ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನವೇ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಕೆ.ಜಿ.ಎಫ್ ಬಾಬು ಹಾಗೂ ಆರ್.ವಿ.ದೇವರಾಜ್ ಮಧ್ಯೆ ಭಾರಿ ಪೈಪೋಟಿ (Ticket Fight) ಶುರುವಾಗಿದೆ. “ಚಿಕ್ಕಪೇಟೆ ಅಭಿವೃದ್ಧಿಗೆ 350 ಕೋಟಿ ರೂ. ಮೌಲ್ಯದ ಯೋಜನೆ ರೂಪಿಸಿದ್ದೇನೆ. ಹಾಗಾಗಿ, ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ದೇವರಾಜ್ ಮಾತ್ರ ಸ್ಪರ್ಧಿಸಬೇಕಾ?” ಎಂದು ಕೆ.ಜಿ.ಎಫ್ ಬಾಬು ಪ್ರಶ್ನಿಸಿದ ಬೆನ್ನಲ್ಲೇ ಇವರ ಕುರಿತು ಆರ್.ವಿ.ದೇವರಾಜ್ ಪ್ರತಿಕ್ರಿಯಿಸಿದ್ದಾರೆ. “ನನಗೆ ಕೆ.ಜಿ.ಎಫ್ ಬಾಬು ಯಾರು ಅಂತಾನೇ ಗೊತ್ತಿಲ್ಲ” ಎಂದು ಹೇಳಿದ್ದಾರೆ.
“ಕೆ.ಜಿ.ಎಫ್ ಬಾಬು ಏನು ಹೇಳಿದ್ದಾರೆ ಎಂಬುದು ಮಾತ್ರವಲ್ಲ, ಅವರು ಯಾರು ಅಂತಾನೇ ಗೊತ್ತಿಲ್ಲ. ನಾನು 1975ರಿಂದ ಕಾಂಗ್ರೆಸ್‌ನಲ್ಲಿದ್ದೇನೆ. ಪಕ್ಷದ ಅಧ್ಯಕ್ಷರು ಏನು ಹೇಳಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ಅಧ್ಯಕ್ಷರು ಯಾರಿಗೆ ಟಿಕೆಟ್ ನೀಡುತ್ತಾರೋ, ಅವರು ಸ್ಪರ್ಧಿಸುತ್ತಾರೆ” ಎಂದಿದ್ದಾರೆ.
“ಎಲ್ಲ ಕಾರ್ಯಕ್ರಮಗಳಿಗೂ ನಾನು ಜನರನ್ನು ಸೇರಿಸುತ್ತಿಲ್ಲವೇ? ನಮ್ಮ ಬಗ್ಗೆ ಯಾವುದಾದರೂ ಕೆಟ್ಟ ಹೆಸರು ಇದೆಯೇ? ಯಾರಾದರೂ ಬೆದರಿಕೆ ಹಾಕಿದ್ದರೆ ದೂರು ಕೊಡಲಿ. ದೇವರು ಅವರಿಗೆ ದುಡ್ಡು ಕೊಟ್ಟಿದ್ದಾನೆ, ಅದನ್ನು ಹಂಚಲಿ. ಅವರ ಇತಿಹಾಸ ನಿಮಗೆ ಗೊತ್ತಿಲ್ಲವೇ” ಎಂದು ಪ್ರಶ್ನಿಸಿದ್ದಾರೆ.
“ಪ್ರತಿ ಕಾರ್ಯಕ್ರಮದಲ್ಲಿಯೂ ನಮ್ಮ ಟೀಮ್ ಇರುತ್ತದೆ. ನಮ್ಮ ಕುಟುಂಬವು ರಕ್ತ ಕೊಟ್ಟು ಕಾಂಗ್ರೆಸ್ ಪಕ್ಷವನ್ನು ಕಟ್ಟಿದೆ. ಆರ್.ವಿ.ದೇವರಾಜ್ ಕುಟುಂಬ ಕಾಂಗ್ರೆಸ್ ಕುಟುಂಬ ಅಲ್ಲವೇ? ನನ್ನನ್ನು ಎಲ್ಲ ಪಕ್ಷದವರೂ ಕರೆಯುತ್ತಾರೆ. ಕರೆದಲ್ಲೆಲ್ಲ ಹೋಗಲು ಆಗುತ್ತದೆಯೇ? ಅಷ್ಟಕ್ಕೂ, ನನಗೆ ಕಿವಿಮಾತು ಹೇಳಲು ಅವರಿಗೂ ನನಗೂ ಏನು ಸಂಬಂಧ? ಪಕ್ಷದಲ್ಲಿ ಅಧ್ಯಕ್ಷರು, ಸಿದ್ದರಾಮಯ್ಯ, ಪರಮೇಶ್ವರ್, ಹರಿಪ್ರಸಾದ್ ಇದ್ದಾರೆ. ಅವರು ನಮ್ಮ ಸ್ನೇಹಿತರಾಗಿದ್ದು, ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಅವರಿಗೆ ಗೊತ್ತಿದೆ” ಎಂದು ಟಾಂಗ್ ನೀಡಿದ್ದಾರೆ.
ವಿಧಾನಸಭೆ ಚುನಾವಣೆಗೂ ಮುನ್ನವೇ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಿಂದ ಟಿಕೆಟ್ ಪಡೆಯಲು ಉದ್ಯಮಿ ಕೆ.ಜಿ.ಎಫ್ ಬಾಬು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಟಿಕೆಟ್, ಪಕ್ಷದ ನಾಯಕರು ಕುರಿತು ಮುಜುಗರ ಉಂಟಾಗುವ ಹೇಳಿಕೆ ನೀಡಿದ ಕಾರಣ ಅವರಿಗೆ ಕೆಪಿಸಿಸಿ ಶಿಸ್ತು ಸಮಿತಿಯಿಂದ ನೋಟಿಸ್ ನೀಡಲಾಗಿದೆ. ಅಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, “ಚಿಕ್ಕಪೇಟೆಗೂ ಕೆ.ಜಿ.ಎಫ್ ಬಾಬು ಅವರಿಗೂ ಏನ್ರೀ ಸಂಬಂಧ” ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ | ED Case | ಕೆಜಿಎಫ್ ಬಾಬುಗೆ ಶಾಸಕ ಜಮೀರ್ ದೋಸ್ತಿ ಕಂಟಕ; ವಶ ವಸ್ತುಗಳ ವಾಪಸ್ ಪಡೆಯಲು ಹರಸಾಹಸ!