ತಮಿಳುನಾಡು: ಅತ್ತಿಬೆಲೆ ಪಟಾಕಿ ದುರ್ಘಟನೆ ಬಳಿಕ ತಮಿಳುನಾಡಲ್ಲಿ ಮತ್ತೊಂದು ಅಗ್ನಿ ದುರಂತ (Fire Accident) ಸಂಭವಿಸಿದೆ. ತಮಿಳುನಾಡಿನ ಅರಿಯಲೂರು ಜಿಲ್ಲೆಯ ವಿರಾಗಲೂರಿನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ ನಡೆದಿದೆ. ಪಟಾಕಿ ಸಿಡಿತಕ್ಕೆ 10 ಮಂದಿ ಮೃತಪಟ್ಟಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದಾರೆ.
ರಾಜೇಂದ್ರನ್ ಎಂಬುವವರು ಪಟಾಕಿ ತಯಾರಿಕಾ ಘಟಕ ನಡೆಸುತ್ತಿದ್ದರು. ಸೋಮವಾರ ಬೆಳಗ್ಗೆ ಹಠಾತ್ ಬೆಂಕಿ ಕಾಣಿಸಿಕೊಂಡಿತ್ತು. ಪರಿಣಾಮ ಕ್ಷರ್ಣಾಧದಲ್ಲಿ ಪಟಾಕಿ ತಯಾರಿಕಾ ಘಟಕ ಸುಟ್ಟು ಕರಕಲಾಗಿದೆ. ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ಒಟ್ಟು 10 ಮಂದಿ ಜೀವ ಕಳೆದುಕೊಂಡಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಚಿಕಿತ್ಸೆಗಾಗಿ ಅರಿಯಲೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಡುತ್ತಿದೆ. ಘಟಕದ ಸಮೀಪ ಹೋಗುವ ಆಗದಷ್ಟು ಬೆಂಕಿ ತೀವ್ರತೆ ಇದೆ. ಜತೆಗೆ ಪಟಾಕಿ ಸಿಡಿತದಿಂದ ಹತ್ತಿರ ಹೋಗಲು ಸಾಧ್ಯವಾಗುತ್ತಿಲ್ಲ. ಇನ್ನು ಈ ಅವಘಡಲ್ಲಿ 8ಕ್ಕೂ ಹೆಚ್ಚು ಬೈಕ್‌ಗಳಿಗೆ ಹಾನಿಯಾಗಿವೆ.
ಇದನ್ನೂ ಓದಿ: Attibele Fire Accident : ಅತ್ತಿಬೆಲೆಯಲ್ಲಿ ರಾತ್ರೋ ರಾತ್ರಿ ಅನಧಿಕೃತ ಪಟಾಕಿ ಗೋಡೌನ್ ಬಂದ್
ಅತ್ತಿಬೆಲೆ ಪಟಾಕಿ ದುರಂತದಲ್ಲಿ 14 ಮಂದಿ ಸಜೀವ ದಹನ
ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದಲ್ಲಿರುವ ಬಾಲಾಜಿ ಟ್ರೇಡರ್ಸ್‌ನಲ್ಲಿ ಅಕ್ಟೋಬರ್ 7ರಂದು ನಡೆದ ಅಗ್ನಿ ದುರಂತದಲ್ಲಿ (Attibele Fire Accident) 14 ಮಂದಿ ಮೃತಪಟ್ಟಿದ್ದರು. ಅತ್ತಿಬೆಲೆ ಬಾರ್ಡರ್ ಬಳಿ ಇರುವ ಶ್ರೀಬಾಲಾಜಿ ಟ್ರೇಡರ್ಸ್ ಮಾಲೀಕ ನವೀನ್ ರೆಡ್ಡಿ ಅನತಿ ಮೇರೆಗೆ ಸೇಲ್ಸ್ ಮ್ಯಾನ್ ಕೆಲಸಕ್ಕೆ ಬಂದಿದ್ದರು. ವಾಣಿಯಾಂಬಾಡಿಯಿಂದ 12 ಮಂದಿ, ಕಲ್ಲಕುರ್ಚಿಯಿಂದ 15 ಮಂದಿ ಜತೆಗೆ 9 ಮಂದಿ ಬಂದು ಕೆಲಸ ಮಾಡುತ್ತಿದ್ದರು. ಇವರೆಲ್ಲರು ಉಳಿದುಕೊಳ್ಳಲು ಪಟಾಕಿ ಅಂಗಡಿಯ ಮುಂಭಾಗವೇ ರೂಂವೊಂದನ್ನು ಮಾಡಿಕೊಟ್ಟಿದ್ದರು. ಸೇಲ್ಸ್ ಪರ್ಸನ್‌ಗೆ ಪ್ರತಿ ದಿನ 600 ರಿಂದ 700 ರೂಪಾಯಿ ಸಂಬಳ ನೀಡುತ್ತಿದ್ದರು.
ಹೀಗಿದ್ದಾಗ ಕಳೆದ 7ರ ಶನಿವಾರ ಎಂದಿನಂತೆ ಎಲ್ಲರೂ ಕೆಲಸಕ್ಕೆ ಹಾಜರಾಗಿದ್ದರು. ಮಧ್ಯಾಹ್ನ ಊಟ ಮುಗಿಸಿ ವಾಪಸ್ ಬಂದಾಗ ಕಂಟೈನರ್ ಲಾರಿಯಲ್ಲಿ ಪಟಾಕಿ ಲೋಡ್ ಬಂದಿತ್ತು. ಹೀಗಾಗಿ ಪಟಾಕಿ ಬಾಕ್ಸ್‌ಗಳನ್ನು ಇಳಿಸುವಂತೆ ಪಟಾಕಿ ಅಂಗಡಿ ಮಾಲೀಕ ತಿಳಿಸಿದ್ದ. ಅದರಂತೆ ಕಂಟೈನರ್‌ನಲ್ಲಿದ್ದ ಪಟಾಕಿ ಬಾಕ್ಸ್‌ಗಳನ್ನು ಅಂಗಡಿಯೊಳಗೆ ತೆಗೆದುಕೊಂಡು ಹೋಗುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿ 120 ವಾರ್ಟ್ಸ್, 220 ರಾರ್ಟ್ಸ್‌ನ ಪಟಾಕಿ ಬಾಕ್ಸ್‌ಗಳಿಂದ ಸ್ಪರ್ಕ್ ಬಂದಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಹೆಚ್ಚಾಗಿತ್ತು.
ಇದನ್ನು ಕಂಡ ಕೂಡಲೇ ಕ್ಯಾಶ್ ಕೌಂಟರ್‌ನ ಬಳಿ ಇದ್ದ ಮಾಲೀಕ ನವೀನ್ ರೆಡ್ಡಿ ಕೂಡಲೇ ಓಡಿ ಹೋಗಿದ್ದರು. ಈ ವೇಳೆ ನವೀನ್ ರೆಡ್ಡಿಗೂ ಬೆಂಕಿ ತಗುಲಿ ಸ್ವಲ್ಪ ಕೈಗೆ ಏಟಾಗಿತ್ತು. ಹಿಂಭಾಗ ಕೆಲಸ ಮಾಡುತ್ತಿದ್ದ ಕೆಲ ಹೆಂಗಸರು ಪಟಾಕಿ ಶಬ್ಧಕ್ಕೆ ಕೇಳಿ ಓಡಿ ಹೋಗಿದ್ದರು. ಇತ್ತ ಗೋದಾಮಿನೊಳಗೆ ಇದ್ದವರು ಹೊರಗೆ ಬರಲು ಆಗದೆ ರಕ್ಷಿಸುವಂತೆ ಕೂಗಾಡಿದ್ದರು. ಆದರೆ ಪಟಾಕಿ ಬಾಕ್ಸ್‌ಗಳನ್ನು ಅಡ್ಡದಿಡ್ಡಿಯಾಗಿ ಇಟ್ಟಿದ್ದರಿಂದ ಓಡಿ ಹೋಗಲು ಸಾಧ್ಯವಾಗಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು, ಅಂಗಡಿಯೊಳಗೆ ಸಿಲುಕಿದ್ದ ನಾಲ್ವರು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದರು. ಇತ್ತ ಪಟಾಕಿ ಎಲ್ಲವೂ ಒಮ್ಮೆಲೆ ಸಿಡಿದ ಕಾರಣಕ್ಕೆ ಅಂಗಡಿಯೊಳಗೆ ಇದ್ದವರು ಗುರುತೇ ಸಿಗದಂತೆ ಸುಟ್ಟು ಕರಕಲಾಗಿದ್ದರು. ಅಂಗಡಿ ಮುಂಭಾಗದಲ್ಲಿದ್ದ ಕಂಟೈನರ್ ಲಾರಿ, ಟಾಟಾ ಏಸ್, ಇನ್ನೊಂದು ಗೂಡ್ಸ್ ಗಾಡಿ ಹಾಗೂ ದ್ವಿಚಕ್ರ ವಾಹನಗಳಿಗೆ ಬೆಂಕಿ ತಗುಲಿ ಸುಟ್ಟುಹೋಗಿತ್ತು. ಈ ಘಟನೆ ಎಲ್ಲವೂ ಮಾಸವು ಮುನ್ನವೇ ಇದೀಗ ತಮಿಳುನಾಡಲ್ಲೂ ಪಟಾಕಿ ಘಟಕ ಸ್ಫೋಟಗೊಂಡಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ