| ಶಶಿಧರ ಮೇಟಿ, ಬಳ್ಳಾರಿ
ರಾಜ್ಯದಲ್ಲಿ ಕಬ್ಬಿಣದ ಅದಿರು ಉತ್ಪಾದನೆ ಮತ್ತಷ್ಟು ವೃದ್ಧಿಯಾಗಲಿದೆ. ರಾಜ್ಯದಲ್ಲಿ ಅವಧಿ ಮೀರಿದ ಮತ್ತು ರದ್ದಾಗಿದ್ದ ಗಣಿ ಗುತ್ತಿಗೆ ಸೇರಿ ವೈಜ್ಞಾನಿಕ ಗಣಿಗಾರಿಕೆ ಮಾಡಲು ಅಗತ್ಯವಿರುವ ಪ್ರದೇಶ ಸೇರಿ ಐದು ಹೊಸ ಗಣಿ ಗುತ್ತಿಗೆಗಳನ್ನು ರಚಿಸಿ ಇ-ಹರಾಜು ಪ್ರಕ್ರಿಯೆ (Mining Block Auction) ನಡೆಸಲು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗಿದೆ.
108.62 ಎಂಎಂಟಿ ಅದಿರು ನಿಕ್ಷೇಪ!
ರಾಜ್ಯದ ಬಳ್ಳಾರಿ ಜಿಲ್ಲೆಯ ಮೂರು, ವಿಜಯನಗರ ಜಿಲ್ಲೆಯ ಒಂದು, ತಮಕೂರು ಜಿಲ್ಲೆಯ ಒಂದು ಗಣಿ ಗುತ್ತಿಗೆ ಸೇರಿ ಐದು ಗಣಿ ಗುತ್ತಿಗೆ ಪ್ರದೇಶದಲ್ಲಿ 108.62 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಅದಿರು ನಿಕ್ಷೇಪ ಇರುವುದನ್ನು ಅಂದಾಜಿಸಲಾಗಿದೆ. ಐದು ಗಣಿ ಗುತ್ತಿಗೆ ಪ್ರದೇಶ ಒಟ್ಟಾರೆ 1231.54 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ.
ಹತ್ತಾರು ಮೈನ್ಸ್ ಸೇರಿ 5 ಗಣಿ ಗುತ್ತಿಗೆ ಅಸ್ತಿತ್ವಕ್ಕೆ
ತುಮಕೂರಿನಲ್ಲಿ ರದ್ದಾಗಿದ್ದ ಮೂರು ಮೈನ್ಸ್ ಪ್ರದೇಶ ಸೇರಿ ಸೋಮನಹಳ್ಳಿ ಬ್ಲಾಕ್ ರಚಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಗುತ್ತಿಗೆ ಅವಧಿ ಮುಗಿದಿರುವ ಎಚ್.ಆರ್.ಗವಿಯಪ್ಪ (ಲಿ.ಸಂ.2483) ಗಣಿ ಗುತ್ತಿಗೆ ಪ್ರದೇಶವನ್ನು ಬ್ಲಾಕ್ ನಂ.4 ಹೆಸರಿನಲ್ಲಿ, ಜಯಸಿಂಗಪುರದಲ್ಲಿರುವ ದಾಲ್ಮೀಯ ಮೈನ್ಸ್ ಸೇರಿ ಗಣಿ ಗುತ್ತಿಗೆ ಮುಗಿದಿರುವ ಐದು ಗುತ್ತಿಗೆ ಪ್ರದೇಶ, ರದ್ದಾಗಿರುವ 4 ಗಣಿ ಗುತ್ತಿಗೆ ಪ್ರದೇಶ ಸೇರಿ ಹೊಸದಾಗಿ ಜಯಸಿಂಗಪುರ ಸೌತ್ ಬ್ಲಾಕ್ ಮತ್ತು ಜಯಸಿಂಗಪುರ ನಾರ್ತ್ ಬ್ಲಾಕ್ ರಚಿಸಿ ಹರಾಜು ಪ್ರಕ್ರಿಯೆ ಆರಂಭಿಸಿದ್ದಾರೆ. ವಿಜಯನಗರ ವ್ಯಾಸನಕೆರಿಯ ಎಂಎಸ್‌ಪಿಎಲ್ ಮತ್ತು ರದ್ದಾಗಿರುವ ಒಂದು ಗಣಿ ಗುತ್ತಿಗೆ ಸೇರಿ ವ್ಯಾಸನಕೆರೆ ಐರನ್ ಓರ್ ಮೈನ್ ಗಣಿ ಗುತ್ತಿಗೆ ಹರಾಜಿಗೆ ಕರೆಯಲಾಗಿದೆ.
ಇದನ್ನೂ ಓದಿ | Prajadhwani Yatre : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೃಷಿ ಕಾಯ್ದೆ ರದ್ದು: ಸಿದ್ದರಾಮಯ್ಯ ಘೋಷಣೆ
ಜ.18ರಿಂದ ಟೆಂಡರ್ ಪ್ರಕ್ರಿಯೆ ಆರಂಭ
ಅಖಂಡ ಬಳ್ಳಾರಿ ಜಿಲ್ಲೆಯ ನಾಲ್ಕು ಗಣಿ ಗುತ್ತಿಗೆಯಲ್ಲಿ ಸರಾಸರಿ 62 ಗ್ರೇಡ್ ಅದಿರು ಮತ್ತು ತುಮಕೂರಿನಲ್ಲಿ 55 ಗ್ರೇಡ್ ನ ಅದಿರು ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಹರಾಜು ಪ್ರಕ್ರಿಯೆ ಜ.18ರಿಂದ ಆರಂಭವಾಗಿದೆ, ಫೆ.23ರಂದು ಕೊನೆಯ ದಿನ ವಾಗಿದೆ. ಟೆಕ್ನಿಕಲ್ ಬಿಡ್ ಗೆ ಫೆ.27ರ ನಿಗದಿ ಮಾಡಲಾಗಿದೆ.
ಅದಿರು ಉತ್ಪಾದನೆಯಲ್ಲಿ ಬಳ್ಳಾರಿ ಸಿಂಹಪಾಲು
ಈವರೆಗೆ ರಾಜ್ಯದಲ್ಲಿ ಸುಮಾರು 45 ಗಣಿ ಗುತ್ತಿಗೆಗಳಿಂದ ವರ್ಷಕ್ಕೆ 35 ಎಂಎಂಟಿ ಅದಿರು ಉತ್ಪಾದನೆ ಮಾಡಲಾಗಿದೆ. ಅಖಂಡ ಬಳ್ಳಾರಿ ಜಿಲ್ಲೆಗೆ 28 ಎಂಎಂಟಿ ನಿಗದಿಯಾದರೆ, ತುಮಕೂರು ಮತ್ತು ಚಿತ್ರದುರ್ಗಕ್ಕೆ 7 ಎಂಎಂಟಿ ನಿಗದಿಯಾಗಿತ್ತು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶದಿಂದ ರಾಜ್ಯದಲ್ಲಿ ಅದಿರು ಉತ್ಪಾದನೆ ಸಾಮರ್ಥ್ಯ 35 ಎಂಎಂಟಿಯಿಂದ 50 ಎಂಎಂಟಿಗೆ ಏರಿಕೆಯಾಗಿದೆ. ಬಳ್ಳಾರಿ ಜಿಲ್ಲೆಯ ಉತ್ಪಾದನೆ ಮಿತಿ 35 ಎಂಎಂಟಿ, ಇತರೆ ಜಿಲ್ಲೆಯಲ್ಲಿ 15 MMT ಉತ್ಪಾದನೆ ನಿಗದಿಯಾಗಿದೆ.
ಇದನ್ನೂ ಓದಿ | Modi In Karnataka : ಕರ್ನಾಟಕದಲ್ಲಿ ಮೋದಿ ಹವಾ: ₹10,800 ಕೋಟಿ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ, ಚಾಲನೆ