ಬೆಂಗಳೂರು/ದೊಡ್ಡಬಳ್ಳಾಪುರ: ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದು ಬೆಂಕಿಗೆ (Fire Accident) ಆಹುತಿಯಾಗಿದೆ. ಕಾರಿನ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಕೊಂಡು ಕ್ಷಣಾರ್ಧದಲ್ಲಿಯೇ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಸಣ್ಣ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದವರು ಇಳಿದು ಓಡಿ ಪಾರಾಗಿದ್ದಾರೆ.
ಇತ್ತೀಚೆಗೆ ಕಾರು, ಬೈಕ್ ಸೇರಿದಂತೆ ಬಸ್‌ಗಳಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ವರದಿ ಆಗುತ್ತಿದೆ. ಮಾ. 10ರೊಂದು ಬಿಎಂಟಿಸಿ ಬಸ್ (Bmtc bus) ಅಗ್ನಿಗೆ (Bmtc Fire tragedy) ಆಹುತಿಯಾದ ಪರಿಣಾಮ ಬಸ್ಸಿನಲ್ಲಿ ಮಲಗಿದ್ದ ನಿರ್ವಾಹಕರೊಬ್ಬರು ಸಜೀವ ದಹನಗೊಂಡ ಘಟನೆ ಲಿಂಗಧೀರನಹಳ್ಳಿಯಲ್ಲಿ ಕಳೆದ ಗುರುವಾರ ಮಧ್ಯರಾತ್ರಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣ ನಡೆದಿದೆ.
ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅವಘಡ
ದೊಡ್ಡಬಳ್ಳಾಪುರ ನಗರದ ಹೊರವಲಯದ ಪಾಲನಜೋಗಹಳ್ಳಿಯಲ್ಲಿ ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ. ರೊಜಿಪುರ ನಿವಾಸಿ ನವೀನ್ ಎಂಬುವವರಿಗೆ ಸೇರಿದ ಪ್ಲಾಸ್ಟಿಕ್ ಗೋಡೌನ್ ಆಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಬೆಂಕಿ ನಂದಿಸಲು ಮುಂದಾದರು.
ಹುಲ್ಲಿನ ಬಣವೆಗೆ ಬೆಂಕಿ
ಗೋಶಾಲೆಗೆ ಸಂಗ್ರಹಿಸಿದ್ದ ಭತ್ತದ ಹುಲ್ಲಿನ ಬಣವೆಗೆ ದುಷ್ಕರ್ಮಿಗಳು ಬೆಂಕಿ (Fire Accident) ಹಾಕಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆರ್ಹಾಳ ಗ್ರಾಮದಲ್ಲಿ ನಡೆದಿದೆ. ಅಪಾರ ಪ್ರಮಾಣದ ಭತ್ತದ ಹುಲ್ಲು ಸುಟ್ಟು ಭಸ್ಮವಾಗಿದ್ದು, ಸುಮಾರು 10 ಎಕರೆಗಳಲ್ಲಿ ಬೆಳೆದಿದ್ದ ಭತ್ತದ ಹುಲ್ಲನ್ನು ಸಂಗ್ರಹಿಸಿದ್ದರು.
ಭರತ ಭೂಮಿ ಸೇವಾ ಟ್ರಸ್ಟ್ ಹೇರೂರು ಇವರ ನೇತೃತ್ವದಲ್ಲಿ ಗೋಶಾಲೆ ನಡೆಯುತ್ತಿತ್ತು. ಗೋಸಂರಕ್ಷಣಾ ಕೇಂದ್ರ ಸ್ಥಾಪಿಸಿ ಸುಮಾರು 70ಕ್ಕೂ ಹೆಚ್ಚು ಆಕಳುಗಳ ರಕ್ಷಣೆ ಮಾಡಲಾಗಿತ್ತು. ಹುಲ್ಲು ಸುಟ್ಟು ಭಸ್ಮವಾಗಿದ್ದರಿಂದ ಮೇವಿಲ್ಲದೆ ಗೋವುಗಳು ಪರದಾಡಬೇಕಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಗೋಶಾಲೆ ಮಾಲೀಕರು ಆಗ್ರಹಿಸಿದ್ದಾರೆ.
ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಮೀಸಲು ಅರಣ್ಯ ಪ್ರದೇಶ
ಬೀದರ್ ತಾಲೂಕಿನ ಹೊನ್ನಿಕೇರಿ ಗ್ರಾಮದ ಬಳಿ ಇರುವ ಮೀಸಲು ಅರಣ್ಯ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಏಕಾಏಕಿ ಅರಣ್ಯ ಪ್ರದೇಶ ಹೊತ್ತಿ ಉರಿದಿದೆ. ಸುಮಾರು ಎರಡು ಎಕರೆಯಷ್ಟು ಪ್ರದೇಶದಲ್ಲಿ ಬೆಂಕಿ ಜ್ವಾಲೆ ಹರಡಿದೆ.
ಇದನ್ನೂ ಓದಿ: kidney disease: ಕೊರೊನಾ ಕಾಣಿಸಿಕೊಂಡವರಲ್ಲಿ ಕಾಡುತ್ತಿದೆ ಕಿಡ್ನಿ ಸಮಸ್ಯೆ; ನಿರ್ಲಕ್ಷ್ಯ ಮಾಡಿದ್ರೆ ಅಪಾಯ ಗ್ಯಾರಂಟಿ
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಸೋಮವಾರ ಸಂಜೆ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ತಗಲಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ