ಕೊಪ್ಪಳ: ದಶಕದಲ್ಲಿಯೇ ಇದೇ ಮೊದಲು ಬಾರಿಗೆ ಜುಲೈ ತಿಂಗಳಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಕಳೆದ ಹತ್ತು ವರ್ಷದಲ್ಲಿ ಜಲಾಶಯಕ್ಕೆ ಈ ವೇಳೆಗೆ ಇಷ್ಟೊಂದು ನೀರು ಬರುತ್ತಿರಲಿಲ್ಲ. ಆದರೆ ಈ ಬಾರಿ ಜುಲೈ ಎರಡನೆಯ ವಾರದಲ್ಲೇ ಜಲಾಶಯ ಭರ್ತಿಯಾಗಿದೆ.
ಕಳೆದ ವರ್ಷ ಜುಲೈ ಎರಡನೇ ವಾರದ ವೇಳೆಗೆ ಜಲಾಶಯದಲ್ಲಿ 1610.28 ಅಡಿ ನೀರು ಇತ್ತು. ಈ ವರ್ಷ 1626.22 ಅಡಿಗೆ ತಲುಪಿದೆ. ತುಂಗಭದ್ರಾ ನದಿಯ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ರೈತರು ಸಂತಸಗೊಂಡಿದ್ದಾರೆ.
ಜಲಾಶಯದ ಒಟ್ಟು ಶೇಖರಣಾ ಸಾಮರ್ಥ್ಯ 1633.00 ಅಡಿ(105.788 ಟಿಎಂಸಿ) ಇದ್ದು, ಪ್ರಸ್ತುತ 1626.22 ಅಡಿ(80.549 ಟಿಎಂಸಿ) ನೀರು ಶೇಖರಣೆಯಾಗಿದೆ. ಡ್ಯಾಂ ಸರಾಸರಿ ಒಳಹರಿವು (ಕಳೆದ 24 ಗಂಟೆ) 88270 ಕ್ಯೂಸೆಕ್ ಇದ್ದು, ಸರಾಸರಿ ಹೊರಹರಿವು 221 ಕ್ಯೂಸೆಕ್ ಇದೆ.
ಜಲಾಶಯದ ಮೇಲ್ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಹಾಗೂ ತುಂಗಾ ಜಲಾಶಯದಿಂದ ನೀರು ಹೊರಬಿಟ್ಟಿರುವುದರಿಂದ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಶಿವಮೊಗ್ಗ, ತೀರ್ಥಹಳ್ಳಿ, ಕೊಪ್ಪ, ದಾವಣಗೆರೆ, ಹರಿಹರ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ತುಂಗಭದ್ರಾ ಜಲಾಶಯದಿಂದ ರಾಜ್ಯದ ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ನೀರು ಒದಗಿಸುವ ಜತೆಗೆ ಆಂಧ್ರಪ್ರದೇಶ ಹಾಗು ತೆಲಂಗಾಣ ರಾಜ್ಯಗಳಿಗೂ ನೀರು ಒದಗಿಸಲಾಗುತ್ತದೆ.
ಇದನ್ನೂ ಓದಿ | Rain News | ಧಾರಾಕಾರ ಮಳೆಗೆ ವಿವಿಧೆಡೆ ಭೂಕುಸಿತ, ರಸ್ತೆಗಳು ಜಲಾವೃತ