Site icon Vistara News

KEA: ಕೆಇಎಯಿಂದ ಮೊದಲ ಬಾರಿ ಯಶಸ್ವಿ ವೆಬ್‌ಕಾಸ್ಟಿಂಗ್; 37 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಡಿಸಿಇಟಿ

First time successful experimental webcasting by KEA DCET held at 37 examination centers

ಬೆಂಗಳೂರು: ಡಿಪ್ಲೊಮಾ ಪಾಸಾದವರಿಗೆ ಎಂಜಿನಿಯರಿಂಗ್ 3ನೇ ಸೆಮಿಸ್ಟರ್‌ಗೆ ನೇರ ಪ್ರವೇಶ ಅರ್ಹತೆ ನಿರ್ಧರಿಸಲು ಶನಿವಾರ ಡಿಸಿಇಟಿ-24 ಪರೀಕ್ಷೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) (KEA) ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಪ್ರಾಯೋಗಿಕ ವೆಬ್‌ಕಾಸ್ಟಿಂಗ್ ನೆರವಿನಿಂದ ಯಶಸ್ವಿಯಾಗಿ ನಡೆಯಿತು.

ಬೆಂಗಳೂರು ಸೇರಿದಂತೆ 12 ಜಿಲ್ಲೆಗಳ 37 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಮಧ್ಯಾಹ್ನ 2 ರಿಂದ 5ರವರೆಗೆ ನಡೆಯಿತು. ಪರೀಕ್ಷೆ ತೆಗೆದುಕೊಂಡಿದ್ದ ಒಟ್ಟು 18,215 ವಿದ್ಯಾರ್ಥಿಗಳ ಪೈಕಿ ಶೇ.96 ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು. ವೆಬ್ ಕ್ಯಾಸ್ಟಿಂಗ್ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಮ್ಮ ಕಚೇರಿಯಿಂದಲೇ ನಡೆಸಿದರು.

ಇದೇ ಮೊದಲ ಸಲ ಪ್ರಾಯೋಗಿಕವಾಗಿ ನಡೆದ ವೆಬ್‌ಕಾಸ್ಟಿಂಗ್, ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರ ಕೊಠಡಿಯಲ್ಲಿ ನಡೆಯುವ ಪ್ರಕ್ರಿಯೆಗೆ ಸೀಮಿತವಾಗಿತ್ತು. ಪರೀಕ್ಷಾ ಸಮಯಕ್ಕಿಂತ ಮುಂಚೆ ಆಯಾ ಜಿಲ್ಲಾ ಖಜಾನೆಗಳಿಂದ ಬರುವ ಪ್ರಶ್ನೆಪತ್ರಿಕೆಗಳ ಮತ್ತು ಒಎಂಆರ್ ಷೀಟುಗಳ ಬಂಡಲ್‌ಗಳನ್ನು ತಕ್ಷಣವೇ ಪ್ರಾಂಶುಪಾಲರ ಕೊಠಡಿಯ ಕಪಾಟಿನಲ್ಲಿ ಸೀಲ್ ಮಾಡಿ ಇಡಬೇಕೆಂಬುದು ನಿಯಮ. ಇದನ್ನು ಯಾವುದೇ ಕಾರಣಕ್ಕೂ ಪರೀಕ್ಷೆ ಆರಂಭವಾಗುವ 20 ನಿಮಿಷಕ್ಕಿಂತ ಮುಂಚೆ ಹೊರಕ್ಕೆ ತೆಗೆಯಬಾರದು. ಇದರ ಕಡ್ಡಾಯ ಪಾಲನೆಯನ್ನು ಖುದ್ದು ಎಚ್. ಪ್ರಸನ್ನ ಅವರು ಖಾತರಿಪಡಿಸಿಕೊಂಡರು.

ಇದನ್ನೂ ಓದಿ: Job Alert: ಅಂಚೆ ಇಲಾಖೆಯಲ್ಲಿ 50,000ಕ್ಕೂ ಹೆಚ್ಚಿನ ಹುದ್ದೆಗೆ ಅರ್ಜಿ ಆಹ್ವಾನ

ಖಜಾನೆಯಿಂದ ಬಂದ ಬಂಡಲ್ ಅನ್ನು ಬಾಗಲಕೋಟೆಯ ಪರೀಕ್ಷಾ ಕೇಂದ್ರದಲ್ಲಿ ಪ್ರಾಂಶುಪಾಲರು ಮೇಜಿನ ಮೇಲೆ ಇರಿಸಿಕೊಂಡು ಕುಳಿತಿರುವುದನ್ನು ಗಮನಿಸಿದ ಪ್ರಸನ್ನ ಅವರು, ಅದನ್ನು 1.40 ರವರೆಗೆ ಕಪಾಟಿನ ಒಳಗೆ ಇರುವಂತೆ ಸೂಚಿಸಿದರು. ಇದೇ ರೀತಿ ಸಣ್ಣಪುಟ್ಟ ದೋಷಗಳನ್ನು ಪಟ್ಟಿ ಮಾಡಿ ಅವುಗಳನ್ನು ಸರಿಪಡಿಸುವ ಕೆಲಸ ನಡೆಯಿತು. ಎಲ್ಲಿಯೂ ಅಕ್ರಮಗಳಿಗೆ ಅವಕಾಶ ಇಲ್ಲದಂತೆ‌ ಯಶಸ್ವಿಯಾಗಿ ನಡೆಯಿತು. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಕೊಠಡಿ ಮೇಲ್ವಿಚಾರಕರು ತಂದು ಕೊಡುವ ವ್ಯವಸ್ಥೆ ಮೇಲೂ ನಿಗಾ ವಹಿಸಲಾಯಿತು.

ಯಾವುದೇ ರೀತಿಯ ಪರೀಕ್ಷಾ ಅಕ್ರಮಗಳಿಗೆ ಅವಕಾಶ ಆಗಬಾರದೆಂಬ ನಿಟ್ಟಿನಲ್ಲಿ ಪರೀಕ್ಷಾ ಪ್ರಕ್ರಿಯೆಯನ್ನು ವೆಬ್ ಕ್ಯಾಸ್ಟಿಂಗ್ ನೆರವಿನಿಂದ ವೀಕ್ಷಿಸುವ ವ್ಯವಸ್ಥೆ ಅಳವಡಿಸಿಕೊಳ್ಳಲು ಕೆಇಎ ನಿರ್ಧರಿಸಿದೆ. ಇದರ ಮೊದಲ ಹಂತವಾಗಿ, ಇಂದು ಪ್ರಾಂಶುಪಾಲರ ಕೊಠಡಿಯ ಪ್ರಕ್ರಿಯೆಯ ವೆಬ್ ಕ್ಯಾಸ್ಟಿಂಗ್ ಯಶಸ್ವಿಯಾಗಿ ನಡೆದಿದೆ. ಮುಂಬರುವ ದಿನಗಳಲ್ಲಿ ಪರೀಕ್ಷಾ ಕೊಠಡಿಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವ ಪ್ರಕ್ರಿಯೆಯನ್ನೂ ವೆಬ್ ಕ್ಯಾಸ್ಟಿಂಗ್ ಗೆ ಒಳಪಡಿಸಿ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಲಾಗುವುದು ಎಂದು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೆಇಎ ಪರೀಕ್ಷಾ ವಿಭಾಗದ ಜಂಟಿ ನಿಯಂತ್ರಕ ಮಂಜುನಾಥ ಇದ್ದರು.

ಇದನ್ನೂ ಓದಿ: Karnataka Weather : ವೀಕೆಂಡ್‌ ಪ್ರಿಯರೇ ಎಚ್ಚರ; ಭಾನುವಾರ ಸುರಿಯಲಿದೆ ಮಳೆ ಧಾರಾಕಾರ

Exit mobile version