ಚಾಮರಾಜನಗರ/ಬಾಗಲಕೋಟೆ: ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hill) ಅಗ್ನಿ ಅವಘಡ (Fire Accident) ಸಂಭವಿಸಿದೆ. ಲಾಡು ಪ್ರಸಾದ ತಯಾರಿಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗನೇ ಹೊತ್ತಿ ಉರಿದಿದೆ.
ಸಿಲಿಂಡರ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಲಾಡು ಪ್ರಸಾದ ತಯಾರು ಘಟಕದಲ್ಲಿ ಸಿಹಿ ಜಿಡ್ಡು ಹಾಗೂ ಎಣ್ಣೆ ಪದಾರ್ಥಗಳಿಗೆ ಬೆಂಕಿ ತಗುಲಿದೆ. ಘಟಕದಲ್ಲಿ ಜಿಡ್ಡು ಹಾಗೂ ಎಣ್ಣೆ ಇದ್ದ ಕಾರಣ ಬೆಂಕಿ ಒಮ್ಮೆಲೆ ಹಬ್ಬಿದೆ. ನೋಡನೋಡುತ್ತಿದ್ದಂತೆ ಲಾಡು ಪ್ರಸಾದದ ಗೋದಾಮು ಸುಟ್ಟು ಕರಕಲಾಗಿದೆ.
ಬೆಂಕಿ ನಂದಿಸಲು ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಸಿಬ್ಬಂದಿ ಹರಸಾಹಸ ಪಟ್ಟರು. ಲಾಡು ಪ್ರಸಾದದ ಗೋದಾಮು ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗುತ್ತಿದ್ದ ಹೊತ್ತಲ್ಲಿ ಸಿಬ್ಬಂದಿ ಯಾರು ಇರಲಿಲ್ಲ. ಹೀಗಾಗಿ ನಡೆಯಬಹುದಾದ ಅನಾಹುತವೊಂದು ತಪ್ಪಿದೆ. ಸದ್ಯ ಬೆಂಕಿ ನಂದಿಸುವ ಕಾರ್ಯವು ಮುಂದುವರಿದಿದೆ.
ಬೆಂಕಿಗಾಹುತಿಯಾದ ಕಬ್ಬು ಬೆಳೆ
ಆಕಸ್ಮಿಕವಾಗಿ ಕಬ್ಬಿನ ಬೆಳೆಗೆ ಬೆಂಕಿ ಹೊತ್ತಿಕೊಂಡು ಅಂದಾಜು 8 ಎಕರೆಯಲ್ಲಿ ಬೆಳೆದ ಕಬ್ಬು ಬೆಂಕಿಗಾಹುತಿ ಆಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಖಾನಾಪೂರ ಎಸ್.ಕೆ. ಗ್ರಾಮದಲ್ಲಿ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದಾರೆ.
ಇತ್ತ ವಿಜಯಪುರದ ಧೂಳಖೇಡದಲ್ಲೂ ಆಕಸ್ಮಿಕ ಅಗ್ನಿ ಅವಘಡದಿಂದ 20 ಎಕರೆಗೂ ಅಧಿಕ ಕಬ್ಬು ನಾಶವಾಗಿತ್ತು. ಕಟಾವಿಗೆ ಸಿದ್ದವಿದ್ದ ಕಬ್ಬು ನಾಶವಾಗಿದ್ದರಿಂದ ಸುಮಾರು 20 ಲಕ್ಷ ರೂ. ಹೆಚ್ಚು ನಷ್ಟವಾಗಿತ್ತು. ವಿಜಯಪುರ ಜಿಲ್ಲೆಯ ಚಡಚಣ ತಾ, ಧೂಳಖೇಡ ಗ್ರಾಮಯಲ್ಲಿ ಪ್ರಸನ್ನ ನೀಲೂರೆ, ವೀರೇಶ ಕೋರೆ, ದಯಾನಂದ ಕೋರೆ ಹಾಗೂ ಜಗನ್ನಾಥ ರೇವತಗಾಂವ ಎನ್ನುವವರಿಗೆ ಸೇರಿದ ಜಮೀನಿನಲ್ಲಿ ಬೆಳೆಯು ಸುಟ್ಟು ಕರಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.