ಕೊಡಗು: ಇಲ್ಲಿನ ಕುಶಾಲನಗರದ ಜಿಎಂಪಿ ಶಾಲೆ (GMP school) ಎದುರಿನ ಬಿಎಂ ರಸ್ತೆಯಲ್ಲಿ ಗುರುವಾರ (ಮಾ.23) ನಸುಕಿನ ಜಾವ ಚಲಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕ ಬೆಂಕಿ (Fire Accident) ಕಾಣಿಸಿಕೊಂಡಿದ್ದು, ಲಾರಿಯು ಸುಟ್ಟು ಕರಕಲಾಗಿದೆ.
ಕೊಯಮತ್ತೂರಿನಿಂದ ಮಂಗಳೂರಿಗೆ ಗುಜರಿ ಸಾಗಿಸುತ್ತಿದ್ದ ಲಾರಿ (Lorry) ಇದಾಗಿದ್ದು, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಲಾರಿ ಚಾಲಕ ಹೊರಗೆ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಎರಡು ಅಗ್ನಿಶಾಮಕ ತಂಡದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಮೂರೇ ತಿಂಗಳಲ್ಲಿ ಬೆಂಕಿಗಾಹುತಿಯಾದ ಹತ್ತಾರು ವಾಹನಗಳು
ಜನವರಿ 2, ಚಾಮರಾಜನಗರದ ಗುಂಡ್ಲುಪೇಟೆ
ಬಂಡೀಪುರ, ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ವಾಪಸಾಗುತ್ತಿದ್ದ ವೇಳೆ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿ ಗೋಪಾಲಪುರ ರಸ್ತೆಯಲ್ಲಿ ಕಾರೊಂದು ಧಗಧಗನೆ (Car Fire) ಹೊತ್ತಿ ಉರಿದಿತ್ತು. ಹೊಸ ವರ್ಷಾಚರಣೆಗಾಗಿ ಕೇರಳದಿಂದ ಪ್ರವಾಸಿಗರು ಕಾರಿನಲ್ಲಿ ಬಂದಿದ್ದರು. ಈ ವೇಳೆ ಬೆಂಕಿ ಕಾಣಿಸಿಕೊಂಡಿದ್ದು ಕಾರಿನಲ್ಲಿದ್ದ ಏಳು ಜನ ಓಡಿ ಹೋಗಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದರು. ರಸ್ತೆಯಲ್ಲಿ ಹರಡಿದ್ದ ಹುರುಳಿ ಸೊಪ್ಪು ಕಾರಿನಡಿ ಸಿಲುಕಿ ಎಂಜಿನ್‌ಗೆ ತಗುಲಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿತ್ತು.
ಜನವರಿ 5, ಚಿಕ್ಕೋಡಿಯಲ್ಲಿ ಹೊತ್ತಿ ಉರಿದ ಬಸ್
ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರದ ಬಳಿ ಎನ್‌ಎಚ್ 4ರಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ (Fire Accident) ಕಾಣಿಸಿಕೊಂಡ ಘಟನೆ ಜನವರಿ 5ರಂದು ನಡೆದಿತ್ತು. ನೋಡ ನೋಡುತ್ತಿದ್ದಂತೆ ರಸ್ತೆ ಮಧ್ಯದಲ್ಲಿಯೇ ಬಸ್ ಹೊತ್ತಿ ಉರಿದಿತ್ತು. ಸಂಕೇಶ್ವರದಿಂದ ಬೆಳಗಾವಿಗೆ ಹೊರಟಿದ್ದ ಸರ್ಕಾರಿ ಬಸ್‌ನಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಚಾಲಕ ತನ್ನ ಸಮಯ ಪ್ರಜ್ಞೆ ಮೆರೆದಿದ್ದರು, ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದರು. ಇದರಿಂದಾಗಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದರು.
ಜನವರಿ 29, ನಂದಿ ಬೆಟ್ಟ
ನಂದಿ ಬೆಟ್ಟಕ್ಕೆ ವೀಕೆಂಡ್ ಟ್ರಿಪ್‌ಗೆ ಬಂದಿದ್ದ ಪ್ರವಾಸಿಗರೊಬ್ಬರ ಕಾರಿನ ಎಂಜಿನ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಲೇ ಸುಟ್ಟು (Fire Accident) ಕರಕಲಾಗಿತ್ತು. ಬೆಟ್ಟ ಹತ್ತುವಾಗ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನಿಂದ ಹೊಗೆ ಬರುತ್ತಿದ್ದರೂ ಬೆಟ್ಟ ಹತ್ತಿಸಲು ಕಾರು ಚಾಲಕ ಮುಂದಾಗಿದ್ದರು. ಈ ವೇಳೆ ಬೈಕ್ ಸವಾರರೊಬ್ಬರು ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದು, ತಕ್ಷಣ ಎಚ್ಚೆತ್ತುಕೊಂಡ ಕಾರಿನಲ್ಲಿದ್ದವರು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದರು.
ಜನವರಿ 30, ಭದ್ರಾವತಿ ಬೈಪಾಸ್ ಬಳಿ ಕಾರು ಭಸ್ಮ
ಶಿವಮೊಗ್ಗದ ಭದ್ರಾವತಿಯ ಬೈಪಾಸ್ ರಸ್ತೆಯಲ್ಲಿ ಕಾರೊಂದು ನಡುರಸ್ತೆಯಲ್ಲೇ ಹೊತ್ತಿ ಉರಿದಿತ್ತು. (Car burnt). ಉಜ್ಜನೀಪುರದ ಹೊಳೆ ಬ್ರಿಡ್ಜ್ ಸಮೀಪ ರಸ್ತೆಯಲ್ಲಿ ಘಟನೆ ನಡೆದಿತ್ತು. ಭದ್ರಾವತಿಯ ಓಲ್ಡ್ ಟೌನ್ ನಿವಾಸಿಯಾಗಿರುವ ಶ್ರೀಕಾಂತ್ ಅವರ ಕಾರು ಇದಾಗಿದ್ದು, ಕಾರು ಚಲಾಯಿಸುವಾಗ ಮುಂಭಾಗದಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿತ್ತು. ಶ್ರೀಕಾಂತ್ ಅವರು ಹೊಗೆಯನ್ನು ಕಂಡ ಕೂಡಲೇ ತಕ್ಷಣವೇ ಕಾರಿನಿಂದ ಇಳಿದು, ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು.
ಫೆಬ್ರವರಿ 12, ಸಾಗರದದಲ್ಲೂ ಹೊತ್ತಿ ಉರಿದಿದ್ದ ಕಾರು
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಎಲ್ಐಸಿ ಕಚೇರಿ ಮುಂಭಾಗ ಭಾನುವಾರ ಮಧ್ಯಾಹ್ನ ಈ ಅಗ್ನಿಅವಘಡ ಸಂಭವಿಸಿದ್ದು, ಕಾರಿನಲ್ಲಿದ್ದ ಚಾಲಕ ಪಾರಾಗಿದ್ದರು. ಸೊರಬ ತಾಲೂಕಿನ ಉಳವಿಯ ವಿಜಯ್ ಎಂಬುವರಿಗೆ ಸೇರಿದ ಕಾರು ಬಿ.ಎಚ್.ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಬೆಂಕಿ ಕಾಣಸಿಕೊಂಡಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಚಾಲಕ ವಿಜಯ್ ಕಾರಿನಿಂದ ಕೆಳಗೆ ಇಳಿದಿದ್ದರು. ಕಾರಿನ ಇಂಜಿನ್, ಬ್ಯಾಟರಿ ಹಾಗೂ ಕಾರಿನ ಮುಂಭಾಗ ಸುಟ್ಟು ಕರಕಲಾಗಿದೆ. ಸ್ಥಳೀಯರೇ ಮುಂದೆ ನಿಂತು ನೀರು ಹಾಯಿಸಿ ಬೆಂಕಿಯನ್ನು ನಿಯಂತ್ರಿಸಿದ್ದರು.
ಫೆಬ್ರವರಿ 12, ಬೆಂಗಳೂರು ಪ್ಯಾಲೇಸ್ ಗ್ರೌಂಡ್ ಐಷಾರಾಮಿ ಕಾರುಗಳಿಗೆ ಬೆಂಕಿ
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ಬಳಿ ಫೆಬ್ರವರಿ 12ರಂದು ಕಾರುಗಳು ಹೊತ್ತಿ ಉರಿದಿತ್ತು. ಐಷಾರಾಮಿ ಕಾರು ಸೇರಿ ಎರಡರಿಂದ ಮೂರು ಕಾರು ಸುಟ್ಟು ಕರಕಲಾಗಿದ್ದು, ಕಸಕ್ಕೆ ಬೆಂಕಿ ತಗುಲಿರಬಹುದು ಅಥವಾ ಕಾರಿನಲ್ಲಿ ಬ್ಯಾಟರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿತ್ತು.
ಮಾರ್ಚ್ 11, ಹೊನ್ನಾವರ-ಸಾಗರ ರಾಜ್ಯ ಹೆದ್ದಾರಿ 206
ಹೊನ್ನಾವರ-ಸಾಗರ ರಾಜ್ಯ ಹೆದ್ದಾರಿ 206ರ ಮೂರುಕಟ್ಟೆ ಬಳಿ ಚಲಿಸುತ್ತಿದ್ದಾಗಲೇ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾದ ಘಟನೆ ನಡೆದಿತ್ತು. ಹೊನ್ನಾವರದಿಂದ ಚಿಕ್ಕೊಳ್ಳಿಗೆ ತೆರಳುತ್ತಿದ್ದ ವೇಳೆ ಏಕಾಏಕಿ ಕಾರಿನಲ್ಲಿ ಕಾಣಿಸಿಕೊಂಡಿತ್ತು. ತಕ್ಷಣವೇ ಕಾರನ್ನು ಹೆದ್ದಾರಿ ಪಕ್ಕ ನಿಲ್ಲಿಸಿ ಜಗದೀಶ ಹಾಗೂ ಸ್ನೇಹಿತರು ಹೊರಬಂದಿದ್ದಾರೆ. ನಂತರ ನೋಡನೋಡುತ್ತಿದ್ದಂತೆ ಬೆಂಕಿ ಸಂಪೂರ್ಣ ವ್ಯಾಪಿಸಿ ಕಾರು ಸುಟ್ಟು ಕರಕಲಾಗಿದೆ.
ಇದನ್ನೂ ಓದಿ: Sri Charukeerthi Bhattaraka Swamiji: ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ
ಮಾರ್ಚ್ 14, ಬೆಂಗಳೂರು ಜೆ.ಸಿ ರಸ್ತೆ
ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದು ಬೆಂಕಿಗೆ (Fire Accident) ಆಹುತಿಯಾಗಿತ್ತು. ಕಾರಿನ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಕೊಂಡು ಕ್ಷಣಾರ್ಧದಲ್ಲಿಯೇ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿತ್ತು. ಸಣ್ಣ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದವರು ಇಳಿದು ಓಡಿ ಪಾರಾಗಿದ್ದರು.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ