Site icon Vistara News

Child death : ಮನೆ ಮುಂದೆ ಆಡುತ್ತಿದ್ದ ಐದು ವರ್ಷದ ಪುಟ್ಟ ಮಗ ನೀರಿನ ಹೊಂಡಕ್ಕೆ ಬಿದ್ದು ಸಾವು

Child death

#image_title

ತುಮಕೂರು: ಮನೆಯ ಮುಂದೆ ಆಟವಾಡುತ್ತಿದ್ದ ಪುಟ್ಟ ಮಗುವೊಂದು ನೀರಿನ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡ (Child death) ದಾರುಣ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ.

ತುಮಕೂರು ತಾಲೂಕಿನ ನೆಲಹಾಳ್‌ ಬಳಿ ಘಟನೆ ನಡೆದಿದ್ದು, ಪುನೀತ್‌ ಎಂಬ ಐದು ವರ್ಷದ ಮಗು ಮೃತಪಟ್ಟಿದೆ. ಸುರೇಶ್-ಅನಿತಾ ದಂಪತಿಯ ಮಗು ಪುನೀತ್ ಮನೆ ಮುಂದೆ ಆಟವಾಡುತ್ತಿತ್ತು. ಮನೆಯ ಮಂದಿಗೆ ಗೊತ್ತೇ ಇಲ್ಲದಂತೆ ನಿಧಾನಕ್ಕೆ ನೀರಿನ ಹೊಂಡದ ಬಳಿ ಹೋಗಿದ್ದ ಮಗು ನೀರಿಗೆ ಬಿದ್ದು ಮೃತಪಟ್ಟಿದೆ. ಕೋರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮನೆಯವರೇ ಶವವನ್ನು ಮೇಲಕ್ಕೆ ಎತ್ತಿದ್ದಾರೆ.

ಇನ್ನೂ ಶಾಲೆಗೆ ಹೋಗಲು ಆರಂಭ ಮಾಡಿದ್ದ ಪುಟ್ಟ ಮಗುವಿನ ಸಾವು ಮನೆ ಮಂದಿಯನ್ನು ಕಂಗೆಡಿಸಿದ್ದು, ಕಣ್ಣೀರು ಧಾರೆಯಾಗಿ ಹರಿಯುತ್ತಿದೆ.

ದೇವರಿಗೆ ನೈವೇದ್ಯ ಕೊಟ್ಟು ಬರುತ್ತಿದ್ದ ಇಬ್ಬರು ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಮೃತ್ಯು

ಚಿಕ್ಕೋಡಿ: ದೇವರಿಗೆ ನೈವೇದ್ಯ ಕೊಟ್ಟು ಬರುತ್ತಿದ್ದ ಇಬ್ಬರು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವಿಗೀಡಾದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನಡೆದಿದೆ.

ಶ್ರೀಧರ್ ಪಾರಿಸ್ ಹೊಸೂರು (15) ಹಾಗೂ ಹರ್ಷಿತಾ ಶೀತಲ ಚಿಪ್ಪಾಡಿ (8) ಮೃತ ಮಕ್ಕಳು. ಯುಗಾದಿ ಹಬ್ಬದ ಪ್ರಯುಕ್ತ ದೇವರ ದರ್ಶನಕ್ಕೆ ಹೋಗಿದ್ದ ಮಕ್ಕಳು ಮರಳಿ ಬರುತ್ತಿದ್ದಾಗ ಪ್ಲೇಟ್ ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ದುರ್ಮರಣಕ್ಕೀಡಾಗಿದ್ದಾರೆ. ಹರ್ಷಿತಾಳನ್ನು ರಕ್ಷಿಸಲು ಹೋಗಿ ಶ್ರೀಧರ್ ಕೂಡಾ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ನಿನ್ನೆ ಸಂಜೆ ನಡೆದ ಈ ಹೃದಯವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ನೀರುಪಾಲು

ನೆಲಮಂಗಲ: ಕೆರೆಯಲ್ಲಿ ಈಜಲು ಹೋಗಿ ವಿದ್ಯಾರ್ಥಿಯೊಬ್ಬ ನೀರುಪಾಲಾದ ಹಾಗೂ ಮತ್ತೊಬ್ಬ ಆಸ್ಪತ್ರೆಗೆ ದಾಖಲಾದ ಘಟನೆ ಬೆಂಗಳೂರು ಉತ್ತರ ತಾಲೂಕಿನಲ್ಲಿ ನಡೆದಿದೆ. ಗಾಣಿಗರಹಳ್ಳಿ ಕೆರೆಯಲ್ಲಿ ಈಜಲು ಹೋದ ಅಬ್ಬಿಗೆರೆ ನಿವಾಸಿ ಅಧಿತ್ (20) ಸಾವಿಗೀಡಾಗಿದ್ದಾನೆ. ದರ್ಶನ್ (20) ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕೆರೆಯ ಬಳಿ ದನ ಮೇಯಿಸುತ್ತಿದ್ದವರು ದರ್ಶನ್‌ನನ್ನು ರಕ್ಷಿಸಿದ್ದಾರೆ. ಸ್ನೇಹಿತರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿಹೋಗಿದ್ದ ಅಧಿತ್. ಇಬ್ಬರೂ ವಿದ್ಯಾರ್ಥಿಗಳು ಡಿಪ್ಲೊಮ ವ್ಯಾಸಂಗ ಮಾಡುತ್ತಿದ್ದರು. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಕಳ್ಳರ ಕೈಚಳಕ!

ರಾಮನಗರ: ರಾಮನಗರ ಜಿಲ್ಲೆ ಮಾಗಡಿ ತಾ. ಸೋಲೂರು ಬಳಿ ಮನೆಯೊಂದರಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೆ ಇದ್ದ ವೇಳೆ ನೋಡಿಕೊಂಡು ನುಗ್ಗಿದ ಅವರು ಸುಮಾರು ನಾಲ್ಕು ಲಕ್ಷ ರೂ. ಮೌಲ್ಯದ ಆಭರಣ ಕಳವು ಮಾಡಿದ್ದಾರೆ.

ಕಳವು ನಡೆದ ಮನೆಯಲ್ಲಿ ಪೊಲೀಸರಿಂದ ತಪಾಸಣೆ

ಹನುಮತರಾಯಪ್ಪ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಅವರು ಹಬ್ಬದ ನಿಮಿತ್ತ ಊರಿಗೆ ಹೋಗಿದ್ದ ಸಮಯದಲ್ಲಿ ಮನೆ ಬಾಗಿಲು ಒಡೆದು ಕಳವು ಮಾಡಲಾಗಿದೆ. ಗುರುವಾರ ಬೆಳಗ್ಗಿನ ಜಾವ ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ. ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Shravanabelagola Swameeji : ಅವರು 2006ರಿಂದಲೂ ಮೊಬೈಲ್‌ ಮುಟ್ಟಿಲ್ಲ, ಫೋನಲ್ಲೂ ಮಾತನಾಡಿಲ್ಲ; 12 ವರ್ಷ ವಾಹನ ಹತ್ತಿಲ್ಲ!

Exit mobile version