ಕಾರವಾರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ಮುದಗಾ ಘಟ್ಟದ ಗುಡ್ಡ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ (Fire Accident) ಪರಿಣಾಮ ಎಕರೆಗೂ ಅಧಿಕ ಪ್ರದೇಶ ಸುಟ್ಟು ಕರಕಲಾದ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಜನ ವಸತಿ ಪ್ರದೇಶ ದೂರದಲ್ಲಿದ್ದ ಕಾರಣ ಅಗ್ನಿ ಅವಘಡದಿಂದಾಗಿ ಜನ ಸಾಮಾನ್ಯರಿಗೆ ಯಾವುದೇ ಅಪಾಯ ಉಂಟಾಗಲಿಲ್ಲ.
ಮುದಗಾ ಘಟ್ಟದ ಕರಿದೇವ ದೇವಸ್ಥಾನದ ಹಿಂಬದಿಗೆ ಹೊಂದಿಕೊಂಡಿರುವ ಪ್ರದೇಶ ಹಾಗೂ ಕೊಂಕಣ ರೈಲ್ವೆ ಹಳಿ ಹಾದು ಹೋಗಿರುವ ಸ್ಥಳಕ್ಕೆ ಸಮೀಪದಲ್ಲೇ ಈ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳೀಯರಿಗೆ ಕೆಲಕಾಲ ಆತಂಕ ಉಂಟು ಮಾಡಿತು. ಸಮೀಪದಲ್ಲೇ ಕದಂಬ ನೌಕಾನೆಲೆಯ ವಸತಿ ಸಮುಚ್ಚಯ ನಿರ್ಮಾಣಗೊಳ್ಳುತ್ತಿದ್ದು ಮಧ್ಯಾಹ್ನದ ಹೊತ್ತಿಗೆ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ, ಕ್ಷಣಾರ್ಧದಲ್ಲಿ ಎಕರೆಗೂ ಅಧಿಕ ಹುಲ್ಲುಗಾವಲು ಪ್ರದೇಶಕ್ಕೆ ಹರಡಿಕೊಂಡಿತ್ತು.
ಇದನ್ನೂ ಓದಿ: Deepika Padukone: ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣಿಸಿದ ದೀಪಿಕಾ: ಹಾಡಿ ಹೊಗಳಿದ ನೆಟ್ಟಿಗರು!
ಇದರಿಂದಾಗಿ ಹೆದ್ದಾರಿ ಹಾಗೂ ನೌಕಾನೆಲೆ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿ ನೌಕಾನೆಲೆಯವರೂ ಆತಂಕಿತರಾಗಿದ್ದಲ್ಲದೇ, ಸ್ಥಳೀಯ ನಾಗರಿಕರು ಕೂಡ ಭಯಭೀತರಾದರು. ಸ್ಥಳೀಯ ನಿವಾಸಿಗಳು ಹಾಗೂ ನೌಕಾನೆಲೆಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಿರಲಿಲ್ಲ. ಕೂಡಲೇ ಕಾರವಾರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಲಾಗಿದ್ದು, ಜೊತೆಗೆ ಅಂಕೋಲಾದಿಂದಲೂ ಅಗ್ನಿಶಾಮಕ ತಂಡ ಧಾವಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಗಂಟೆಗೂ ಅಧಿಕ ಕಾಲ ನಡೆದ ಕಾರ್ಯಾಚರಣೆಯಲ್ಲಿ ಅಂತಿಮವಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಮೂರೂ ಅಗ್ನಿಶಾಮಕ ತಂಡ ಯಶಸ್ವಿಯಾಗಿದೆ.
ಇದನ್ನೂ ಓದಿ: Karnataka Budget 2023: ಮಠ ಮಾನ್ಯಗಳಿಗೆ ಭರ್ಜರಿ ಕೊಡುಗೆ, ಅರ್ಚಕರ: ಸಮಗ್ರ ಅಭಿವೃದ್ಧಿಗೆ 1 ಸಾವಿರ ಕೋಟ ರೂ. ಘೋಷಣೆ
ಕಾರವಾರದ 4 ಸಾವಿರ ಲೀಟರ್‌ನ ಅಗ್ನಿಶಾಮಕ ವಾಹನದ ಎರಡು ಟ್ರಿಪ್, ಅಂಕೋಲಾ ವಾಹನದ ಒಂದು ಟ್ರಿಪ್ ಹಾಗೂ ಸೀಬರ್ಡ್ ಅಗ್ನಿಶಾಮಕ ವಾಹನದ ಸುಮಾರು ಮೂರು ಟ್ರಿಪ್ ನೀರನ್ನು ಬೆಂಕಿ ನಂದಿಸಲು ಬಳಸಲಾಗಿದೆ ಎನ್ನಲಾಗಿದೆ. ರೈಲಿನಲ್ಲಿ ಹೋಗುವ ಯಾರೋ ಪ್ರಯಾಣಿಕರು ಎಸೆದ ಸಿಗರೇಟಿನ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಈ ಸಂಬಂಧ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Tech Layoffs: 453 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಗೂಗಲ್ ಇಂಡಿಯಾ! ಇನ್ನಷ್ಟು ಜಾಬ್ ಕಡಿತ?
ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಕಾರವಾರದ ಪ್ರಮುಖ ಅಗ್ನಿಶಾಮಕ ರಾಜೇಶ್ ರಾಣೆ, ಅಗ್ನಿಶಾಮಕ ಚಾಲಕ ಧನಂಜಯ್, ಅಗ್ನಿಶಾಮಕರಾದ ರಾಜೇಂದ್ರ ಪಾತರಕರ್, ನಿಹಾರ್ ಕೆ.ಕೆ., ಅಂಕೋಲಾ ಅಗ್ನಿಶಾಮಕ ಠಾಣಾ ಸಿಬ್ಬಂದಿ ಹಾಗೂ ಸೀಬರ್ಡ್ ನೌಕಾನೆಲೆಯ ಅಗ್ನಿಶಾಮಕ ವಾಹನದೊಂದಿಗೆ ಸೇನಾ ಸಿಬ್ಬಂದಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Karnataka Budget 2023 : ಅಂಗನವಾಡಿ ಕಾರ್ಯಕರ್ತೆಯರಿಗೆ ಉಪಧನ; ಇದಕ್ಕಾಗಿ 40 ಕೋಟಿ ರೂ. ಅನುದಾನ