ಬೆಂಗಳೂರು: ಬೆಂಗಳೂರಲ್ಲಿ ಸಾಲು ಸಾಲು ಅಗ್ನಿ ಅವಘಡಗಳು (Fire Accident) ಸಂಭವಿಸುತ್ತಿದೆ. ಅತ್ತಿಬೆಲೆ ಪಟಾಕಿ ದುರಂತ ಮರೆಯಾಗುವ ಮುನ್ನವೇ ಕೋರಮಂಗಲದ ಮಡ್‌ಪೈಪ್ ಕೆಫೆಯಲ್ಲಿ (Mudpipe cafe) ಸಿಲಿಂಡರ್‌ಗಳು ಸ್ಫೋಟಗೊಂದಿತ್ತು. ಕೆಫೆಯಲ್ಲಿ ಅಕ್ರಮವಾಗಿ ಹುಕ್ಕಾಬಾರ್ ನಡೆಸಲಾಗುತ್ತಿತ್ತು ಎಂಬ ಆರೋಪವು ಕೇಳಿ ಬಂದಿದೆ. ಅವಘಡ ನಡೆದ ಸ್ಥಳಕ್ಕೆ ಗೃಹಸಚಿವ ಜಿ.ಪರಮೇಶ್ವರ್ (G.Parameshwar) ಭೇಟಿ ನೀಡಿ ತಪಾಸಣೆ ನಡೆಸಿದರು.
ಬಳಿಕ ಮಾತನಾಡಿದ ಗೃಹಸಚಿವ ಜಿ ಪರಮೇಶ್ವರ್, ಬುಧವಾರ ಯಾವ ರೀತಿ ಸಿಲಿಂಡರ್ ಬ್ಲಾಸ್ಟ್ ಆಗಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಒಂದರ ನಂತರ ಇನ್ನೊಂದು ಸಿಲಿಂಡರ್ ಬ್ಲಾಸ್ಟ್ ಆಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಲ್ಲರೂ ತಪ್ಪಿಸಿಕೊಂಡಿದ್ದಾರೆ. ಒಬ್ಬ ಮಾತ್ರ ರೂಫ್ ಟಾಪ್ ಮೇಲಿದ್ದವನು ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದಿದ್ದಾನೆ. ಸದ್ಯ ಆತ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದರು.
ತಾತ್ಕಾಲಿಕ ಸ್ಟ್ರಕ್ಚರ್ ಮಾಡಲು ಯಾವುದೇ ಅನುಮತಿ ನೀಡಿಲ್ಲ. ಹೋಟೆಲ್ ನಡೆಸಲು ಮಾತ್ರ ಅವಕಾಶವಿತ್ತು. ಆದರೆ ಇಲ್ಲಿ ಅಕ್ರಮವಾಗಿ ಹುಕ್ಕಾಬಾರ್ ನಡೆಸುತ್ತಿದ್ದರು ಎಂಬ ಮಾಹಿತಿ ಇದೆ. ಅತ್ತಿಬೆಲೆ ಪಟಾಕಿ ದುರಂತ, ನಿನ್ನೆಯ ಹೋಟೆಲ್ ದುರಂತ ನಂತರ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ. ಬೆಂಗಳೂರಿನ ಎಲ್ಲಾ ರೆಸ್ಟೊರೆಂಟ್‌ಗಳಲ್ಲೂ ತಪಾಸಣೆ ನಡೆಸಲಾಗುತ್ತೆ. ಯಾರದ್ದೋ ಅಕ್ರಮದಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ.
ಕೋರಮಂಗಲ ಸಿಲಿಂಡರ್ ಬ್ಲಾಸ್ಟ್ ಪ್ರಕರಣದಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಬಿಬಿಎಂಪಿ ಕೊಟ್ಟಿರುವ ಅನುಮತಿಯೇ ಬೇರೆ, ಇಲ್ಲಿ ನಡೆಯುತ್ತಿರುವುದು ಬೇರೆ. ಅನುಮತಿ ಕೊಟ್ಟ ನಂತರ ಬಿಬಿಎಂಪಿ ಪರಿಶೀಲನೆ ಮಾಡಬೇಕಿತ್ತು. ಆದರೆ ಅದನ್ನೂ ನಿರ್ವಹಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದರು.
ಇದನ್ನೂ ಓದಿ: Medical Negligence : ಒಡಲಿನಲ್ಲೇ ಜೀವ ಬಿಟ್ಟ ಕೂಸು! ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರಂದನ
ಜಸ್ಟ್ 15 ನಿಮಿಷದಲ್ಲಿ ನಡೆದ ಅನಾಹುತ!
ಅ.18ರ ಮಧ್ಯಾಹ್ನ ಕೋರಮಂಗಲದ ಮಡ್ ಪೈಪ್ ಕೆಫೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿತ್ತು. ಸಿಬ್ಬಂದಿ ಅಡುಗೆ ಮಾಡುವ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು. ನೋಡನೋಡುತ್ತಿದ್ದಂತೆ ಅಲ್ಲಿದ್ದ ಸಿಲಿಂಡರ್‌ಗಳು ಸ್ಫೋಟಗೊಂಡು, ಕೆಫೆಯಲ್ಲಿದ್ದ ಕುಷನ್ ಫರ್ನಿಚರ್‌ಗೂ ಬೆಂಕಿ ಆವರಿಸಿತ್ತು. ಇತ್ತ ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಕೆಫೆಯ ಸಿಬ್ಬಂದಿ ಕಟ್ಟಡದ ಮೇಲಿಂದ ಜಿಗಿದಿದ್ದ. ಜಸ್ಟ್ 15 ನಿಮಿಷದಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಕೆಫೆ ಸಿಬ್ಬಂದಿ ಪ್ರೇಮ್ ಸಿಂಗ್ ಓಡಿ ಹೋಗದೆ ಜಿಗಿಯಲು ಕಾರಣವಿದೆ.
ಬೆಂಕಿ ಬಿದ್ದ ತಕ್ಷಣ ಅಲ್ಲಿದ್ದ ತಪ್ಪಿಸಿಕೊಳ್ಳಲು ಜಾಗವೇ ಇರಲಿಲ್ಲ ಎನ್ನಲಾಗಿದೆ. 6ನೇ ಮಹಡಿಯಲ್ಲಿದ್ದ ಕೆಫೆಯ ರೂಫ್ ಟಾಪ್‌ನಲ್ಲಿ ಸುಮಾರು 12 ಟೇಬಲ್ ಹಾಕಿ ಸಿದ್ಧತೆಯನ್ನು ಮಾಡುತ್ತಿದ್ದರು. ಕಳೆದ ಒಂದು ವಾರದಿಂದ ರೂಫ್ ಟಾಪ್‌ನಲ್ಲೇ ಸರ್ವೀಸ್ ನೀಡಲಾಗುತ್ತಿತ್ತು. ಆರು ಸಿಲಿಂಡರ್‌ಗಳನ್ನು ರೂಫ್ ಟಾಪ್‌ನಲ್ಲಿ ಇಡಲಾಗಿತ್ತು. ಈ ವೇಳೆ 6ನೇ ಮಹಡಿಯಲ್ಲಿದ್ದ ಹಳೇ ಕಿಚನ್‌ನಲ್ಲಿ ಸಿಲಿಂಡರ್ ಸೋರಿಕೆ ಆಗಿದೆ. ಇದರ ಅರಿವು ಇರದೇ ಅಲ್ಲಿದ್ದ ಸಿಬ್ಬಂದಿ ಲೈಟ್ ಹಾಕಿದ್ದಾರೆ. ದಿಢೀರ್ ಬೆಂಕಿ ಹತ್ತಿಕೊಂಡಿದೆ. ಇತ್ತ ಕೆಫೆಯೊಳಗೆ ಇದ್ದವರು ಕೂಡಲೇ ಓಡಿ ಹೋಗಿದ್ದಾರೆ. ಆದರೆ ಪ್ರೇಮ್ ಸಿಂಗ್ ರೂಫ್ ಟಾಪ್‌ನಲ್ಲಿ ಇದ್ದರಿಂದ ಬೆಂಕಿ ಜ್ವಾಲೆ ಫ್ಲೋರ್‌ಗೆ ಆವರಿಸಿದೆ. ಇದರಿಂದ ಕೆಳಗೆ ಓಡಿಹೋಗಲು ಆಗಿಲ್ಲ.
ಇತ್ತ ರೂಫ್ ಟಾಪ್‌ನಲ್ಲಿದ್ದ ಸಿಲಿಂಡರ್ ಬ್ಲಾಸ್ಟ್ ಆಗಿಬಿಟ್ಟರೆ ಎಂದು ಆತಂಕಕ್ಕೆ ಒಳಗಾದ ಪ್ರೇಮ್ ಸಿಂಗ್, ಸುಮಾರು 15 ನಿಮಿಷಗಳ ಕಾಲ ರೂಫ್‌ಟಾಪ್‌ನ ಎಲ್ಲಾ ಕಡೆ ಓಡಾಡಿದ್ದಾನೆ. ಕೊನೆಗೆ ಬೆಂಕಿ ರೂಫ್ ಟಾಪ್‌ಗೆ ಬಂದು ಸಿಲಿಂಡರ್ ಬ್ಲಾಸ್ಟ್ ಆಗುವ ಭಯಕ್ಕೆ ಕಟ್ಟಡದಿಂದ ಮೇಲಿಂದ ಜಿಗಿದಿದ್ದಾರೆ. ಸದ್ಯ 6ನೇ ಮಹಡಿಯಿಂದ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದು, ಅಪೋಲ್‌ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ