ಆನೇಕಲ್/ಕೊಪ್ಪಳ/ಧಾರವಾಡ : ದನದ ಕೊಟ್ಟಿಗೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ, ಬೆಂಕಿಯ ಮಧ್ಯೆ (Fire Accident) ಸಿಕ್ಕಿಹಾಕಿಕೊಂಡ ದನಗಳು ಪ್ರಾಣ ಕಳೆದುಕೊಂಡಿವೆ. ಒಂಬತ್ತು ಹಸುಗಳು ದಾರುಣವಾಗಿ ಮೃತಪಟ್ಟಿದ್ದರೆ, ಉಳಿದ ಐದು ಹಸುಗಳ ಸ್ಥಿತಿ ಚಿಂತಾಜನಕವಾಗಿದೆ. ಬೆಂಗಳೂರು ಹೊರವಲಯ ಹುಳಿಮಂಗಲ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಕೊಟ್ಟಿಗೆಯಲ್ಲಿ ಹದಿನೈದು ಹಸುಗಳನ್ನು ಕಟ್ಟ ಹಾಕಲಾಗಿತ್ತು. ಅದೇ ಕೊಟ್ಟಿಗೆಯಲ್ಲಿ ಎರಡು ಬೈಕ್ ನಿಲ್ಲಿಸಲಾಗಿತ್ತು. ಶುಕ್ರವಾರ ರಾತ್ರಿ ಎರಡು ಗಂಟೆ ಸುಮಾರಿಗೆ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಲೇ ಬೆಂಕಿ ಆವರಿಸಿದ್ದು, ಒಂಬತ್ತು ಹಸುಗಳು ಸುಟ್ಟು ಕರಕಲಾಗಿವೆ. ಬದುಕುಳಿದಿರುವ ಐದು ಹಸುಗಳಿಗೆ ಗಂಭೀರವಾದ ಸುಟ್ಟಗಾಯಗಳಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿವೆ. ಕೊಟ್ಟಿಗೆಯಲ್ಲಿದ್ದ ಬೈಕ್‌ಗಳು ಬೆಂಕಿಗಾಹುತಿ ಆಗಿದೆ. ಸ್ಥಳಕ್ಕೆ ಪಶುವೈದ್ಯರ ತಂಡ ಹಾಗೂ ಜಿಗಣಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Trains cancelled : ಮೂರು ತಿಂಗಳು ಈ ಮಾರ್ಗಗಳ ರೈಲು ಸಂಚಾರ ರದ್ದು!
ಕೊಪ್ಪಳದಲ್ಲಿ ಹೊತ್ತಿ ಉರಿದ ಜ್ಯುವೆಲರಿ ಶಾಪ್
ಅಗ್ನಿ ಅವಘಡ ಸಂಭವಿಸಿ ಜ್ಯುವೆಲರಿ ಶಾಪ್‌ವೊಂದು ಹೊತ್ತಿ ಉರಿದಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ತಡರಾತ್ರಿ ಘಟನೆ ನಡೆದಿದ್ದು, ಮೂರು ಅಂತಸ್ತಿನ ಕಟ್ಟಡವು ಸಂಪೂರ್ಣ ಬೆಂಕಿಗಾಹುತಿ ಆಗಿದೆ. ಅಪಾರ ಪ್ರಮಾಣದ ಚಿನ್ನಾಭರಣವು ಬೆಂಕೆಗಾಹುತಿ ಆಗಿದೆ. ಗಂಗಾವತಿ ನಗರದ ಗಣೇಶ ಸರ್ಕಲ್‌ನಲ್ಲಿರುವ ಕೆಜಿಪಿ ಜ್ಯುವೆಲರಿ ಶಾಪ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳದ ವಾಹನಗಳು ದೌಡಿಯಿಸಿದ್ದು, ಸತತ ಕಾರ್ಯಾಚರಣೆಯಿಂದ ಬೆಂಕಿ ತಹಬದಿಗೆ ಬಂದಿದೆ.
ಧಾರವಾಡದಲ್ಲಿ ಕಂಟೆನರ್ ಹೊತ್ತು ಹೊರಟಿದ್ದ ಲಾರಿಯಲ್ಲಿ ದಿಢೀರ್ ಬೆಂಕಿ
ಕಂಟೆನರ್ ಹೊತ್ತು ಹೊರಟಿದ್ದ ಲಾರಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದೆ. ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಮಂಡ್ಯಾಳ್ ಗ್ರಾಮದ ಬಳಿ ತಡರಾತ್ರಿ ಘಟನೆ ನಡೆದಿದೆ. ಗೋವಾದಿಂದ ಧಾರವಾಡ ಕಡೆ ಬರುತ್ತಿದ್ದಾಗ ಏಕಾಏಕಿ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ತಕ್ಷಣ ಚಾಲಕ ಹಾಗೂ ಕ್ಲೀನರ್ ಲಾರಿಯಿಂದ ಕೆಳಗಿಳಿದು ಓಡಿದಿದ್ದಾರೆ.
ಲಾರಿಗೆ ಬೆಂಕಿ ಹತ್ತಿದ ಕಾರಣ ಅಳ್ನಾವರ ರಸ್ತೆ ಕೆಲ ಕಾಲ ಬಂದ್ ಆಗಿತ್ತು. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಆದರು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.