ಕಾರವಾರ: ಹೊನ್ನಾವರದ ಕಾಸರಕೋಡು ಬಳಿ ಖಾಸಗಿ ಬಂದರು ವಿರೋಧಿಸಿ ಮೀನುಗಾರರು ನಡೆಸುತ್ತಿದ್ದ ಪ್ರತಿಭಟನೆ ನಿಯಂತ್ರಿಸಲು ಬುಧವಾರ ಸಂಜೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಮೀನುಗಾರಿಕಾ ಬಂದರು ಬಳಿ ಪೊಲೀಸರು ಮತ್ತು ಮೀನುಗಾರರ ನಡುವೆ ಜಟಾಪಟಿ (Fishermen Protest) ನಡೆದಿದ್ದು, ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಹೊನ್ನಾವರದ ಕಾಸರಕೋಡು ಬಳಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ವಾಣಿಜ್ಯ ಬಂದರಿಗೆ ಮೀನುಗಾರರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ನಡುವೆ ಬಂದರು ಸಂಪರ್ಕಕ್ಕೆ ಚತುಷ್ಪಥ ರಸ್ತೆ ನಿರ್ಮಿಸಲು ಸರ್ವೆಗೆ ಅಧಿಕಾರಿಗಳು ಮುಂದಾಗಿದ್ದರು. ರಸ್ತೆ ನಿರ್ಮಾಣದಿಂದ ಮನೆ ಕಳೆದುಕೊಳ್ಳುವ ಭೀತಿಯಿಂದ ಮೀನುಗಾರರು ಅಧಿಕಾರಿಗಳ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ ನಡೆದಿದೆ.
ಇದನ್ನೂ ಓದಿ | Bhatkal News: ಭಟ್ಕಳ ಭಗವಾಧ್ವಜ ತೆರವಿನಲ್ಲಿ ಉಸ್ತುವಾರಿ ಸಚಿವರ ಕೈವಾಡ: ಹರಿಪ್ರಕಾಶ್ ಕೋಣೆಮನೆ ಆರೋಪ
ಎಎಸ್‌ಪಿ ಸಿ.ಟಿ.ಜಯಕುಮಾರ ಸ್ಥಳಕ್ಕೆ ಧಾವಿಸಿದರೂ ಪ್ರತಿಭಟನೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ 200ಕ್ಕೂ ಅಧಿಕ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇದರಿಂದ ಹಲವರಿಗೆ ಗಾಯಗಳಾಗಿದ್ದು, ಜೀವ ಬಿಟ್ಟೇವು, ಆದರೆ ಮನೆ ಬಿಡಲಾರೆವು ಎಂದು ಮೀನುಗಾರರ ಪಟ್ಟು ಹಿಡಿದಿದ್ದಾರೆ.