆಲೆಯೊಂದಿಗೆ ನಾಗರಿಕ ವಿಮಾನ ನಿಲ್ದಾಣ
ನೌಕಾನೆಲೆಯ ಎರಡನೆಯ ಹಂತದ ವಿಸ್ತರಣಾ ಕಾಮಗಾರಿಯಲ್ಲಿ ನೌಕಾನೆಲೆ ವಿಮಾನ ನಿಲ್ದಾಣ ನಿರ್ಮಾಣವಾಗಲಿದ್ದು, ಇದು ನಾಗರಿಕ ವಿಮಾನ ನಿಲ್ದಾಣವಾಗಿಯೂ ಬಳಕೆಯಾಗಲಿದೆ. ಈಗಾಗಲೇ ನಾಗರಿಕ ವಿಮಾನ ಹಾರಾಟದ ರನ್‌ವೇಗಾಗಿ ಅಗತ್ಯವಿರುವ ಭೂಮಿಯ ಸ್ವಾಧೀನ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ. ಗೋವಾದ ದಾಬೋಲಿಮ್‌ನಲ್ಲಿರುವ ನೌಕಾನೆಲೆಯ ವಿಮಾನ ನಿಲ್ದಾಣ ನಾಗರಿಕ ವಿಮಾನ ನಿಲ್ದಾಣವಾಗಿ ಬಳಕೆಯಾಗುತ್ತಿದೆ. ಇದೇ ಮಾದರಿಯಲ್ಲಿ ಕಾರವಾರದಲ್ಲೂ ವಿಮಾನ ನಿಲ್ದಾಣ ನಿರ್ಮಾಣವಾಗಲಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ಜನರು ವಿಮಾನದಲ್ಲಿ ಭಾರತದ ಯಾವುದೇ ಮೂಲೆಗೆ ತೆರಳಲು ಸಾಕಷ್ಟು ಅನುಕೂಲವಾಗಲಿದೆ. ನೌಕಾನೆಲೆಯೊಂದಿಗೆ ಕಾರವಾರವೂ ಅಭಿವೃದ್ಧಿಯಾಗಬೇಕು ಎನ್ನುವುದು ನಮ್ಮ ಆಶಯ ಎಂದು ಎಫ್ಓಕೆ ಅತುಲ್ ಆನಂದ್ ತಿಳಿಸಿದರು.
ಇದನ್ನೂ ಓದಿ | Karnataka Election: ಪ್ರಧಾನಿ ಮೋದಿ ಹೇಳಿಕೆಯನ್ನು ಮುಸ್ಲಿಂ ಓಲೈಕೆ ಅಂದುಕೊಳ್ಳಬೇಕಿಲ್ಲ: ಸಿಎಂ ಬೊಮ್ಮಾಯಿ
ರಾಜ್ಯ ಸರ್ಕಾರದಿಂದ 2 ಕೋಟಿ ರೂ. ಅನುದಾನ
ಯುದ್ಧ ವಿಮಾನ ನಿಲುಗಡೆಗೆ ಅಗತ್ಯ ಕಾಮಗಾರಿಗಳನ್ನು 2 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರ ನಿರ್ವಹಿಸಲಿದ್ದು, ಈಗಾಗಲೇ ಅನುದಾನ ಸಹ ಬಿಡುಗಡೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಯುದ್ಧ ವಿಮಾನ ಮ್ಯೂಸಿಯಂ ಸ್ಥಾಪನೆಗೆ ಪ್ರಯತ್ನ ನಡೆಯುತ್ತಿದ್ದು, ಇದೀಗ ನಿರ್ಮಿತಿ ಕೇಂದ್ರ ಈ ಕಾಮಗಾರಿಗಳನ್ನು ನಡೆಸಲಿದೆ. ಪ್ರವಾಸೋದ್ಯಮಕ್ಕೆ ಹೆಸರು ವಾಸಿಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಟುಪೊಲೆವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಸ್ಥಾಪನೆಯಿಂದ ಪ್ರವಾಸೋದ್ಯಕ್ಕೆ ಹೊಸ ದಿಕ್ಕು ಸಿಗಲಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭೂಮಿಪೂಜೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಹಾಗೂ ನೌಕಾನೆಲೆ ಸಿಬ್ಬಂದಿ ಇದ್ದರು.
ಇದನ್ನೂ ಓದಿ | Eco friendly toilet: ಕಾರ್ಕಳದಲ್ಲಿ ಭಾರತದ ಮೊಟ್ಟಮೊದಲ ಪರಿಸರ ಸ್ನೇಹಿ ಶೌಚಾಲಯ ನಿರ್ಮಾಣ