Site icon Vistara News

Fire Accident: ಅಗ್ನಿ ಅವಘಡಕ್ಕೆ ಅಡಿಕೆ ತೋಟ ಭಸ್ಮ; ಎಕರೆಗೂ ಅಧಿಕ ಜಾಗ ಬೆಂಕಿಗಾಹುತಿ, ಲಕ್ಷಾಂತರ ರೂ. ನಷ್ಟ

arecanut plantation gutted in the fire in sirsi

ಶಿರಸಿ: ಶನಿವಾರ (ಮೇ 20) ರಾತ್ರಿ ಆಕಸ್ಮಿಕವಾಗಿ ಬಿದ್ದ ಬೆಂಕಿಗೆ (Fire Accident) ಎಕರೆಗೂ ಅಧಿಕ ವಿಸ್ತೀರ್ಣದ ಅಡಿಕೆ ತೋಟ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಾಲೂಕಿನ ಹೆಗಡೆಕಟ್ಟ ಪಂಚಲಿಂಗ ಪಕ್ಕದ ಮುಂಡಗೆಮನೆಯಲ್ಲಿ ನಡೆದಿದೆ.

ಇಲ್ಲಿನ ನಾಲ್ವರು ರೈತರಿಗೆ ಸಂಬಂಧಿಸಿದ ಅಡಿಕೆ ತೋಟ ಅಗ್ನಿಗೆ ಬಲಿಯಾಗಿದ್ದು, ಮುಂದೇನು ಎಂಬ ಚಿಂತೆ‌ ಕಾಡಿದೆ. ಶಿರಸಿ ತಾಲೂಕಿನಲ್ಲೇ ಕಳೆದ ಒಂದು ತಿಂಗಳುಗಳ ಈಚೆಗೆ ಕಲಕೈ, ಅಮಚಿಮನೆ ತೋಟಗಳು ಸುಟ್ಟ ವರದಿಯ ಬೆನ್ನಲ್ಲೇ ಮುಂಡಿಗೆಮನೆ ತೋಟದ ಸರಕೆ ಬೆಂಕಿ ಬಿದ್ದಿದೆ. ತಡ ರಾತ್ರಿ 2 ಗಂಟೆ ಸುಮಾರಿಗೆ‌ ಬೆಂಕಿ ತಗುಲಿದ್ದು, ಇದು ಹೇಗೆ ಸಂಭವಿಸಿದೆ ಎಂಬುದೇ ತಿಳಿಯದಾಗಿದೆ ಎನ್ನಲಾಗಿದೆ. ಅಲ್ಲದೆ, ಬೆಂಕಿ ಬಿದ್ದಿರುವುದು ಮುಂಡಗೆಮನೆಯಲ್ಲಿನವರಿಗೆ ತಿಳಿದಿಲ್ಲ ಎನ್ನಲಾಗಿದ್ದು, ಪಕ್ಕದ ಹಳ್ಳಿಯವರೊಬ್ಬರಿಗೆ ಬೆಂಕಿ‌ ಬೆಳಕು ಕಂಡು ಸ್ಥಳಕ್ಕೆ ಬಂದು‌ ಮಾಹಿತಿ ತಿಳಿಸಿದ್ದಾರೆ. ಬಳಿಕ ಬೆಂಕಿ ನಂದಿಸಲು ಎಲ್ಲರೂ ಹೋಗಿದ್ದಾರೆ. ಆದರೆ, ಅಷ್ಟರಲ್ಲಿ ಬೆಳೆಗಳು ಸುಟ್ಟು ಕರಕಲಾಗಿವೆ.

ಅಗ್ನಿ ಅವಘಡಕ್ಕೆ ತೋಟ ನಾಶವಾಗಿರುವುದು

ಬಹು ಬೆಳೆಗೂ ಹಾನಿ

ಮುಂಡಗೆಮನೆ ತೋಟ ಬಹು ಬೆಳೆಯ ಸಮೃದ್ಧ ತೋಟವಾಗಿದ್ದು ಈಗ ಬಾಳೆ, ಏಲಕ್ಕಿ, ಕಾಳು ಮೆಣಸು, ಅಡಿಕೆ ಸೇರಿದಂತೆ‌ ಬಹು ಬೆಳೆಗೂ ಹಾನಿಯಾಗಿದೆ. ಬೇಸಿಗೆಯ ಕಾಲದಲ್ಲಿ ಭೂಮಿ ಕಾಯಬಾರದು, ಮಳೆಗಾಲದಲ್ಲಿ ಮೇಲ್ಮಣ್ಣು ತೊಯ್ಯಬಾರದು ಎಂದು ಹಾಕಲಾದ ದಪ್ಪನೆಯ ಕರಡ, ದರಕುಗಳಿಗೆ ಅಗ್ನಿ ತಗುಲಿ ಸಂಪೂರ್ಣ ಸುಟ್ಟು ಹೋಗಿದೆ. ಗೋಪಾಲಕೃಷ್ಣ ಹೆಗಡೆ ಸಹೋದರರಿಗೆ ಸಂಬಂಧಿಸಿದ ಸುಮಾರು ‌ಎಂಟು ಬಣ್ಣದ ಸುಮಾರು‌ ಅರ್ಧ ಎಕರೆಗೂ ಅಧಿಕ ತೋಟ, ಮಧುಕೇಶ್ವರ ಹೆಗಡೆ ಅವರಿಗೆ ಸಂಬಂಧಿಸಿದ‌ 15 ಗುಂಟೆ ತೋಟ, ಈಶ್ವರ ಹೆಗಡೆ ಕೊರಟಿಬೈಲಿನ ಹಾಗೂ ತಿಮ್ಮಾಣಿ ದೀಕ್ಷಿತರಿಗೆ ಸಂಬಂಧಿಸಿದ ಎಂಟು, ಹತ್ತು ಗುಂಟೆ ತೋಟ ಹಾನಿಯಾಗಿದೆ. ರಾತ್ರಿ ಸುದ್ದಿ ತಿಳಿದ ಗ್ರಾಮಸ್ಥರು ಆಗಮಿಸಿ ಬೆಂಕಿ ಆರಿಸಲು ಬೆಳಗಿನ ತನಕ‌ ಶ್ರಮಿಸಿದರು.

ಇದನ್ನೂ ಓದಿ: Bengaluru Rain : ಅಂಡರ್‌ಪಾಸ್‌ ದುರಂತಕ್ಕೆ ಎಚ್‌ಡಿಕೆ ಆಕ್ರೋಶ; ಮಳೆ ಬಂದರೆ ಸಾವೇ ಗತಿಯಾ?

ಒಂದು ಅಡಿಕೆ ತೋಟಕ್ಕೆ ಹಾನಿ‌ ಎಂದರೆ ಈ ವರ್ಷದ ಬೆಳೆ ಜತೆ ಆರೆಂಟು ವರ್ಷದ ಬೆಳೆ‌ ಕೂಡ‌ ಸಿಗಂದತೆ ಆಗಲಿದೆ. ಬೆಳೆಯ ಮರು‌ ನಾಟಿ ಕೂಡ ವೆಚ್ಚದಾಯಕ ಆಗಲಿದೆ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ.

Exit mobile version