ತೆಂಕು ತಿಟ್ಟು ಯಕ್ಷಗಾನದ ತವರೂರು ಮಧೂರು. ಅಂಥದ್ದೊಂದು ಸುಂದರವಾದ ಪರಿಸರದಲ್ಲೇ ಹುಟ್ಟಿ ಬೆಳೆದ ಲೀಲಾ ಬೈಪಾಡಿತ್ತಾಯರು ಸರಿ ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಮನೆಮಾತಾದವರು. ಸಾಮಾಜಿಕ ಪ್ರೋತ್ಸಾಹವಾಗಲೀ, ಮಾಧ್ಯಮಗಳ ಪ್ರಚಾರವಾಗಲೀ ಇಲ್ಲದ ಕಾಲದಲ್ಲೇ ಅವರು ಬೆಳೆದ ಬಗೆ ಅದ್ಭುತ. ಲೀಲಾ ಅವರ ಕಲಾ ತಪಸ್ಸನ್ನು ರಾಜ್ಯ ಸರಕಾರ ಗುರುತಿಸಿ 2010ನೇ ಕರ್ನಾಟಕದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಅಷ್ಟೇ ಅಲ್ಲದೆ, 2012ರಲ್ಲಿ ಕರ್ನಾಟಕ ಸರಕಾರ ಕೊಡಮಾಡಿದ ಸಾಧಕ ಹಿರಿಯ ನಾಗರಿಕರು ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.
ಬಡತನದಿಂದಾಗಿ ಓದು ಬರಹ ಇರಲಿಲ್ಲ. ಶಾಲೆಗೆ ಹೋಗದೆಯೇ, ಅಣ್ಣನಿಂದ, ಅಕ್ಕ ಪಕ್ಕದವರಿಂದಲೋ ಅಕ್ಷರಾಭ್ಯಾಸ ಮಾಡಿಸಿಕೊಂಡವರು ಅವರು. ಹಿಂದಿ ವಿಶಾರದ ಕೂಡ ಮಾಡಿದ್ದರೆಂಬುದು ಉಲ್ಲೇಖಾರ್ಹ. ಸಂಗೀತ ಕಲಿತಿದ್ದ ಅವರನ್ನು ತೆಂಕುತಿಟ್ಟಿನ ಅಗ್ರಮಾನ್ಯ ಹಿಮ್ಮೇಳ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯರು ಕೈಹಿಡಿದ ಬಳಿಕ, ಯಕ್ಷಗಾನ ಕಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಎಂಬಲ್ಲಿನ ಪರಿಸರ ಅವರ ಯಕ್ಷಗಾನ ಕಲಿಕೆಗೆ ಪೂರಕವಾಗಿತ್ತು. ಮನೆ ಮನೆಯಲ್ಲೂ ವಿಶೇಷ ಕಾರ್ಯಕ್ರಮವಿದ್ದರೆ ಅಲ್ಲೊಂದು ತಾಳಮದ್ದಳೆ ಕೂಟ ಇದ್ದೇ ಇರುತ್ತಿತ್ತು. ಹೀಗೆ ಕಲಿಯುತ್ತಲೇ, ಹೆಣ್ಣು ಮಕ್ಕಳಿಗೆ ಯಕ್ಷಗಾನ ನೋಡುವುದಕ್ಕೂ ಅವಕಾಶವಿಲ್ಲದ ಸಂಪ್ರದಾಯವಿದ್ದ ಆ ಕಾಲದಲ್ಲಿ ತೆಂಕು ತಿಟ್ಟಿನ ಅಗ್ರಮಾನ್ಯ ಭಾಗವತರಲ್ಲೊಬ್ಬರಾಗಿ ಅವರು ಬೆಳೆದದ್ದು ಇತಿಹಾಸ. ಪರಿಣಾಮ ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಪಟ್ಟ. ಪತಿಯೊಂದಿಗೆ ಅಂದಿನ ಸುಬ್ರಹ್ಮಣ್ಯ, ಪುತ್ತೂರು, ಕದ್ರಿ, ಕರ್ನಾಟಕ, ಅರುವ (ಅಳದಂಗಡಿ), ಕುಂಬಳೆ ಬಪ್ಪನಾಡು ಮೇಳ, ಕುಂಬಳೆ, ತಲಕಳ ಮುಂತಾದ ಡೇರೆ-ಬಯಲಾಟ ಮೇಳಗಳಲ್ಲಿ ನಿರಂತರ ಇಪ್ಪತ್ತು ವರ್ಷಗಳ ಕಾಲ ವೃತ್ತಿ ಕಲಾವಿದರಾಗಿಯೂ 17ಕ್ಕೂ ಹೆಚ್ಚು ವರ್ಷಗಳಿಂದ ಅತಿಥಿ ಕಲಾವಿದರಾಗಿಯೂ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ್ದಾರೆ.
ಯಕ್ಷಗಾನ ಲೋಕದಲ್ಲಿ ಬೆಳಗಿ ಕಲೆಯನ್ನೂ ಬೆಳೆಸಿದ ಕೀರ್ತಿವಂತರಾದ ಶೇಣಿ ಗೋಪಾಲಕೃಷ್ಣ ಭಟ್, ಬಣ್ಣದ ಮಾಲಿಂಗ,ಹೊಸಹಿತ್ಲು ಮಹಾಲಿಂಗ ಭಟ್, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗ್ಡೆ, ಅಳಿಕೆ ರಾಮಯ್ಯ ರೈ, ಕೆ.ಗೋವಿಂದ ಭಟ್, ಪುತ್ತೂರು ಕೃಷ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಶಂಕರನಾರಾಯಣ ಸಾಮಗರು, ರಾಮದಾಸ ಸಾಮಗರು, ಎಂ.ಎಲ್.ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್, ಪ್ರಭಾಕರ ಜೋಷಿ ಮುಂತಾದ ಯಕ್ಷಲೋಕದ ಘಟಾನುಘಟಿ ದಿಗ್ಗಜರನ್ನು ತಾಳಮದ್ದಳೆಯಲ್ಲಿ, ಯಕ್ಷಗಾನ ಪ್ರದರ್ಶನಗಳಲ್ಲಿ ಕುಣಿಸಿದ, ಮಾತನಾಡಿಸಿದ ಅನುಭವ ಪಡೆದುಕೊಂಡ ಲೀಲಾ ಅವರಿಗೆ, ಪ್ರತಿಯೊಂದು ಹೆಜ್ಜೆಯಲ್ಲಿಯೂ ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸುತ್ತಲೇ ಬಂದವರು ಪತಿ ಹರಿನಾರಾಯಣರು.
ಬಲಿಪ ನಾರಾಯಣ ಭಾಗವತರು, ದಾಮೋದರ ಮಂಡೆಚ್ಚರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಬಲ್ಲಾಳರು, ದಿವಾಣ ಭೀಮ ಭಟ್, ಅಡೂರು ವೆಂಕಟ ಮದ್ಲೆಗಾರರು ಮುಂತಾದ ಅಗ್ರಗಣ್ಯ ಹಿಮ್ಮೇಳ ಕಲಾವಿದರ ಸಲಹೆ, ಮಾರ್ಗದರ್ಶನಗಳು ಅವರನ್ನು ಪ್ರಬುದ್ಧ ಕಲಾವಿದೆಯಾಗಿ ರೂಪಿಸಿದವು.
ಗಂಡು ಮೆಟ್ಟಿನ ಕಲೆಯಲ್ಲಿ ಅದರಲ್ಲೂ ವೀರರಸ ಪ್ರಧಾನ ಸನ್ನಿವೇಶಗಳಲ್ಲಿ ಹೆಣ್ಣು ಕಂಠವನ್ನು ಮೆರೆಸಿ, ಯಕ್ಷಗಾನ ಕಲೆಯತ್ತ ಮಹಿಳೆಯರೂ ಆಕರ್ಷಿತರಾಗುವಂತೆ ಮೇಲ್ಪಂಕ್ತಿ ಹಾಕಿಕೊಟ್ಟವರು ಅವರು. ರಾತ್ರಿಯಿಡೀ ನಿದ್ದೆಗೆಟ್ಟು ಊರಿಂದೂರಿಗೆ ಮೇಳವು ಹೋದಲ್ಲೆಲ್ಲಾ ತಿರುಗಾಟ ಮಾಡಿದ್ದಷ್ಟೇ ಅಲ್ಲದೆ, ರಾತ್ರಿಯಿಡೀ ನಿದ್ದೆ ಬಿಟ್ಟು ಬೆಳಗ್ಗಿನವರೆಗಿನ ಇಡೀ ಪ್ರಸಂಗವನ್ನು ಆಡಿಸಿದ ಕೀರ್ತಿಯೂ ಇದೆ. ಶಾಲೆಗೆ ಹೋಗದೆಯೂ ಭಾಗವತಿಕೆಯಲ್ಲಿ ವ್ಯಕ್ತವಾಗುವ ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ ಇವರ ಹೆಗ್ಗಳಿಕೆ. ಬಡಗುತಿಟ್ಟಿನಲ್ಲಿ ತಮ್ಮ ಛಾಪು ಬೀರಿ ನಂದಿದ ನಂದಾದೀಪ ಕಾಳಿಂಗ ನಾವಡರ ಜತೆಗೆ ಶೃಂಗೇರಿ ಹಾಗೂ ಮುಂಬಯಿಯಲ್ಲಿ ಹಾಡುತ್ತಾ, ಅವರ ಮೆಚ್ಚುಗೆಗೂ ಪಾತ್ರರಾದವರು ಶ್ರೀಮತಿ ಲೀಲಾ.
ಈ ಸುದ್ದಿಯನ್ನೂ ಓದಿ : Karnataka Rajyotsava: ಬ್ಯಾಂಕ್ ಜನಾರ್ದನ್, ಡಿಂಗ್ರಿ ನಾಗರಾಜ್ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗರಿ
ಯಾವುದೇ ಪ್ರಸಂಗ ಆಡಿಸುವ ಮೊದಲು, ಹಿರಿಯ ಮತ್ತು ಕಿರಿಯ ಕಲಾವಿದರೊಂದಿಗೆ ಚೌಕಿಯಲ್ಲಿ ಮೊದಲೇ ಚರ್ಚಿಸಿ,ಪ್ರದರ್ಶನವೊಂದು ಎಲ್ಲೂ ಲೋಪವಾಗಬಾರದು, ಯಕ್ಷಗಾನದ ಭಾಷೆಯಲ್ಲೇ ಹೇಳುವುದಾದರೆ, ‘ಮೇಲೆ ಬೀಳಬೇಕು’ ಎಂಬ ತುಡಿತದಿಂದ,ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದ ರೀತಿ ಇಂದಿನ ಕಲಾವಿದರಿಗೆ ಸ್ಫೂರ್ತಿ.
ಸದ್ಯಕ್ಕೆ ತಮ್ಮಂತೆ ಇತರ ಮಹಿಳೆಯರೂ ಯಕ್ಷಗಾನ ಕ್ಷೇತ್ರದಲ್ಲಿ ಮುಂದೆ ಬರಬೇಕೆಂದು ಪ್ರೋತ್ಸಾಹಿಸುತ್ತಾ, ಆಸಕ್ತಿಯಿಂದ ಬಂದವರಿಗೆ ಯಕ್ಷಗಾನದ ಪಾಠವನ್ನೂ, ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠವನ್ನೂ ಮಾಡಿದ್ದಾರೆ. ಅಲ್ಲದೆ ಪತಿಯೊಂದಿಗೆ ಧರ್ಮಸ್ಥಳದ ಪ್ರಖ್ಯಾತ ಯಕ್ಷಗಾನ ತರಬೇತಿ ಕೇಂದ್ರದಲ್ಲಿ 10 ವರ್ಷ ಹಾಗೂ ಈಗ ಕಟೀಲು, ಮೂಡುಬಿದಿರೆ, ಬಜಪೆ ಮುಂತಾದೆಡೆ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.
ಲೀಲಾವತಿ ಬೈಪಾಡಿತ್ತಾಯ ವಿವರ
- ಜನನ: 23 ಮೇ 1947
- ಹುಟ್ಟೂರು: ಕಾಸರಗೋಡಿನ ಮಧೂರು
- ಪತಿ: ಕೆ.ಹರಿನಾರಾಯಣ ಬೈಪಾಡಿತ್ತಾಯ
- ಹೆತ್ತವರು: ಪುಂಡರೀಕಾಕ್ಷ ಹೆಬ್ಬಾರ್, ಮಹಾಲಕ್ಷ್ಮಿ ಅಮ್ಮ
- ವಿದ್ಯಾಭ್ಯಾಸ: ಬಲ್ಲವರಿಂದ ಕೇಳಿಯೇ ಅಕ್ಷರಾಭ್ಯಾಸ, ಹಿಂದಿ ವಿಶಾರದಾ
- ಶಾಸ್ತ್ರೀಯ ಸಂಗೀತ ತರಬೇತಿ: 7 ವರ್ಷ, ಮಧೂರು ಪದ್ಮನಾಭ ಸರಳಾಯರಲ್ಲಿ.
- ಯಕ್ಷಗಾನ ರಂಗಾನುಭವ: 1972ರಿಂದೀಚೆಗೆ, 40 ಕ್ಕೂ ಹೆಚ್ಚು ವರ್ಷಗಳು
- ವಿಳಾಸ: “ಕಲಾನುಗ್ರಹ”, ತಲಕಳ ದೇವಸ್ಥಾನದ ಬಳಿ, ಅಂಚೆ ಕೊಳಂಬೆ, ಬಜ್ಪೆ (ವಯಾ), ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ – 574189
- ಸಂಪರ್ಕ: 9986266991
ಪ್ರಶಸ್ತಿಗಳು: ಕರ್ನಾಟಕ ಸರಕಾರದ ಸಾಧಕ ಹಿರಿಯ ನಾಗರಿಕ ಪ್ರಶಸ್ತಿ 2012, ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ 2010, ಮಂಗಳೂರು ವಿವಿ ಯಕ್ಷ ಮಂಗಳಾ ಪ್ರಶಸ್ತಿ 2015, ಆಳ್ವಾಸ್ ನುಡಿಸಿರಿ ಸಾಧಕ ಪ್ರಶಸ್ತಿ 2015, ಉಳ್ಳಾಲ ರಾಣಿ ಅಬ್ಬಕ್ಕ ಪ್ರಶಸ್ತಿ, ಕರಾವಳಿ ಲೇಖಕ, ವಾಚಕಿಯರ ಸಂಘ, ಅಗರಿ ಪ್ರಶಸ್ತಿ, ಉಡುಪಿಯ ಪೇಜಾವರ ಮಠದ ಪ್ರಶಸ್ತಿ ಹಾಗೂ ಇತರ ನೂರಾರು ಸನ್ಮಾನ, ಗೌರವಗಳು