ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಸಂಬಂಧಿಸಿದ ಯಾವುದೇ ನಿರ್ಧಾರ, ನಿಯಮ, ಅಭಿವೃದ್ಧಿ ಕಾಮಗಾರಿ ಯಾವುದಿದ್ದರೂ ಅದು ಸಿಎಂ ಕಚೇರಿಯಿಂದ ಅನುಮೋದನೆ ಪಡೆದುಕೊಂಡು ಬರಬೇಕು. ಹೀಗೆ ಅನುಮೋದನೆಗೆ ಸಿಎಂ ಕಚೇರಿಗೆ ಹೋಗಿದ್ದ ಕಡತವೊಂದು 11 ತಿಂಗಳಾದರೂ ವಾಪಸ್ (File Missing) ಬಂದಿಲ್ಲವಂತೆ!
ಹನ್ನೊಂದು ತಿಂಗಳ ನಂತರ ನಗರಾಭಿವೃದ್ಧಿ ಇಲಾಖೆ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿರುವ ರಾಕೇಶ್ ಸಿಂಗ್ ಸಿಎಂ ಕಚೇರಿಗೆ ಪತ್ರ ಬರೆದಿದ್ದಾರೆ. ನಾವು ಕಳುಹಿಸಿದ್ದ ಕಡತ ಹಿಂದಿರುಗಿ ಬಂದಿಲ್ಲ, ಅದನ್ನು ವಾಪಸ್ ಕಳುಹಿಸಿ ಎಂದು ಪತ್ರದ ಮುಖೇನ ಟಿಪ್ಪಣಿ ಪತ್ರ ಬರೆದಿದ್ದಾರೆ.
ಈಗ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಬರೆದ ಪತ್ರ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ಮಹತ್ವದ ಫೈಲ್ ಕಳೆದು ಹೋಯಿತಾ? ಅಥವಾ ಬೇರೆ ಏನಾದರೂ ಆಯಿತಾ ಎಂಬ ಗೊಂದಲ ಶುರುವಾಗಿದೆ. ಯಾಕೆಂದರೆ ಬೆಂಗಳೂರಿನಲ್ಲಿ ಜಾಹೀರಾತು ನಿಯಮ ಜಾರಿಗೆ ಬರಬೇಕಾ? ಬಂದರೆ ನಿಯಮ ಹೇಗಿರಬೇಕು? ದರ ಎಷ್ಟಿರಬೇಕು? ಎಲ್ಲೆಲ್ಲಿ ಜಾಹೀರಾತಿಗೆ ಅವಕಾಶ ನೀಡಬೇಕು ಎಂದು ಜಾಹೀರಾತು ರೂಲ್ 2019ರಲ್ಲಿ ಬರೆಯಲಾಗಿತ್ತು. ಅನುಮೋದನೆ ನೀಡಬೇಕಾಗಿದ್ದ ಕಾರಣ 2021ರ ಡಿಸೆಂಬರ್ 7ರಂದು ನಗರಾಭಿವೃದ್ಧಿ ಇಲಾಖೆ ಸಿಎಂ ಕಚೇರಿಗೆ ಕಡತ ಕಳುಹಿಸಿತ್ತು.
ಇದನ್ನೂ ಓದಿ | ಮಂಗಳೂರು ಸ್ಫೋಟ | ರಾಜ್ಯದ ಶಿಫಾರಸಿಗೆ ಕಾಯದ ಕೇಂದ್ರ ಸರ್ಕಾರ; 1 ದಿನ ಮೊದಲೇ NIAಗೆ ವರ್ಗಾವಣೆ
ಆದರೆ ಇವತ್ತಿಗೆ 11 ತಿಂಗಳಾದರೂ ಆ ಕಡತ ವಾಪಸ್ ನಗರಾಭಿವೃದ್ಧಿ ಇಲಾಖೆಗೆ ಬಂದಿಲ್ಲ. ಹೀಗಂತ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸಿಎಂ ಕಚೇರಿಗೆ ಟಿಪ್ಪಣಿ ಪತ್ರ ಬರೆದಿದ್ದು, ಪತ್ರದಲ್ಲಿ ನಗರಾಭಿವೃದ್ಧಿ ಇಲಾಖೆಯ ಕಡತ ವಾಪಸ್ ಬಂದಿಲ್ಲ. 07/12/2021 ರಂದು ಸಿಎಂ ಕಚೇರಿಗೆ ಕಳುಹಿಸಿದ್ದ ಕಡತ ಬಿಬಿಎಂಪಿ ಜಾಹೀರಾತು ನಿಯಮ 2019 ಫೈಲ್ ವಾಪಸ್ ಬಂದಿಲ್ಲ, ಈಗ ಲೆಕ್ಕ ಪತ್ರ ಸಮಿತಿ ಆ ಕಡತ ಕೇಳುತ್ತಿದ್ದು. ಒಂದು ಕಡತ ಯಥಾಸ್ಥಿತಿ ವಾಪಸ್ ನೀಡಿ ಅಥವಾ ಆದೇಶ ಮಾಡಿಕಳುಹಿಸಿ. ಫೈಲ್ ನೀಡುವಂತೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸಿಎಂ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸಾಮಾನ್ಯವಾಗಿ ಸಿಎಂ ಕಚೇರಿಗೆ ಯಾವುದೇ ಕಡತಗಳು ಅನುಮೋದನೆ ಹೋದರೂ ಒಂದೆರಡು ವಾರ ಅಥವಾ ಅದಕ್ಕಿಂತ ಬೇಗ ವಾಪಸ್ ಬರುತ್ತದೆ. ಆದರೆ, ಈಗ ಕೊಟ್ಟ ಕಡತ ಹಿಂದಿರುಗಿಸಿಲ್ಲ ಎಂದು ಅಧಿಕಾರಿಗಳೇ ಪತ್ರ ಬರೆದಿದ್ದಾರೆ. ಒಂದು ವರ್ಷದಿಂದ ಫೈಲ್ ಬಂದಿಲ್ಲ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗೆ ಇಳಿಯುವ ಒಂದು ದಿನದ ಮುಂಚೆ ಜಾಹೀರಾತು ಹಾಕಲು ಅನುಮೋದನೆ ನೀಡಿ ಹೋಗಿದರು. ಆದರೆ, ಇದನ್ನು ಬಸವರಾಜ ಬೊಮ್ಮಾಯಿ ಸಿಎಂ ಆದಮೇಲೆ ತಡೆಹಿಡಿದರು. ನಂತರ ನಗರಾಭಿವೃದ್ಧಿ ಇಲಾಖೆ ಇದೇ ಜಾಹೀರಾತು ರೂಲ್‌ಗೆ ಸಂಬಂಧಿಸಿದಂತೆ ಅನುಮೋದನೆಗೆ ಕೋರಿ ಕಡತ ಕಳುಹಿಸಿತ್ತು. ಆದರೆ, ಕಡತ ಹನ್ನೊಂದು ತಿಂಗಳಾದರೂ ಸಿಎಂ ಕಚೇರಿಯಿಂದ ಬಂದಿಲ್ಲ.
ಇದನ್ನೂ ಓದಿ | Ola, uber tariff | ಓಲಾ, ಉಬರ್ ಆಟೋ ದರ ಫಿಕ್ಸ್: ಕನಿಷ್ಠ ದರಕ್ಕಿಂತ 5%+GST ಮಾತ್ರ ಹೆಚ್ಚು ಪಡೆಯಲು ಅವಕಾಶ