ವಿಜಯಪುರ: ಸಿಂದಗಿ ಪಟ್ಟಣದ ವಿಜಯಪುರ ಮುತ್ತಗಿ ಎಂಟರ್‌ಪ್ರೈಸಸ್ ಅಂಗಡಿಯಲ್ಲಿ ಭಾನುವಾರ (ಡಿ. ೪) ಮಧ್ಯಾಹ್ನ ಏಕಾಏಕಿ ಬೆಂಕಿ (Fire Accident) ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಹಾನಿಗೊಳಗಾಗಿದೆ. ಅಲ್ಲದೆ, ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿ ತಗಲುವ ಆತಂಕ ಕಾಡಿದೆ.
ಅಂಗಡಿಯಲ್ಲಿನ ಫ್ರಿಜ್, ವಾಟರ್ ಫಿಲ್ಟರ್ ಮಟೀರಿಯಲ್ಸ್, ನೀರಿನ ಕ್ಯಾನ್‌ಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಹಲವಾರು ವಸ್ತುಗಳು ಸುಟ್ಟು ಭಸ್ಮಗೊಂಡಿವೆ. ಘಟನೆಗೆ ಶಾಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಭಾನುವಾರ ರಜೆ ಇದ್ದ ಕಾರಣ ಅಂಗಡಿಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ.
ಫ್ರಿಜ್‌ನಲ್ಲಿ ಇರುವ ಗ್ಯಾಸ್ ಸಿಲೆಂಡರ್ ಬ್ಲಾಸ್ಟ್ ಆದ ಕಾರಣ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಹುಬೇಗ ಕಟ್ಟಡದ ತುಂಬೆಲ್ಲ ಹೊತ್ತಿಕೊಂಡಿದ್ದು, ಬೆಂಕಿ ನಂದಿಸಲು ಸಾಧ್ಯವಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ೧ ಗಂಟೆಯಿಂದಲೂ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ, ಇಕ್ಬಾಲ್ ಮುತ್ತಗಿ ಎಂಬುವರಿಗೆ ಸೇರಿದ ಶುದ್ಧ ಕುಡಿಯುವ ನೀರಿನ ಘಟಕವೂ ಹಾನಿಗೊಳಗಾಗಿದ್ದು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿದ್ದು, ಅಂದಾಜು 10 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ | Sexual Assault | ಶಾಲೆಗೆ ಹೋಗಿದ್ದ ಬಾಲಕಿ ಅಪಹರಣ; ಗುಜರಾತಿಗೆ ಹೊತ್ತೊಯ್ದ ಯುವಕನಿಂದ ಅತ್ಯಾಚಾರ