Site icon Vistara News

Yuva Rajkumar: ಅಭಿಮಾನಿಗಳಿಂದ ʼಯುವʼ ಚಿತ್ರದ ಮೊದಲ ಸಾಂಗ್‌ ರಿಲೀಸ್‌; ಮಾಸ್ ಲುಕ್‌ನಲ್ಲಿ ಯುವ ರಾಜಕುಮಾರ್

Yuva Movie song

ಚಾಮರಾಜನಗರ: ಚಾಮರಾಜನಗರ ಚಾಮರಾಜೇಶ್ವರ ದೇಗುಲದ ಆವರಣದಲ್ಲಿ ನಟ ಯುವ ರಾಜಕುಮಾರ್ ಅಭಿನಯದ ಚೊಚ್ಚಲ ಚಿತ್ರ ʼಯುವʼ (Yuva Movie) ಸಿನಿಮಾದ ಮೊದಲ ಸಾಂಗ್‌ “ಒಬ್ಬನೇ ಶಿವ ಒಬ್ಬನೇ ಯುವ” ಶನಿವಾರ ಸಂಜೆ ಬಿಡುಗಡೆಯಾಯಿತು. ರಾಜ್ ಕುಟುಂಬದ ಅಭಿಮಾನಿಗಳಿಂದ ಯುವ ಚಿತ್ರದ ಆಡಿಯೋ ಲಾಂಚ್ ಮಾಡಿಸಲಾಗಿದ್ದು, ಹಾಡಿನಲ್ಲಿ ವರನಟ ಡಾ. ರಾಜಕುಮಾರ್‌ ಅವರ​ ಮೊಮ್ಮಗನ ಮಾಸ್ ಅವತಾರ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ.

ಸಾಂಗ್ ಬಿಡುಗಡೆಗೆ ಯುವರಾಜ್ ಕುಮಾರ್ ಅವರು ವೇದಿಕೆ ಏರುತ್ತಿದ್ದಂತೆ ಅಭಿಮಾನಿಗಳು ಜೈಕಾರ ಕೂಗಿ ಸಂಭ್ರಮಿಸಿದರು, ಅಭಿಮಾನಿಗಳ ಜೋಶ್ ಕಂಡು ಯುವರಾಜ್ ಫುಲ್ ಖುಷಿಯಾದರು. ಚಾಮರಾಜನಗರ ಜಿಲ್ಲೆಯ ಐದು ತಾಲೂಕಿನ ಐವರು ವ್ಯಕ್ತಿಗಳಿಂದ ಹಾಡನ್ನು ಬಿಡುಗಡೆ ಮಾಡಿಸಲಾಯಿತು. ಅಣ್ಣಾವ್ರು ಹಾಗೂ ಅಣ್ಣಾವ್ರ ಕುಟುಂಬಸ್ಥರು ನಟಿಸಿರುವ ಚಿತ್ರಗಳನ್ನು ಎಲ್ಲಾ ವಯೋಮಾನದವರು ವೀಕ್ಷಿಸುತ್ತಾರೆ ಎಂಬ ಕಾರಣದಿಂದ ಮಕ್ಕಳು, ಮಧ್ಯ ವಯಸ್ಕರು ಹಾಗೂ ವೃದ್ಧೆ ಮೂಲಕ ಸಾಂಗ್‌ ರಿಲೀಸ್‌ ಮಾಡಿಸಲಾಯಿತು.

ದೊಡ್ಮನೆಗೆ ಚಾಮರಾಜನಗರ ತವರು. ಹೀಗಾಗಿ ಇಲ್ಲಿಂದಲೇ ಮೊದಲ ಸಾಂಗ್ ರಿಲೀಸ್ ಮಾಡುತ್ತಿದ್ದೇವೆ ಎಂದು ನಿರ್ದೇಶಕ ಆನಂದ್ ಸಂತೋಷ್ ರಾಮ್ ಹೇಳಿದರು. ಇನ್ನು ಕಾರ್ಯಕ್ರಮದಲ್ಲಿ ಯುವ ರಾಜಕುಮಾರ್ ಜತೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಹೀಗಾಗಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಈ ವೇಳೆ ಮಾತನಾಡಿದ ಯುವರಾಜ್‌ ಕುಮಾರ್‌ ಅವರು, ಚಾಮರಾಜನಗರದ ಜನರನ್ನು ನೋಡಿ ನನಗೆ ಮಾತೇ ಬರುತ್ತಿಲ್ಲ. ಇಷ್ಟೆಲ್ಲಾ ಪ್ರೀತಿ ಕೊಟ್ಟರೆ ನಾನು ಏನು ಮಾಡಲಿ. ಐವತ್ತು ವರ್ಷದಿಂದ ನಮಗೆ ಪ್ರೀತಿ ಕೊಟ್ಟಿದ್ದೀರಿ. ಚಾಮರಾಜನಗರ ನಮ್ಮ ಕಲಾ ಕ್ಷೇತ್ರವಾಗಿದೆ. ನನ್ನ ಹೆಜ್ಜೆ ಇಲ್ಲಿಂದಲೇ ಶುರುವಾಗಬೇಕು ಎಂಬುವುದು ನನ್ನ ಆಸೆ, ನಿಮ್ಮ ಆಶೀರ್ವಾದಕ್ಕೆ ನಾನು ಕಷ್ಟ ಪಡುತ್ತೇನೆ ಎಂದರು.

ನಮ್ಮ ಇಡೀ ಕುಟುಂಬದವರನ್ನು ನಾನು ನಿಮ್ಮಲ್ಲಿ ನೋಡುತ್ತೇನೆ ಎಂದು ಅಭಿಮಾನಿಗಳ ಜತೆ ಅಪ್ಪು ಅಪ್ಪು ಕೂಗಿದ ಯುವ ಅವರು, ನನ್ನ ಹೃದಯ ಅಪ್ಪು ಅಪ್ಪು ಎಂದು ಬಡಿದುಕೊಳ್ಳುತ್ತಿದೆ. ನನ್ನನ್ನು ಈ ಊರಿನ ಮಗ ಎಂದುಕೊಂಡು ಬೆಳೆಸಿ ಎಂದು ಮನವಿ ಮಾಡಿದರು.

ದೊಡ್ಮನೆಯ ದೊರೆ ನೆನೆದು ಗಾಯಕ ನವೀನ್ ಸಜ್ಜು ಭಾವುಕ

ವೇದಿಕೆಯ ಮೇಲೆ ಅಪ್ಪು ಅಜರಾಮರ ಹಾಡನ್ನು ಹಾಡಿ ಪವರ್ ಸ್ಟಾರ್ ಅವರನ್ನು ನೆನೆದ ಗಾಯಕ ನವೀನ್ ಸಜ್ಜು ಭಾವುಕರಾಗಿದ್ದು ಕಂಡುಬಂತು. ವೇದಿಕೆ ಮೇಲೆ ಒಂದೆಡೆ ಅಜರಾಮರ ಹಾಡು ಮೊಳಗಿದರೆ, ಮತ್ತೊಂದೆಡೆ ಕಲಾವಿದ ಪುನೀತ್ ಕುಂಚದಲ್ಲಿ ಅಪ್ಪು ಚಿತ್ರ ಮೂಡಿಬಂತು. ಅಪ್ಪು ಅಜರಾಮರ ಹಾಡಿಗೆ ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು, ದನಿಗೂಡಿಸಿದರು. ಹಾಡು ಮುಗಿಯುತ್ತಿದ್ದಂತೆ ಆಸನದಿಂದ ಎದ್ದು ನಿಂತು ಗೌರವ ಸಲ್ಲಿಸಿದರು.

ಈ ಸಿನಿಮಾಗೆ ‘ಹೊಂಬಾಳೆ ಫಿಲ್ಮ್ಸ್​’ (Hombale Films) ಸಂಸ್ಥೆ ಬಂಡವಾಳ ಹೂಡಿದ್ದು, ಖ್ಯಾತ ನಿರ್ದೇಶಕ ಸಂತೋಷ್ ಆನಂದ್​ರಾಮ್ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಚಿತ್ರದಲ್ಲಿ ಸಪ್ತಮಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಯುವ-ಸಪ್ತಮಿ ಗೌಡ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳುತ್ತಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ.

ಇದನ್ನೂ ಓದಿ | Mahesh Babu: ಮಹೇಶ್ ಬಾಬು-ರಾಜಮೌಳಿ ಸಿನಿಮಾ ಮುಹೂರ್ತ ಎಲ್ಲಿ? ಯಾವಾಗ?

ಫಸ್ಟ್ ಸಾಂಗ್‌ಗೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸಾಹಿತ್ಯ ಬರೆದಿದ್ದಾರೆ. ನಕಾಶ್ ಅಜೀಜ್ ಜತೆ ಸೇರಿ ಸಂತೋಷ್ ಆನಂದ್ ರಾಮ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಡಿದ್ದಾರೆ. ಮೋಹನ್ ಭಜರಂಗಿ ಸಾಂಗ್ ಕೊರಿಯೋಗ್ರಫಿ ಮಾಡಿದ್ದಾರೆ. ಅಂದಾಜು 3 ಕೋಟಿ ರೂ. ಮೊತ್ತಕ್ಕೆ ‘ಯುವ’ ಆಡಿಯೊ ರೈಟ್ಸ್ ಆನಂದ್ ಆಡಿಯೊ ಪಾಲಾಗಿದೆ ಎನ್ನಲಾಗಿದೆ.

Exit mobile version